ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾಲಗಾರರಿಗೆ ಮೈಕ್ರೊ ಫೈನಾನ್ಸ್ ಕಂಪನಿಗಳು ನೀಡುತ್ತಿರುವ ಕಿರುಕುಳ ತಪ್ಪಿಸಲು ಮತ್ತು ಬಲವಂತದ ವಸೂಲಿಯನ್ನು ನಿಯಂತ್ರಿಸುವ ಉದ್ದೇಶದಿಂದ ಸಿದ್ಧಪಡಿಸಿರುವ ಸುಗ್ರೀವಾಜ್ಞೆಯಲ್ಲಿರುವ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮಗೊಳಿಸುವ ಹೊಣೆಯನ್ನು ಕಾನೂನು, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ತಂಡಕ್ಕೆ ವಹಿಸಲಾಗಿದೆ.
ಸುಗ್ರೀವಾಜ್ಞೆ ಹೊರಡಿಸುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸಂಜೆ ಉನ್ನತಮಟ್ಟದ ಸಭೆ ನಡೆಯಿತು. ಆದಷ್ಟು ಬೇಗ ಬಲಿಷ್ಠ ಕಾಯ್ದೆ ಜಾರಿಗೊಳಿಸಲು ಸಭೆ ತೀರ್ಮಾನಿಸಿದೆ.
ಕಾಯ್ದೆ ಸಂಪೂರ್ಣ ಸಂವಿಧಾನಬದ್ಧವಾಗಿದ್ದು, ಯಾವುದೇ ಲೋಪದೋಷ ಇರಬಾರದು. ಕಾಯ್ದೆಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ಸಿಗಲಿದೆ. ಅಲ್ಲದೆ, ಒಂಬುಡ್ಸ್‌ಮನ್ ನೇಮಕಕ್ಕೆ ಅವಕಾಶ ಆಗಲಿದೆ. ಅಮಾನವೀಯವಾಗಿ, ಬಲವಂತದ ಸಾಲ ವಸೂಲಾತಿ ಮಾಡುವವರಿಗೆ ಜಾಮೀನುರಹಿತ ಪ್ರಕರಣ ದಾಖಲು ಸೇರಿದಂತೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲು ಕೂಡಾ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.
ನೋಂದಣಿಯಾಗದ ಲೇವಾದೇವಿಗಾರರ ನಿಯಂತ್ರಣ ಈ ಕಾಯ್ದೆ ಜಾರಿ ಮೂಲಕ ಸಾಧ್ಯವಾಗಲಿದೆ. ಮೈಕ್ರೊ ಫೈನಾನ್ಸ್ ಕಂಪನಿಗಳ ಕಿರುಕುಳ ತಪ್ಪಿಸಲು ಸದ್ಯ ಜಾರಿಯಲ್ಲಿರುವ ಕಾನೂನಿನಲ್ಲಿ ಹಲವು ಅವಕಾಶಗಳಿದ್ದರೂ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. ಸಾಲಗಾರರು ದೂರು ದಾಖಲು ಮಾಡುವವರೆಗೆ ಕಾಯದೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ.
ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ, ‘ಕರಡು ಮಸೂದೆಯಲ್ಲಿರುವ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕೆಲವು ಅಂಶಗಳನ್ನು ಸೇರಿಸಲು ಕೂಡಾ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಕೆಲಸ ಆರಂಭಿಸಿದೆ’ ಎಂದರು.
‘ಶುಕ್ರವಾರ (ಜ. 31) ಮಧ್ಯಾಹ್ನದ ವೇಳೆಗೆ ಮಸೂದೆಗೆ ಒಂದು ಸ್ವರೂಪ ಬರಬಹುದು. ಸುಗ್ರೀವಾಜ್ಞೆಯ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿಗೆ ಸಚಿವ ಸಂಪುಟ ಸಭೆ ಅಧಿಕಾರ ನೀಡಿದೆ. ಹೀಗಾಗಿ, ಮತ್ತೊಮ್ಮೆ ಸಚಿವ ಸಂಪುಟಕ್ಕೆ ಮಂಡಿಸುವ ಪ್ರಮೇಯ ಬರುವುದಿಲ್ಲ’ ಎಂದರು.
ಗೃಹ ಸಚಿವ ಜಿ. ಪರಮೇಶ್ವರ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಭೆಯಲ್ಲಿ ಇದ್ದರು.
ಸಂಪುಟ ಸಭೆಯಲ್ಲಿ ಚರ್ಚೆ: ಸುಗ್ರೀವಾಜ್ಞೆ ಜಾರಿ ಕುರಿತಂತೆ ಗುರುವಾರ ಬೆಳಿಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದರೂ ಕೆಲವು ತಾಂತ್ರಿಕ ಸಮಸ್ಯೆಗಳು ಪ್ರಸ್ತಾಪವಾದ ಕಾರಣ ಯಾವುದೇ ತೀರ್ಮಾನ ಆಗಿರಲಿಲ್ಲ. ಸಭೆಯ ಬಳಿಕ ಈ ಬಗ್ಗೆ ವಿವರಿಸಿದ ಎಚ್.ಕೆ. ಪಾಟೀಲ, ‘ಸುಗ್ರೀವಾಜ್ಞೆಯಲ್ಲಿರುವ ಅಂಶಗಳಿಗೆ ಕೆಲವು ಕಾನೂನುಗಳು ಅಡ್ಡಿ ಆಗಬಹುದೇ ಎಂಬ ಬಗ್ಗೆ ಪರಿಶೀಲಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿಗೆ ಅಧಿಕಾರ ನೀಡಲಾಯಿತು’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.