ADVERTISEMENT

ಲೈಂಗಿಕ ಕಿರುಕುಳ ಆರೋಪ: ಮುರುಘಾ ಶ್ರೀ ಪ್ರಕರಣ ವರ್ಗಾವಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 20:57 IST
Last Updated 29 ಆಗಸ್ಟ್ 2022, 20:57 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಬೆಂಗಳೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ನೆರೆಯ ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಹಾಗೂ ದಲಿತ ಹಕ್ಕುಗಳ ಸಮಿತಿಗಳು ಆಗ್ರಹಿಸಿವೆ.

‘ಆರೋಪಿ ಸ್ಥಾನದಲ್ಲಿರುವ ಮುರುಘಾ ಶರಣರು ಬಲಾಢ್ಯರಾಗಿದ್ದಾರೆ. ರಾಜ್ಯ ಸರ್ಕಾರ ಹಾಗೂ ಅಧಿಕಾರದಲ್ಲಿರುವ ರಾಜಕಾರಣಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ಕಾರಣದಿಂದ ಸಂತ್ರಸ್ತ ಬಾಲಕಿಯರಿಗೆ ನ್ಯಾಯ ಸಿಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಪ್ರಕರಣವನ್ನು ನೆರೆ ರಾಜ್ಯಕ್ಕೆ ವರ್ಗಾಯಿಸಬೇಕು’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮಾವಳ್ಳಿ ಶಂಕರ್‌, ಗುರುಪ್ರಸಾದ್ ಕೆರಗೋಡು, ಎನ್‌. ವೆಂಕಟೇಶ್, ವಿ. ನಾಗರಾಜ್‌, ಎನ್‌. ಮುನಿಸ್ವಾಮಿ, ಲಕ್ಷ್ಮೀನಾರಾಯಣ ನಾಗವಾರ, ದಲಿತ ಹಕ್ಕುಗಳ ಸಮಿತಿಯ ಗೋಪಾಲಕೃಷ್ಣ ಹರಳಹಳ್ಳಿ, ಎನ್‌. ನಾಗರಾಜ್‌, ಬಿ. ರಾಜಶೇಖರಮೂರ್ತಿ, ಎನ್‌. ರಾಜಣ್ಣ ಮತ್ತು ನಾಗಣ್ಣ ಎಚ್‌. ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

‘ಉಚಿತ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳುವ ಕನಸು ಹೊತ್ತು ಬಂದ ಬಡ ಬಾಲಕಿಯರ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕ ದೌರ್ಜನ್ಯ ನಡೆಸುವ ಹೇಯ ಕೃತ್ಯಗಳು ಖಂಡನೀಯ. ಸಂತ್ರಸ್ತ ಬಾಲಕಿಯರ ಕುಟುಂಬದವರು, ಮೈಸೂರಿನ ಒಡನಾಡಿ ಸಂಸ್ಥೆಯ ಸಿಬ್ಬಂದಿಗೆ ರಕ್ಷಣೆ ನೀಡಬೇಕು. ಈ ಪ್ರಕರಣದಲ್ಲಿ ಸರ್ಕಾರ ನಿಷ್ಪಕ್ಷಪಾತ ರೀತಿಯಲ್ಲಿ ನಡೆದುಕೊಳ್ಳದಿದ್ದರೆ ಹೋರಾಟಕ್ಕೆ ಇಳಿಯಲಾಗುವುದು’ ಎಂದಿದ್ದಾರೆ.

ADVERTISEMENT

ಮಠದಲ್ಲಿ ಬಿಗುವಿನ ವಾತಾವರಣ
ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಮಧ್ಯಾಹ್ನ 1 ಗಂಟೆಗೆ ಮಠಕ್ಕೆ ಧಾವಿಸುವಂತೆ ಭಕ್ತರಿಗೆ ಕರೆ ನೀಡಿದರು. ಸಾಮಾಜಿಕ ಜಾಲತಾಣದ ಮೂಲಕ ಹರಿದಾಡಿದ ಸಂದೇಶ ಕಂಡು ಭಕ್ತರ ದಂಡು ಮಠದತ್ತ ಹರಿದುಬಂತು. ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಶರಣರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ವದಂತಿ ಭಕ್ತರನ್ನು ಕೆರಳಿಸಿತ್ತು.

ಸ್ಥಳ ಮಹಜರು ನಡೆಸಿದ ಪೊಲೀಸರು
ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಗಂಭೀರ ಆರೋಪ ಮಾಡಿರುವ ಸಂತ್ರಸ್ತ ಬಾಲಕಿಯರನ್ನು ತನಿಖಾಧಿಕಾರಿಗಳು ಸೋಮವಾರ ಮಠಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದರು.

ಸಂಜೆ 4 ಗಂಟೆಗೆ ಮಕ್ಕಳೊಂದಿಗೆ ಮಠಕ್ಕೆ ಧಾವಿಸಿದ ಪೊಲೀಸರು, ಶಿವಮೂರ್ತಿ ಮುರುಘಾ ಶರಣರ ಕಚೇರಿಗೆ ಕರೆದೊಯ್ದರು. ಶರಣರು ತಂಗುತ್ತಿದ್ದ ‘ಬೆಡ್‌ರೂಂ’ ಹಾಗೂ ಸ್ನಾನದ ಕೊಠಡಿಗೆ ತೆರಳಿ ಎರಡೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು ನಡೆಸಿದರು. ಸಂತ್ರಸ್ತ ಬಾಲಕಿಯರು ಮಂಗಳವಾರ ನ್ಯಾಯಾಧೀಶರ ಎದುರು ಹೇಳಿಕೆ ನೀಡಲಿದ್ದಾರೆ.

ಪೋಕ್ಸೊ: ಪ್ರಮುಖ ಅಸ್ತ್ರ
ಬೆಂಗಳೂರು:
ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆಯು (ಪೋಕ್ಸೊ ಕಾಯ್ದೆ) 2012ರ ನವೆಂಬರ್‌ನಲ್ಲಿ ಜಾರಿಗೆ ಬಂತು. ಪೋಕ್ಸೊ ಕಾಯ್ದೆ ಎಂದೇ ಕರೆಯಲಾಗುವ ಈ ಕಾಯ್ದೆಗೆ 2019ರಲ್ಲಿ ತಿದ್ದುಪಡಿಯನ್ನೂ ತರಲಾಗಿದೆ. ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವುದು ಈ ಕಾಯ್ದೆಯ ಮುಖ್ಯ ಉದ್ದೇಶ. ಎಲ್ಲ ರೀತಿಯ ಲೈಂಗಿಕ ಅಪರಾಧಗಳನ್ನೂ ಪೋಕ್ಸೊ ಕಾಯ್ದೆಯು ತನ್ನ ವ್ಯಾಪ್ತಿಯಲ್ಲಿ ಸೇರಿಸಿಕೊಂಡಿದೆ.

ಸ್ಪರ್ಶ, ಸ್ಪರ್ಶ ಇಲ್ಲದ ಲೈಂಗಿಕ ಕೃತ್ಯಗಳು, ಅತ್ಯಾಚಾರ, ಮಕ್ಕಳಿಗೆ ಲೈಂಗಿಕ ಸಂಪರ್ಕದ ಕೃತ್ಯದ ವಿಡಿಯೊ ಅಥವಾ ಚಿತ್ರಗಳನ್ನು ತೋರಿಸುವುದು ಮುಂತಾದ ಯಾವುದೇ ರೀತಿಯ ಲೈಂಗಿಕ ಅಪರಾಧವನ್ನು ಪೋಕ್ಸೊ ಕಾಯ್ದೆ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬಹುದು.

ಪೋಕ್ಸೊ ಕಾಯ್ದೆ ಅಡಿಯಲ್ಲಿ ದಾಖಲಾಗುವ ಪ್ರಕರಣಗಳನ್ನು ಸಂಜ್ಞೇಯ ಮತ್ತು ಜಾಮೀನರಹಿತ ಅಪರಾಧ ಎಂದು ಪರಿಗಣಿಸಲಾಗುತ್ತದೆ.

ಹೆಣ್ಣು ಮಕ್ಕಳು ಮಾತ್ರವಲ್ಲದೆ, ಗಂಡು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವಿರುದ್ಧವೂ ಈ ಕಾಯ್ದೆಯನ್ನು ಅನ್ವಯಿಸಬಹುದು ಎಂಬುದು ಇನ್ನೊಂದು ವಿಶೇಷ.

ಆರೋಪವು ಸಾಬೀತಾಗುವವರೆಗೆ ಆರೋಪಿಯು ನಿರಪರಾಧಿ ಎಂಬ ನ್ಯಾಯದಾನದ ತತ್ವವು ಪೋಕ್ಸೊ ಪ್ರಕರಣಗಳಿಗೆ ಅನ್ವಯ ಆಗುವುದಿಲ್ಲ. ದೂರು ದಾಖಲಾಗಿದೆ ಎಂದರೆ, ಆರೋಪಿಗೆ ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶ ಇತ್ತು ಎಂದೇ ಪರಿಗಣಿಸಲಾಗುವುದು.

ಸಚಿವ ಆರಗ ವಿರುದ್ಧ ದೂರು: ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ಗೃಹ ಸಚಿವ ಆರಗ ಜ್ಞಾನೇಂದ್ರ, ಪೊಲೀಸ್‌ ಮಹಾನಿರ್ದೇಶಕರು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಮಾನವ ಹಕ್ಕುಗಳ ಹೋರಾಟ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ಎಸ್.ಆರ್‌.ರಾಘವೇಂದ್ರ, ರಾಜ್ಯಪಾಲರಿಗೆ ದೂರುನೀಡಿದ್ದಾರೆ.

‘ಪ್ರಕರಣದಲ್ಲಿ ಗೃಹ ಸಚಿವರು ಮತ್ತು ಗೃಹ ಇಲಾಖೆ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಸ್ವಾಮೀಜಿ ಬಂಧಿಸುವಂತೆ ಗೃಹಸಚಿವರು ಸೂಚಿಸಬೇಕಿತ್ತು. ಆದರೆ, ದೂರಿನ ಹಿಂದೆ ಪಿತೂರಿ ಇದೆ ಎಂದು ಹೇಳಿಕೆ ನೀಡಿದ್ದಾರೆ. ಇವರ ಅಧೀನದ ಪೊಲೀಸರ ತನಿಖೆಯಿಂದ ನ್ಯಾಯ ದೊರಕುವ ವಿಶ್ವಾಸವಿಲ್ಲ’ ಎಂದಿದ್ದಾರೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತನಿಖೆ ಉಸ್ತುವಾರಿ ಇರಬೇಕು. ದೇಶದ ಉನ್ನತ ತನಿಖಾ ಸಂಸ್ಥೆಗಳಿಗೆ ಪ್ರಕರಣ ವರ್ಗಾಯಿಸಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.