ADVERTISEMENT

Padma Awards: ‘ಪದ್ಮ ಪ್ರಶಸ್ತಿ’ ಪುರಸ್ಕೃತರ ಪರಿಚಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 23:34 IST
Last Updated 25 ಜನವರಿ 2026, 23:34 IST
   
ಸಾಹಿತ್ಯ, ಶಿಕ್ಷಣ, ವೈದ್ಯಕೀಯ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರ್ನಾಟಕದ ಎಂಟು ಸಾಧಕರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮ ಪ್ರಶಸ್ತಿ’ಗಳಿಗೆ ಭಾಜನರಾಗಿದ್ದಾರೆ. ಸಾಧಕರ ಪರಿಚಯ ಇಲ್ಲಿದೆ.

ಎಸ್.ಜಿ. ಸುಶೀಲಮ್ಮ

ಪದ್ಮ ಶ್ರೀ, ಕ್ಷೇತ್ರ: ಸಮಾಜಸೇವೆ

ತಮ್ಮ ಜೀವನವನ್ನು ಸಮಾಜಸೇವೆಗೆ ಮುಡಿಪಾಗಿಟ್ಟವರು ಎಸ್.ಜಿ. ಸುಶೀಲಮ್ಮ. ಅವರು ಬೆಂಗಳೂರಿನಲ್ಲಿರುವ ಸುಮಂಗಲಿ ಸೇವಾಶ್ರಮದ ಸಂಸ್ಥಾಪನಾ ಅಧ್ಯಕ್ಷರಾಗಿದ್ದಾರೆ. ‘ಕರ್ನಾಟಕದ ಮದರ್‌ ತೆರೇಸಾ’ ಎಂದೂ ಪ್ರಸಿದ್ಧರಾಗಿದ್ದಾರೆ. 50 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಅವರಿಗೆ ಈಗ 87 ವರ್ಷ. ಅವರು 1975ರಲ್ಲಿ ಸ್ಥಾಪಿಸಿರುವ ಸುಮಂಗಲಿ ಸೇವಾಶ್ರಮ, ಅನಾಥ ಮಕ್ಕಳು, ನಿರ್ಗತಿಕ ಮಹಿಳೆಯರು ಮತ್ತು ವೃದ್ಧರಿಗೆ ಆಶ್ರಯ, ಶಿಕ್ಷಣ ಹಾಗೂ ವೃತ್ತಿಪರ ತರಬೇತಿಯನ್ನು ನೀಡುತ್ತಿದೆ.

ಸುಶೀಲಮ್ಮ ಅವರು 1939ರ ಮೇ 24ರಂದು ಬೆಂಗಳೂರಿನಲ್ಲಿ ಜನಿಸಿದರು. ಪದವಿಪೂರ್ವ ಶಿಕ್ಷಣ ಪಡೆದ ಅವರು, ರೆಂಕೋ ಕಾರ್ಖಾನೆಯಲ್ಲಿ (ಬಿ.ಎಚ್.ಇ.ಎಲ್) 15 ವರ್ಷ ಕಾರ್ಯನಿರ್ವಹಿಸಿದ್ದರು. ಬಳಿಕ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿ, ತಮ್ಮನ್ನು ಸಂಪೂರ್ಣವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು.

ADVERTISEMENT
ಅನಿರೀಕ್ಷಿತವಾಗಿ ಈ ಪ್ರಶಸ್ತಿ ಬಂದಿದೆ. ಎಲ್ಲರ ಬೆಂಬಲದಿಂದ ಅಂದುಕೊಂಡಿದ್ದನ್ನು ಸಾಕಾರ ಮಾಡಲು ಸಾಧ್ಯವಾಯಿತು. ಈ ಪ್ರಶಸ್ತಿಯು ಇನ್ನುಷ್ಟು ಕಾರ್ಯಸಾಧನೆ ಮಾಡಲು ಉತ್ತೇಜಿಸಲಿದೆ. ಬುಡಕಟ್ಟು ಸಮುದಾಯದವರಿಗೆ ಮನೆ ಉದ್ಯೋಗ ಒದಗಿಸಬೇಕೆಂಬ ಕನಸಿದೆ. ಸದ್ಯ ಆ ನಿಟ್ಟಿನಲ್ಲಿ ಕಾರ್ಯ ಮಾಡಲಾಗುತ್ತಿದೆ. ನಮ್ಮ ಕನಸುಗಳಿಗೆ ವಿವಿಧ ಸಂಘ–ಸಂಸ್ಥೆಗಳು ನೆರವಾಗುತ್ತಿವೆ. ಇದರಿಂದ ಸಮಾಜಸೇವೆ ಸಾಧ್ಯವಾಗುತ್ತಿದೆ.
  –ಎಸ್.ಜಿ. ಸುಶೀಲಮ್ಮ

1976ರಲ್ಲಿ ಬಸವಾನಂದ ನರ್ಸರಿ, 1979ರಲ್ಲಿ ಸುಮಂಗಲಿ ಯುವತಿ ಮಂಡಳಿಯನ್ನು ಸ್ಥಾಪಿಸಿದರು. 1985ರಲ್ಲಿ ಚೋಳನಾಯಕನಹಳ್ಳಿಯಲ್ಲಿ ಬಸವಾನಂದ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು. ವಸತಿನಿಲಯ, ವೃದ್ಧಾಶ್ರಮವನ್ನೂ ನಡೆಸುತ್ತಿದ್ದಾರೆ. ಕೌಟುಂಬಿಕ ಸಮಾಲೋಚನೆ ವ್ಯವಸ್ಥೆ, ಗಿಡಗಳ ವಿತರಣೆಯಂತಹ ಕಾರ್ಯವನ್ನೂ ಕೈಗೊಂಡಿದ್ದಾರೆ.

ಶತಾವಧಾನಿ.ಆರ್‌. ಗಣೇಶ್‌

ಪದ್ಮಭೂಷಣ, ಕ್ಷೇತ್ರ: ಕಲೆ

ಶತಾವಧಾನಿ ಆರ್‌.ಗಣೇಶ್‌ ಅವರು ಬಹು ಭಾಷಾ ಪಂಡಿತರು. ಕನ್ನಡ, ಸಂಸ್ಕೃತ, ತೆಲುಗು, ತಮಿಳು ಸಹಿತ 8 ಭಾಷೆಗಳಲ್ಲಿ ಅವಧಾನವನ್ನು ನಿರರ್ಗಳವಾಗಿ ಮಾಡಬಲ್ಲವರು. 1962ರ ಡಿಸೆಂಬರ್ 4 ರಂದು ಕೋಲಾರದಲ್ಲಿ ಜನನ. ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ಅವರ ತಂದೆ–ತಾಯಿ. ‌

ಬೆಂಗಳೂರಿನಲ್ಲಿ ಪ್ರಾಥಮಿಕ, ಗೌರಿಬಿದನೂರಿನಲ್ಲಿ ಪ್ರೌಢ ಶಿಕ್ಷಣ ಪಡೆದರು. ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯದಲ್ಲಿ (ಯುವಿಸಿಇ) ಎಂಜಿನಿಯರಿಂಗ್‌ ಪದವಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಎಂ.ಎಸ್ಸಿ ಪಡೆದರು. ಆದರೆ ಆಸಕ್ತಿ ಬೆಳೆದಿದ್ದು ಭಾರತೀಯ ತತ್ವಶಾಸ್ತ್ರ, ಇತಿಹಾಸ, ಸಾಹಿತ್ಯ, ವೇದಾಂತ, ಉಪನಿಷತ್, ಕಲೆ ಇತ್ಯಾದಿ ವಿಷಯಗಳಲ್ಲಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದರು. ಕನ್ನಡದಲ್ಲಿ ಅವಧಾನ ಕಲೆ ಎನ್ನುವ ಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಡಿ.ಲಿಟ್ ನೀಡಿದೆ.

ಚಿತ್ರಕಾವ್ಯ ಕಲೆಯ ಕುರಿತು ಶತಾವಧಾನ ಶಾರದೆ ಹಾಗೂ ಶತಾವಧಾನ ಶ್ರೀವಿದ್ಯೆ, ಸಂಸ್ಕೃತದಲ್ಲಿ 12 ನಾಟಕ, 16 ಕಾವ್ಯ, ಕನ್ನಡದಲ್ಲಿ 8 ಕಾವ್ಯ, 3 ಕಾದಂಬರಿ ಹಾಗೂ 6 ಅನುವಾದ ಕೃತಿ ಹೊರತಂದಿದ್ದಾರೆ. ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರೂ ಹೌದು.

29ನೇ ವಯಸ್ಸಿನಲ್ಲೇ (1991ರಲ್ಲಿ) ಅವರಿಗೆ ಕರ್ನಾಟಕ ರಾಜ್ಯೋತ್ಸವ ನೀಡಲಾಗಿತ್ತು. ಇದು ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. 

ಶುಭಾ ವೆಂಕಟೇಶ ಅಯ್ಯಂಗಾರ್

ಪದ್ಮ ಶ್ರೀ, ಕ್ಷೇತ್ರ: ವಿಜ್ಞಾನ ಮತ್ತು ಎಂಜಿನಿಯರಿಂಗ್‌

ಪರಿಚಯ: ಬೆಂಗಳೂರಿನಲ್ಲಿ 1954ರ ಮೇ 14ರಂದು ವೆಂಕಟೇಶ ಅಯ್ಯಂಗಾರ್‌ ಹಾಗೂ ರಾಜಮ್ಮ ದಂಪತಿಯ ಪುತ್ರಿಯಾಗಿ ಜನಿಸಿದ ಶುಭಾ ಅವರು ನ್ಯಾಷನಲ್‌ ಕಾಲೇಜಿನಲ್ಲಿ ಬಿಎಸ್ಸಿ ಆನರ್ಸ್‌ ಹಾಗೂ ಸೆಂಟ್ರಲ್‌ ಕಾಲೇಜಿನಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1974ರಲ್ಲಿ ಎನ್‌ಎಎಲ್‌ ಸೇರಿದ ಅವರು ಸಿಎಸ್‌ಐಆರ್ ಫೆಲೋಶಿಪ್‌ ಪಡೆದು ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪೂರ್ಣಗೊಳಿಸಿದರು. 1982ರಲ್ಲಿ ವಿಜ್ಞಾನಿಯಾಗಿ ವೃತ್ತಿ ಜೀವನ ಆರಂಭಿಸಿ ಮೆಟೀರಿಯಲ್‌ ಸೈನ್ಸ್‌ನಲ್ಲಿ ತೊಡಗಿಸಿಕೊಂಡರು. ಪೈಲಟ್‌ಗಳು ವಿಮಾನ ಓಡಿಸುವ ಹಾಗೂ ನಿಗದಿತ ನಿಲ್ದಾಣಗಳಲ್ಲಿ ಇಳಿಸಲು ಸೂಕ್ತ ಮಾರ್ಗದರ್ಶನ ಮಾಡುವ ‘ದೃಷ್ಟಿ’ ಎನ್ನುವ ತಂತ್ರಜ್ಞಾನವನ್ನು ಶುಭಾ ಅಭಿವೃದ್ದಿಪಡಿಸಿದರು. ಈಗ ವಾಯುಪಡೆಯಲ್ಲೂ ಇದೇ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದು ಸಂಪೂರ್ಣ ದೇಸಿ ನಿರ್ಮಿತ ತಂತ್ರಜ್ಞಾನ.

ಇದಲ್ಲದೇ ಹೈದರಾಬಾದ್‌ನ ಡಿಆರ್‌ಡಿಎಲ್‌ ರೂಪಿಸಿದ ಅಗ್ನಿಮಿಸೈಲ್‌ ಯೋಜನೆಯಲ್ಲೂ ಪ್ರಮುಖ ಪಾತ್ರ ವಹಿಸಿದರು. ಏರೋಸ್ಪೇಸ್‌ಗೆ ಸಂಬಂಧಿಸಿದ ಹಲವು ಸಂಶೋಧನಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಏರೋಸ್ಪೇಸ್ ಸಂಶೋಧನೆಯಲ್ಲಿ ಪರಿಣತಿ ಹೊಂದಿರುವ ಪ್ರಮುಖ ಮಹಿಳಾ ವಿಜ್ಞಾನಿಯಾದ ಶುಭಾ 2020ರಲ್ಲಿ ನಿವೃತ್ತಿಯಾಗಿದ್ದಾರೆ. ಶುಭಾ ಅವರಿಗೆ 2024ರಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರಶಸ್ತಿ ನೀಡಲಾಗಿತ್ತು.

ಪ್ರಭಾಕರ ಕೋರೆ

ಪದ್ಮ ಶ್ರೀ, ಕ್ಷೇತ್ರ: ಸಾಹಿತ್ಯ ಮತ್ತು ಶಿಕ್ಷಣ

1947ರ ಆಗಸ್ಟ್‌ 1ರಂದು ಜನಿಸಿದ ಪ್ರಭಾಕರ ಕೋರೆ, ಬಿ.ಕಾಂ ಪದವೀಧರರು. ಶಿಕ್ಷಣ, ಕೃಷಿ, ಸಹಕಾರ, ರಾಜಕೀಯ ವಲಯ, ಚಲನಚಿತ್ರ ಉದ್ಯಮ ಮತ್ತು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಮೂರು ಅವಧಿಗೆ(1990-1996, 2008-2014, 2014-2020) ರಾಜ್ಯಸಭಾ ಸದಸ್ಯರಾಗಿ, 2001ರಿಂದ 2007ರವರೆಗೆ ವಿಧಾನ ಪರಿಷತ್‌ ಸದಸ್ಯರಾಗಿ ಕರ್ತವ್ಯ ನಿರ್ವಹಣೆ. 1984ರಲ್ಲಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷರಾಗಿ ಅಧಿಕಾರ ಹಿಡಿದಾಗ ಇದ್ದ ಅಂಗಸಂಸ್ಥೆಗಳ ಸಂಖ್ಯೆ 38 ರಿಂದ 317ಕ್ಕೆ ಏರಿಕೆ.

2006 ಮತ್ತು 2009ರಲ್ಲಿ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಆವರಣದಲ್ಲಿ ಎರಡು ಬಾರಿ ಕರ್ನಾಟಕ ವಿಧಾನಮಂಡಲ ಅಧಿವೇಶನ ಆಯೋಜಿಸಿದ್ದಾರೆ. 2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದಲ್ಲಿ ಮಹತ್ವದ ಪಾತ್ರನಿರ್ವಹಣೆ. 

ಸಾಮಾಜಿಕ ಸೇವೆ ನನ್ನ ಉಸಿರು. ‘ಪದ್ಮಶ್ರೀ’ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಇದನ್ನು ಕೆಎಲ್‌ಇ ಸಂಸ್ಥೆಯ ಇಡೀ ಸಮೂಹಕ್ಕೆ ಮತ್ತು ರೈತರಿಗೆ ಅರ್ಪಿಸುವೆ.
– ಪ್ರಭಾಕರ ಕೋರೆ, ರಾಜ್ಯಸಭೆಯ ಮಾಜಿ ಸದಸ್ಯ

ಡಾ.ಸುರೇಶ್‌ ಹನಗವಾಡಿ

ಪದ್ಮ ಶ್ರೀ, ಕ್ಷೇತ್ರ: ವೈದ್ಯಕೀಯ

ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಹಿಮೋಫಿಲಿಯಾ ರೋಗಿಗಳ ಆರೈಕೆಯಲ್ಲಿ ಸುಧಾರಣೆ ತರುವಲ್ಲಿ ಮಹತ್ತರ ಪಾತ್ರ ವಹಿಸಿರುವ  ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಸುರೇಶ್‌ ಹನಗವಾಡಿ ಸ್ವತಃ ಕುಸುಮರೋಗಿ (ಹಿಮೋಫಿಲಿಯಾ). ರಕ್ತ ಹೆಪ್ಪುಗಟ್ಟದಿರುವ ಸಮಸ್ಯೆಯಿಂದ ಕಾಣಿಸಿಕೊಳ್ಳುವ ಈ ರೋಗಕ್ಕೆ ರಾಜ್ಯದಲ್ಲೇ ಮೊದಲ ಚಿಕಿತ್ಸಾ ಕೇಂದ್ರ ಸ್ಥಾಪಿಸಿ ಸೇವೆ ಒದಗಿಸುತ್ತಿದ್ದಾರೆ. ರಕ್ತಕ್ಕೆ ಸಂಬಂಧಿಸಿದ ವಿರಳ ರೋಗಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ಸಿಗುವಂತೆ ಮಾಡಿದ್ದಾರೆ.

ದೇಶದಾದ್ಯಂತ ಸಂಚರಿಸಿ ಕುಸುಮರೋಗಿಗಳ ಆರೈಕೆಗೆ ಶ್ರಮಿಸುತ್ತಿದ್ದಾರೆ. ಅಗತ್ಯ ಸಮಯಕ್ಕೆ ರಕ್ತ, ದುಬಾರಿ ಬೆಲೆಯ ಔಷಧ, ಚಿಕಿತ್ಸೆ ಉಚಿತವಾಗಿ ಸಿಗುವಂತಹ ವ್ಯವಸ್ಥೆ ರೂಪುಗೊಳ್ಳುವಲ್ಲಿ ಇವರ ಪರಿಶ್ರಮವಿದೆ. ಹಿಮೋಫಿಲಿಯಾ ಕಾಯಿಲೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಕಾರ್ಯನಿರತರಾಗಿದ್ದಾರೆ. ಹಿಮೋಫಿಲಿಯಾ ರೋಗಿಗಳು ಅಂಗವೈಕಲ್ಯಕ್ಕೆ ತುತ್ತಾಗಂತೆ ನೋಡಿಕೊಳ್ಳುತ್ತಿದ್ದಾರೆ.

ನಾಲ್ಕು ದಶಕಗಳ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ಇದು ದೇಶದಾದ್ಯಂತ ಕುಸುಮರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಲು ಸಹಕಾರಿ ಆಗಲಿದೆ ಎಂದು ಭಾವಿಸಿದ್ದೇನೆ
– ಡಾ.ಸುರೇಶ್‌ ಹನಗವಾಡಿ, ವೈದ್ಯ, ದಾವಣಗೆರೆ

ಪುಸ್ತಕ ಪ್ರೇಮಿ ಅಂಕೇಗೌಡ

ಪದ್ಮ ಶ್ರೀ, ಕ್ಷೇತ್ರ: ಸಮಾಜಕಾರ್ಯ

ಗ್ರಾಮದಲ್ಲಿ ಅಂಕೇಗೌಡ ಪ್ರತಿಷ್ಠಾನದಡಿ 20ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ ದ್ದಾರೆ. ‘ಪುಸ್ತಕ ಮನೆ ಅಂಕೇಗೌಡ’ ಎಂದೇ ಖ್ಯಾತಿ ಗಳಿಸಿದ್ದಾರೆ. ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ವೇಳಾಧಿಕಾರಿಯಾಗಿ ದುಡಿದ ಹಣದಲ್ಲಿ ಮೈಸೂರಿನಲ್ಲಿ ಖರೀದಿಸಿದ್ದ ನಿವೇಶನವನ್ನು ₹ 6 ಲಕ್ಷಕ್ಕೆ ಮಾರಿ ₹ 5 ಲಕ್ಷವನ್ನು ಪುಸ್ತಕಗಳ ಖರೀದಿಗೇ ವ್ಯಯಿಸಿದವರು. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು ಸೇರಿದಂತೆ ವಿವಿಧ ಭಾಷೆಯ ಸಾವಿರಾರು ಪುಸ್ತಕಗಳಿವೆ. ಮಹಾತ್ಮ ಗಾಂಧಿಯವರ ಕುರಿತ 2,500 ಕೃತಿಗಳ ಬೃಹತ್ ಸಂಗ್ರಹವಿದೆ. ಭಗವದ್ಗೀತೆ, ಮಹಾಭಾರತ, ಜೈನ, ಬೌದ್ಧ ಸಾಹಿತ್ಯ, ಬೈಬಲ್‌ಗೆ ಸಂಬಂಧಿಸಿದ ಸಾವಿರಾರು ‌ಕೃತಿಗಳಿವೆ. ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಲಿಮ್ಕಾ ದಾಖಲೆಯಲ್ಲೂ ಅವರು ಹೆಸರಿದೆ.

ನನಗೆ ಪದ್ಮಶ್ರೀ ಬಂದಿದ್ದು ಕೇಳಿ ಖುಷಿಯಾಯಿತು. ಪ್ರಪಂಚದ ಜ್ಞಾನವನ್ನೆಲ್ಲ ಒಂದೆಡೆ ಸಂಗ್ರಹಿಸಿ ಸಾಮಾನ್ಯರಿಗೆ ತಲುಪಿಸುವ ಆಸೆ ಇತ್ತು. ಪುಸ್ತಕ ಓದುವ, ಸಂಗ್ರಹಿಸುವ ಹವ್ಯಾಸ ಜೀವಂತವಾಗಿ ಇಟ್ಟುಕೊಳ್ಳಬೇಕು.
– ಅಂಕೇಗೌಡ

ಅಡುಗೆ ಮನೆ ಸಾಮ್ರಾಟ ಜಗನ್ನಾಥನ್‌

ಪದ್ಮ ಶ್ರೀ, ಕ್ಷೇತ್ರ: ವ್ಯಾಪಾರ ಮತ್ತು ಉದ್ದಿಮೆ

ಅಡುಗೆ ಮನೆಗೆ ಅಗತ್ಯವಿರುವ ಹತ್ತು ಹಲವು ಉಪಕರಣಗಳ ತಯಾರಿಕಾ ವಲಯದಲ್ಲಿ ದೇಶದ ದೊಡ್ಡ ಕಂಪನಿಯಾಗಿರುವ ಟಿಟಿಕೆ ಪ್ರೆಸ್ಟೀಜ್‌ನ ಅಧ್ಯಕ್ಷರಾಗಿದ್ದರು ಟಿ.ಟಿ. ಜಗನ್ನಾಥನ್‌. ಅವರು ‘ಅಡುಗೆ ಮನೆಯ ಸಾಮ್ರಾಟ’ ಎಂದೇ ಪ್ರಸಿದ್ಧರಾಗಿದ್ದರು. ಐಐಟಿ–ಚೆನ್ನೈನಿಂದ ಚಿನ್ನದ ಪದಕ ಪಡೆದಿದ್ದ ಜಗನ್ನಾಥನ್‌, ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದರು. 50 ವರ್ಷಗಳ ಕಾಲ ಟಿಟಿಕೆ ಪ್ರೆಸ್ಟೀಜ್‌ನ ಆಡಳಿತ ಮಂಡಳಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮುಳುಗುತ್ತಿದ್ದ ಕಂಪನಿಯನ್ನು ಮೇಲೆತ್ತಿ ಕಟ್ಟಿದ ವ್ಯಕ್ತಿ ಇವರು ಎಂದು ಹೇಳಲಾಗುತ್ತದೆ.

1975ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಜಗನ್ನಾಥನ್‌ ಕಂಪನಿ ಸೇರಿದರು. 2000ವರೆಗೆ ಇದೇ ಹುದ್ದೆಯಲ್ಲಿ ಮುಂದುವರಿದ ಅವರು ಬಳಿಕ 19 ವರ್ಷ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು. 2019ರಿಂದ 2025ರ ಮಾರ್ಚ್‌ವರೆಗೆ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದರು. ಇವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪುರಸ್ಕಾರ ಘೋಷಿಸಲಾಗಿದೆ.

ಶಶಿ ಶೇಖರ್‌ ವೆಂಪತಿ

ಪದ್ಮ ಶ್ರೀ, ಕ್ಷೇತ್ರ: ಸಾಹಿತ್ಯ ಮತ್ತು ಶಿಕ್ಷಣ

‘ಭಾರತ್‌ ಫೌಂಡೇಷನ್‌ನ ಡೀಪ್‌ಟೆಕ್‌ನ ಸಹ ಸಂಸ್ಥಾಪಕರಾದ ಶಶಿ ಶೇಖರ್‌ ವೆಂಪತಿ ಅವರು ‘ಎಐ4ಇಂಡಿಯಾ’ ಉಪಕ್ರಮದ ಮೂಲಕ ಭಾರತದ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದಾರೆ.

ಅವರು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಸಮಿತಿ ಅಧ್ಯಕ್ಷ ಮತ್ತು ಶೈಕ್ಷಣಿಕ ಮಾಧ್ಯಮದ ಕುರಿತು ಯುಜಿಸಿ ತಜ್ಞರ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅವರು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಾಸ್‌ ಕಮ್ಯುನಿಕೇಷನ್ಸ್‌ (ಐಐಎಂಸಿ), ಜಾಮಿಯಾದ ಎಜೆಕೆ ಮಾಸ್‌ ಕಮ್ಯುನಿಕೇಷನ್‌ ಮತ್ತು ಮೀಡಿಯಾ ರಿಸರ್ಚ್‌ ಸೆಂಟರ್‌ ಸೇರಿದಂತೆ ವಿವಿಧ ಸಂಸ್ಥೆಗಳ ಆಡಳಿತ ನಿರ್ವಹಣೆಗೂ ಕೊಡುಗೆ ನೀಡಿದ್ದಾರೆ. ಅವರು ಅಂತರರಾಷ್ಟ್ರೀಯ ಪ್ರಸಾರ ಮಾನದಂಡಗಳ ಸಂಸ್ಥೆಯಾದ ಎಟಿಎಸ್‌ಸಿನ ಜಾಗತಿಕ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದಾರೆ. ಪ್ರಸಾರ ಭಾರತಿಯ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದಾರೆ. ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊದ ಆಧುನೀಕರಣಕ್ಕೆ ಒತ್ತು ನೀಡಿದ್ದರು. ಅದೇ ಸಮಯದಲ್ಲಿ ರಾಜ್ಯಸಭಾ ಟಿವಿಯನ್ನು ಮುನ್ನಡೆಸಿದ್ದರು.

ಐಐಟಿ ಬಾಂಬೆಯ ಹಿರಿಯ ವಿದ್ಯಾರ್ಥಿಯಾಗಿರುವ ಶಶಿ, ‘ಕಲೆಕ್ಟಿವ್ ಸ್ಪಿರಿಟ್ ಕಾಂಕ್ರೀಟ್ ಆಕ್ಷನ್‌– ಮನ್‌ ಕಿ ಬಾತ್‌ ಅಂಡ್ ಇಟ್ಸ್‌ ಇನ್ಫ್ಲುಯೆನ್ಸ್‌ ಆನ್‌ ಇಂಡಿಯಾ’ ಎಂಬ ಪುಸ್ತಕವನ್ನೂ ರಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.