ADVERTISEMENT

ಆನ್‌ಲೈನ್‌ ಶಿಕ್ಷಣ ವರದಿಗೆ ವಿರೋಧ, ತಜ್ಞರ ಶಿಫಾರಸು ಜಾರಿಗೆ ತರದಂತೆ ಒತ್ತಾಯ

ಎಸ್‌ಎಫ್‌ಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 19:31 IST
Last Updated 8 ಜುಲೈ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆನ್‌ಲೈನ್ ಶಿಕ್ಷಣ ಕುರಿತಂತೆ ತಜ್ಞರ ಸಮಿತಿ ನೀಡಿರುವ ವರದಿ ಏಕಪಕ್ಷೀಯ ಮತ್ತು ನಗರ ಕೇಂದ್ರಿತ ಎಂಬ ಟೀಕೆ ವ್ಯಕ್ತವಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ವರದಿಯ ಶಿಫಾರಸ್ಸುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಅವುಗಳನ್ನು ಸರ್ಕಾರ ಒಪ್ಪಿಕೊಳ್ಳಬಾರದು ಎಂದು ಒತ್ತಾಯಿಸಿವೆ.ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಕೆಲವೆಡೆ ಪ್ರತಿಭಟನೆ ನಡೆಸಿದೆ.

‘ಆನ್‌ಲೈನ್ ತರಗತಿಗಳ ಬಗ್ಗೆ ತಜ್ಞರು ನೀಡಿರುವ ಶಿಫಾರಸುಗಳನ್ನು ಗಮನಿಸಿದರೆ ಇದು ನಗರ ಕೇಂದ್ರಿತದಂತೆ ಕಂಡುಬರುತ್ತವೆ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯ ಶೇ 25ರಷ್ಟು ಸೀಟುಗಳೊಂದಿಗೆ ಇಂಗ್ಲಿಷ್ ಮಾಧ್ಯಮ ಶಾಲೆಗೆ ಹೋಗುವ ಬಡ ಮಕ್ಕಳನ್ನು ಗಮನಿಸಿಲ್ಲ. ಸರ್ಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದರೆ ಬಡ ಮಕ್ಕಳಿಗೆ ಅಂಡ್ರಾಯ್ಡ್‌ ಮೊಬೈಲ್‌ ಮತ್ತು ಉಚಿತ ಇಂಟರ್‌ನೆಟ್‌ ಕೊಡಿಸಲಿ’ ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಆಂದೋಲನ ಸಂಚಾಲಕ ನಾಗಸಿಂಹ ಜಿ.ರಾವ್ ಹೇಳಿದ್ದಾರೆ.

ADVERTISEMENT

‘ಶಿಫಾರಸುಗಳು ಆನ್‌ಲೈನ್ ತರಗತಿಗಳಿಗೆ ಮಾತ್ರ ಸೀಮಿತವಾಗಿರದೆತರಗತಿಯೊಂದಕ್ಕೆ20 ವಿದ್ಯಾರ್ಥಿಗಳಿದ್ದರೆ ಶಾಲೆಯನ್ನು ತೆರೆಯಬಹುದೆಂದು ಸೂಚಿಸಿದೆ. ಅನೇಕ ಕಡೆ ಸರ್ಕಾರೇತರ ಶಾಲೆಗಳು ಸಣ್ಣ ಸಣ್ಣ ಕಟ್ಟಡಗಳಲ್ಲಿ ನಡೆಯುತ್ತವೆ. ಈ ಶಿಫಾರಸನ್ನು ಪರಿಗಣಿಸಬಾರದು’ ಎಂದು ಮನವಿ ಮಾಡಿದ್ದಾರೆ.

‘ಈ ತಜ್ಞರ ಸಮಿತಿಯು ಶಾಲೆಯ ಆಡಳಿತ ಮಂಡಳಿಗಳ ಒಕ್ಕೂಟದ ಪ್ರತಿನಿಧಿಗಳನ್ನು ಮಾತ್ರ ಸಮಿತಿಯಲ್ಲಿ ಸೇರಿಸಿಕೊಂಡಿತ್ತು. ಮಕ್ಕಳು, ಪೋಷಕರು, ಪೋಷಕರ ಸಂಘಟನೆಗಳ ಪ್ರತಿನಿಧಿಗಳನ್ನು ಸೇರಿಸಿಕೊಂಡಿಲ್ಲ ಅಥವಾ ಅವರ ಅಭಿಪ್ರಾಯಗಳನ್ನೂ ಪಡೆದಿಲ್ಲ’ ಎಂದು ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ (ಸ್ಥೂಪ) ಪ್ರಧಾನ ಕಾರ್ಯದರ್ಶಿ ಬಿ.ಎನ್‌.ಯೋಗಾನಂದ ದೂರಿದ್ದಾರೆ.

‘ಐದನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ಬೇಡ ಎಂದು ಅಭಿಪ್ರಾಯಪಟ್ಟ ತಜ್ಞರೇ ಇದೀಗ ಎಲ್‌ಕೆಜಿಯಿಂದಲೇ ಆನ್‌ಲೈನ್ ಶಿಕ್ಷಣ ನೀಡಬಹುದು ಎಂದು ಅಧಿಕೃತವಾಗಿ ವರದಿ ನೀಡಿದ್ದಾರೆ. ಆನ್‌ಲೈನ್ ಶಿಕ್ಷಣ ನೀಡುತ್ತೇವೆ ಎಂದು ಹೇಳಿ ಪೋಷಕರಿಂದ ಪಡೆದ ಶುಲ್ಕವನ್ನು ಶಾಲೆಗಳು ವಾಪಸ್‌ ನೀಡಬೇಕು. ಶುಲ್ಕ ಕಟ್ಟದೆ ಇರುವವರಿಗೆ ಒತ್ತಾಯಪಡಿಸಬಾರದು. ತೀರಾ ಅಗತ್ಯ ಇದ್ದರೆ 9 ಮತ್ತು 10ನೇ ತರಗತಿಗೆ ಮಾತ್ರ ಆನ್‌ಲೈನ್ ತರಗತಿ ನಡೆಸಬಹುದು’ ಎಂದು ಹೇಳಿದ್ದಾರೆ.

ಆನ್‌ಲೈನ್ ಶಿಕ್ಷಣದಿಂದ ಡಿಜಿಟಲ್ ಅಂತರ ಹೆಚ್ಚಲಿದೆ. ಮಕ್ಕಳ ಮನೋವಿಕಾಸ ಸಾಧ್ಯವಿಲ್ಲ ಎಂಬ ತಜ್ಞರ ಸಲಹೆಗೆ ನನ್ನ ಸಹಮತ ಇದೆ

- ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

***

ಶಾಲಾ ಕಾಲೇಜುಗಳ ಪ್ರಾರಂಭ ಅಥವಾ ಆನ್‍ಲೈನ್ ತರಗತಿಗಳ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ

- ಎಸ್.ಸುರೇಶ್‌ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

***

ಮಕ್ಕಳ ಹಕ್ಕುಗಳ ಆಂದೋಲನದ ಒತ್ತಾಯ

*ಆನ್‌ಲೈನ್‌ ಶಿಕ್ಷಣಕ್ಕಾಗಿ ಇಂಟರ್ನೆಟ್ ಉಚಿತ ಮಾಡಿ.

*ಆರ್‌ಟಿಇ ಮಕ್ಕಳಿಗೆ ಉಚಿತವಾಗಿ ಮೊಬೈಲ್/ಟ್ಯಾಬ್/ಲ್ಯಾಪ್‌ಟಾಪ್‌ ನೀಡಿ

*ಆನ್‌ಲೈನ್ ತರಗತಿಗಳಿಗೆ ಮಕ್ಕಳ ರಕ್ಷಣಾ ನಿಯಮ ರೂಪಿಸಿ

*ಶಿಕ್ಷಕರಿಗೆ ತರಬೇತಿ ನೀಡಿ, ಶಾಲೆಗಳ ಮೇಲೆ ನಿಗಾ ವಹಿಸಲು ಸಮಿತಿ ರಚಿಸಿ

*ಶಿಕ್ಷಣ ಇಲಾಖೆ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ಸೇರಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.