ADVERTISEMENT

ಸರ್ಕಾರದ ವೈಫಲ್ಯ ವಿರೋಧಿಸಿ 29ರಂದು ಧರಣಿ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 21:47 IST
Last Updated 25 ಜೂನ್ 2020, 21:47 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ‘ಲಾಕ್‌ ಡೌನ್‌ನಿಂದ ಸಂಕಷ್ಟದಲ್ಲಿರುವವರಿಗೆ ಪರಿಹಾರ ಇನ್ನೂ ತಲುಪಿಲ್ಲ. ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳದಿಂದ ಮತ್ತಷ್ಟು ಹೊರೆ ಬಿದ್ದಿದೆ. ಜನರ ರಕ್ಷಣೆಗೆ ಆಗ್ರಹಿಸಿ ಇದೇ 29ರಂದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ’ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಹೋರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದ್ದು, ಈ ವೇಳೆ ಅಂತರ ಕಾಯ್ದುಕೊಳ್ಳುತ್ತೇವೆ’ ಎಂದರು.

‘ಬಡವರು ತಮ್ಮ ಕಷ್ಟಕ್ಕೆ ನಿವೇಶನ ಮಾರಿದರೆ ಅದಕ್ಕೂ ಜಿಎಸ್‌ಟಿ ಕಟ್ಟಬೇಕಂತೆ. ಇಂಥ ಪದ್ಧತಿ ಎಲ್ಲಿದೆ? ನಿರುದ್ಯೋಗಿಗಳ ಪ್ರಮಾಣ ಹೆಚ್ಚುತ್ತಿದೆ. ಈ ವಿಷಯ ಗಳನ್ನು ಮುಂದಿಟ್ಟು ಧರಣಿ ನಡೆಸುತ್ತೇವೆ’ ಎಂದರು.

ADVERTISEMENT

‘ಕೊರೊನಾ ವಿಚಾರದಲ್ಲಿ ಬಡವರು, ಶ್ರೀಮಂತರು, ಅಧಿಕಾರಿಗಳು, ಸಾಮಾನ್ಯರು ಎಂದು ತಾರತಮ್ಯ ಮಾಡದೆ ಸಮಾನವಾಗಿ ಉಚಿತ ಚಿಕಿತ್ಸೆ ನೀಡಬೇಕು’ ಎಂದು ಆಗ್ರಹಿಸಿದ ಅವರು, ಕೊರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ನಿಗದಿಪಡಿಸಲಾಗಿದೆ. ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಜನ ಹಣ ಎಲ್ಲಿಂದ ತರಬೇಕು. ಸೋಂಕಿತರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಿದ್ದ ಸರ್ಕಾರ, ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡುತ್ತಿದೆ’ ಎಂದು ಟೀಕಿಸಿದರು.

’ಕುಮಾರಕೃಪಾ ಅತಿಥಿಗೃಹದಲ್ಲಿ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳಿಗೆ ವಿಶೇಷ ಚಿಕಿತ್ಸೆ ವ್ಯವಸ್ಥೆ ಮಾಡಿರುವುದು ಸರಿಯಲ್ಲ. ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಾಣಬೇಕು’ ಎಂದರು.

ಹೊಸ ಘಟಕ: ಆಟೊ, ಟ್ಯಾಕ್ಸಿ ಚಾಲಕರ ಸಂಕಷ್ಟಕ್ಕೆ ಧ್ವನಿಯಾಗಲು ಬ್ಲಾಕ್ ಮಟ್ಟದಿಂದ ರಾಜ್ಯಮಟ್ಟದವರೆಗೂ ಪಕ್ಷದಿಂದ ವಿಶೇಷ ಘಟಕ ಆರಂ ಭಿಸಲು ತೀರ್ಮಾನಿಸಿದ್ದೇವೆ. ವೃತ್ತಿಪರ ಚಾಲಕರ ನೇತೃತ್ವದಲ್ಲಿ ಘಟಕ ಸ್ಥಾಪಿಸಲಾಗುವುದು’
ಎಂದರು. ‌

ಹುತಾತ್ಮರಿಗೆ ಗೌರವ: ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಮಹಾತ್ಮ ಗಾಂಧಿ ಪ್ರತಿಮೆ ಬಳಿ ಶುಕ್ರವಾರ ಬೆಳಿಗ್ಗೆ 11ರಿಂದ 12ರ ಮೌನಾಚರಣೆ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.