ಬೆಂಗಳೂರು: ಶ್ರೀ ಕಂಠೀರವ ಸ್ಟುಡಿಯೋಸ್ ವತಿಯಿಂದ ಸಿನಿಮಾ ವಿತರಣೆಯನ್ನು ಒಟಿಟಿ (ಓವರ್ ದಿ ಟಾಪ್) ಮೂಲಕ ಆರಂಭಿಸಲು ನಿರ್ದೇಶಕರ ಸಭೆ ನಿರ್ಣಯಿಸಿದ್ದು, ಇದಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.
ಶ್ರೀ ಕಂಠೀರವ ಸ್ಟುಡಿಯೋಸ್ ವಾಣಿಜ್ಯೋದ್ಯಮಕ್ಕೆ ಪ್ರವೇಶಿಸಿ, ಚಲನಚಿತ್ರ ಮತ್ತು ಕಿರುಚಿತ್ರಗಳ ನಿರ್ಮಾಣ ಸೇರಿದಂತೆ ಚಲನಚಿತ್ರೋದ್ಯಮದ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಪ್ರಾರಂಭಿಸಲು 310ನೇ ನಿರ್ದೇಶಕರ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇದಕ್ಕಾಗಿ, ‘ಮೆಮೊರಂಡಮ್ ಆಫ್ ಅಸೋಸಿಯೇಷನ್’ನಲ್ಲಿ ತಿದ್ದುಪಡಿಯನ್ನೂ ಮಾಡಲಾಗಿದೆ ಎಂದು ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮಹಬೂಬ್ ಪಾಷ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
‘ಕೇರಳ ರಾಜ್ಯ ಸರ್ಕಾರ ‘ಫಿಲಂ ಡೆವಲಪ್‌ಮೆಂಟ್ ಕಾರ್ಪೊರೇಷನ್’ ನಡೆಸುತ್ತಿದ್ದು, ಅಲ್ಲಿ ಒಟಿಟಿ ಲಾಭದಾಯಕವಾಗಿದೆ. ನಮ್ಮ ನಿಗಮದಿಂದ ಒಟಿಟಿ ಅಭಿವೃದ್ಧಿಪಡಿಸಿ, ಕನ್ನಡ ಸಿನಿಮಾಗಳ ಜೊತೆಗೆ ಬೇರೆ ಭಾಷೆಯ ಸಿನಿಮಾಗಳನ್ನು ಖರೀದಿದಿ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಇದರಿಂದ ನಿಗಮಕ್ಕೆ ಲಾಭವಾಗುವುದಲ್ಲದೆ, ಕಲಾವಿದರು, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬಹುದಾಗಿದೆ. ಹೀಗಾಗಿ, ಒಟಿಟಿ ಅಭಿವೃದ್ಧಿಪಡಿಸಲು ಸಹಾಯ ಹಾಗೂ ಕ್ರಮ ಜರುಗಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕು’ ಎಂದು ಪಾಷ ಅವರು ಮುಖ್ಯಮಂತ್ರಿ ಅವರನ್ನು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.