ADVERTISEMENT

ಮೀಸಲಾತಿ ಹೋರಾಟ ಹತ್ತಿಕ್ಕುವ ಪ್ರಯತ್ನ: ಆರೋಪ

ಪಂಚಮಸಾಲಿ ಮೀಸಲಾತಿ ವಿರೋಧಿಗಳು ಕಾನೂನು ಹೋರಾಟ ನಡೆಸಲಿ: ಬಸವ ಜಯಮೃತ್ಯುಂಜಯ ಶ್ರೀ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 21:45 IST
Last Updated 17 ಫೆಬ್ರುವರಿ 2021, 21:45 IST
ಪಾದಯಾತ್ರೆ ಮುಂದುವರಿಸಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಹಾಗೂ ಹೋರಾಟ ಸಮಿತಿಯವರನ್ನು ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿಯವರು ನೆಲಮಂಗಲದಲ್ಲಿ ಬುಧವಾರ ಬೀಳ್ಕೊಟ್ಟರು.
ಪಾದಯಾತ್ರೆ ಮುಂದುವರಿಸಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಹಾಗೂ ಹೋರಾಟ ಸಮಿತಿಯವರನ್ನು ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿಯವರು ನೆಲಮಂಗಲದಲ್ಲಿ ಬುಧವಾರ ಬೀಳ್ಕೊಟ್ಟರು.   

ನೆಲಮಂಗಲ: ‘ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ, ಎಲ್ಲರಿಗೂ ಒಳಿತು ಮಾಡುತ್ತಿರುವ ರೈತ, ಕೂಲಿ ಕಾರ್ಮಿಕ, ದುಡಿಯುವವರೇ ತುಂಬಿರುವ ಪಂಚಮಸಾಲಿ ಸಮಾಜವು ಮೀಸಲಾತಿಗಾಗಿ ಹಮ್ಮಿಕೊಂಡಿರುವ ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ’ ಎಂದು ಕೂಡಲಸಂಗಮದ ಬಸವ ಜಯಮೃಂತ್ಯುಂಜಯ ಸ್ವಾಮೀಜಿ ಆರೋಪಿಸಿದರು.

ಇಲ್ಲಿನ ಬಸವಣ್ಣದೇವರಮಠದಲ್ಲಿ ತಂಗಿದ್ದ ಹೋರಾಟ ಸಮಿತಿಯವರು ಬುಧವಾರ ಸಂಜೆ ಬೆಂಗಳೂರು ಕಡೆಗೆ ಪಾದಯಾತ್ರೆ ಮುಂದುವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ‘ಮುಗ್ಧ ಹಿಂದುಳಿತ ಶೋಷಿತ ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವ ರಾಜಕೀಯ ಪ್ರೇರಿತ ಶಕ್ತಿಗಳು ನಮ್ಮ ಹೋರಾಟವನ್ನು ವಿರೋಧಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಿಂದುಳಿದ ಸಮುದಾಯಗಳು ಹೋರಾಟ ಮಾಡಿದಾಗ ನಮ್ಮ ಸಮುದಾಯದವರು ಅವರಿಗೆ ಆಶ್ರಯ ಕೊಟ್ಟು, ಅವರ ಅಭಿವೃದ್ಧಿ ಬಯಸಿದ್ದರು. ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಮೀಸಲಾತಿ ಕೇಳುವ ಹಕ್ಕಿದೆ. ನಾವು ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆಯೇ ಹೊರತು, ರಾಜಕೀಯ ಮೀಸಲಾತಿಯನ್ನಲ್ಲ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬಾರದು ಎನ್ನುವ ಹಕ್ಕು ಯಾರಿಗೂ ಇಲ್ಲ. ನಮಗೆ ಮೀಸಲಾತಿ ನೀಡುವುದನ್ನು ವಿರೋಧಿಸುವವರು ಬೇಕಿದ್ದರೆ ಕಾನೂನಾತ್ಮಕ ಹೋರಾಟ ನಡೆಸಲಿ’ ಎಂದರು.

ADVERTISEMENT

‘ನಮ್ಮ ಮನವಿಯನ್ನು ಮುಖ್ಯಮಂತ್ರಿಗಳು ಹಿಂದುಳಿತ ವರ್ಗಗಳ ಆಯೋಗಕ್ಕೆ ಕಳುಹಿಸಿದ್ದರಿಂದ ಸ್ವಲ್ಪ ನಿರಾಳರಾಗಿದ್ದೇವೆ. ವರದಿ ನೀಡಲು ಕಾಲಾವಕಾಶ ಬೇಕು ಎಂದು ಆಯೋಗದ ಅಧ್ಯಕ್ಷರು ಹೇಳಿದ್ದಾರೆ. ಸಚಿವರಾದ ಸಿ.ಸಿ.ಪಾಟೀಲ, ಮುರುಗೇಶ ನಿರಾಣಿ ಅವರು ಮುಖ್ಯಮಂತ್ರಿಯವರ ಜೊತೆ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿಯವರೂ ನಮ್ಮೊಂದಿಗೆ ಮಾತನಾಡಿದ್ದು, ಕಾನೂನಿನ ಅಡಿಯಲ್ಲಿ ಇದಕ್ಕೊಂದು ತಾರ್ಕಿಕ ಅಂತ್ಯ ನೀಡುವ ಭರವಸೆ ನೀಡಿದ್ದಾರೆ’ ಎಂದರು.

‘ಮುಖ್ಯಮಂತ್ರಿಯವರು ತಮ್ಮ ಪರಮಾಧಿಕಾರ ಬಳಸಿ ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ಬಗ್ಗೆಇದೇ 21ರ ಒಳಗೆ ಸ್ಪಷ್ಟ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಪಾದಯಾತ್ರೆಯಲ್ಲಿ ತೆರಳಿ ಹೋರಾಟ ಮುಂದುವರಿಸುತ್ತೇವೆ’ ಎಂದರು.

ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಪಾದಯಾತ್ರೆಯಲ್ಲಿ ಸಾಗುವವರನ್ನು ಬೀಳ್ಕೊಟ್ಟರು. ವಚನಾನಂದ ಸ್ವಾಮೀಜಿ, ಸಮುದಾಯದ ಮುಖಂಡ ಮೈಲನಹಳ್ಳಿ ಲೋಕೇಶ್‌ ಇದ್ದರು.

ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ
‘ಪ್ರವರ್ಗ 2ಎ’ಗೆ ಸೇರಿಸಿ ಮೀಸಲಾತಿ ನೀಡುವಂತೆ ಪಂಚಮಸಾಲಿ ಸಮುದಾಯ ಹೋರಾಟ ನಡೆಸುತ್ತಿರುವ ಬೆನ್ನಲ್ಲೆ, ಮುಖ್ಯಮಂತ್ರಿ ಯಡಿಯೂರಪ್ಪ ಟಿಪ್ಪಣಿಯಂತೆ ಈ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ಪತ್ರ ಬರೆದಿದ್ದಾರೆ.

ಮೀಸಲಾತಿಗೆ ಆಗ್ರಹಿಸಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯದಿಂದ ಹೋರಾಟ ನಡೆಯುತ್ತಿದ್ದು, ಇದೇ 21ರಂದು ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಸಲು ಸಿದ್ಧತೆ ನಡೆದಿದೆ.

‘ನಮ್ಮ ಜನಾಂಗ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಹಿಂದುಳಿದಿದೆ. ಸಮಾಜದ ಬಡವರಿಗೆ ತೊಂದರೆಯಾಗಿರುವುದರಿಂದ, ಹಿಂದುಳಿದ ವರ್ಗ 2-ಎ ಮೀಸಲಾತಿಗೆ ಸೇರಿಸಿ’ ಎಂದು ಆಗ್ರಹಿಸಿ ಪಂಚಮಸಾಲಿ ಸಮುದಾಯದ ಪ್ರಮುಖರು ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.

‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ 1995ರಡಿಯಲ್ಲಿ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಬೇಕು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಾಗರಿಕರ ವರ್ಗಗಳನ್ನು ಗುರುತಿಸಲು ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಟಿಪ್ಪಣಿಯಲ್ಲಿ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.