ADVERTISEMENT

Pahalgam Terror Attack | ಸುರಕ್ಷಿತವಾಗಿ ಬಂದಿಳಿದ 177 ಕನ್ನಡಿಗರು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 16:17 IST
Last Updated 24 ಏಪ್ರಿಲ್ 2025, 16:17 IST
ಕನ್ನಡಿಗ ಪ್ರವಾಸಿಗರ ಜತೆಗೆ ವಿಮಾನ ನಿಲ್ದಾಣದಿಂದ ಹೊರಬಂದ ಸಚಿವ ಸಂತೋಷ್ ಲಾಡ್‌
ಕನ್ನಡಿಗ ಪ್ರವಾಸಿಗರ ಜತೆಗೆ ವಿಮಾನ ನಿಲ್ದಾಣದಿಂದ ಹೊರಬಂದ ಸಚಿವ ಸಂತೋಷ್ ಲಾಡ್‌   

ಬೆಂಗಳೂರು: ಕಾಶ್ಮೀರದಲ್ಲಿ ಸಿಲುಕಿದ್ದ 177 ಕನ್ನಡಿಗ ಪ್ರವಾಸಿಗರನ್ನು ಹೊತ್ತಿದ್ದ ವಿಶೇಷ ವಿಮಾನವು ಗುರುವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿಯಿತು. 

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರ ನೇತೃತ್ವದಲ್ಲಿ ತೆರಳಿದ್ದ ತಂಡ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಆರ್.ಚೇತನ್‌ ನೇತೃತ್ವದಲ್ಲಿ ತೆರಳಿದ್ದ ಅಧಿಕಾರಿಗಳ ತಂಡವು ಕನ್ನಡಿಗ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆ ತರುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.

ಮಂಗಳವಾರ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಕನ್ನಡಿಗರು ಮೃತಪಟ್ಟಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಸಭೆ ನಡೆಸಿದ್ದರು. ತಕ್ಷಣವೇ ಕಾಶ್ಮೀರಕ್ಕೆ ತೆರಳಿ ತೆರವು ಕಾರ್ಯಾಚರಣೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಆರ್‌.ಚೇತನ್‌ ಅವರ ನೇತೃತ್ವದ ತಂಡವು ಮಂಗಳವಾರ ರಾತ್ರಿಯೇ ಶ್ರೀನಗರಕ್ಕೆ ತೆರಳಿ, ಕನ್ನಡದ ಪ್ರವಾಸಿಗರ ಮಾಹಿತಿ ಕಲೆಹಾಕಿತ್ತು. 

ADVERTISEMENT

ಮುಖ್ಯಮಂತ್ರಿಯ ಸೂಚನೆಯಂತೆ ಸಚಿವ ಸಂತೋಷ್‌ ಲಾಡ್‌ ನೇತೃತ್ವದ ಇನ್ನೊಂದು ತಂಡವು ಬುಧವಾರ  ಶ್ರೀನಗರ ತಲುಪಿತ್ತು. ಎರಡೂ ತಂಡಗಳು ಕಾಶ್ಮೀರದ ವಿವಧೆಡೆ ಇದ್ದ ಕನ್ನಡಿಗ ಪ್ರವಾಸಿಗರನ್ನು ಪತ್ತೆ ಮಾಡಿ, ಸಂಪರ್ಕಿಸಿತ್ತು. 

‘ಕಾಶ್ಮೀರದಲ್ಲಿ ರಾಜ್ಯದ 180 ಪ್ರವಾಸಿಗರು ಇರುವ ಬಗ್ಗೆ ಮಾಹಿತಿ ಇತ್ತು. ಅವರಲ್ಲಿ 168 ಮಂದಿ ಬುಧವಾರ ರಾತ್ರಿಯ ವೇಳೆಗೆ ನಮ್ಮ ಸಂಪರ್ಕಕ್ಕೆ ಸಿಕ್ಕಿದ್ದರು. 14–15 ಲಾಡ್ಜ್‌ಗಳಲ್ಲಿ ಅವರೆಲ್ಲರೂ ಇದ್ದರು. ಅಲ್ಲಿಗೆ ಖುದ್ದು ಭೇಟಿ ನೀಡಿ, ಹೊರಗೆಲ್ಲೂ ಹೋಗದಂತೆ ತಿಳಿಸಿದ್ದೆವು. ವಿಮಾನದ ವ್ಯವಸ್ಥೆ ಮಾಡುವುದಾಗಿ ಧೈರ್ಯ ಹೇಳಿದ್ದೆವು’ ಎಂದು ಸಂತೋಷ್‌ ಲಾಡ್‌ ಹೇಳಿದರು.

‘ವಿಶೇಷ ವಿಮಾನದ ವ್ಯವಸ್ಥೆ ಖಾತರಿಯಾದ ನಂತರ, ಬುಧವಾರ ತಡರಾತ್ರಿಯೇ ವಿಮಾನ ನಿಲ್ದಾಣಕ್ಕೆ ಬರುವಂತೆ ಮಾಹಿತಿ ನೀಡಿದ್ದೆವು. ಅದರಂತೆ 177 ಮಂದಿ ಬಂದಿದ್ದರು. ನಾವು 200 ಆಸನದ ವಿಮಾನದ ವ್ಯವಸ್ಥೆ ಮಾಡಿದ್ದೆವು. ಹೀಗಾಗಿ ಎಲ್ಲರನ್ನೂ ಕರೆದುಕೊಂಡು ಬರಲು ಸಾಧ್ಯವಾಯಿತು’ ಎಂದು ರಕ್ಷಣಾ ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಶ್ರೀನಗರದಿಂದ ಗುರುವಾರ ಬೆಳಿಗ್ಗೆ ಹೊರಟಿದ್ದ ವಿಮಾನವು ಮಧ್ಯಾಹ್ನ 1.30ರ ವೇಳೆಗೆ ಬೆಂಗಳೂರು ತಲುಪಿತು. ವಿಮಾನದಲ್ಲಿ ಬಂದಿಳಿದ ಪ್ರವಾಸಿಗರು, ರಾಜ್ಯದ ಬೇರೆ–ಬೇರೆ ಭಾಗಗಳಲ್ಲಿ ಇರುವ ತಮ್ಮ ಊರು ಮತ್ತು ಮನೆಗಳಿಗೆ ತೆರಳಿದರು. ತಮ್ಮನ್ನು ನಾಡಿಗೆ ತಲುಪಿಸಿದ ರಾಜ್ಯದ ತಂಡಕ್ಕೆ ಅಭಿನಂದನೆ ಹೇಳಿದರು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿ, 27 ಮಂದಿ ಪ್ರವಾಸಿಗರು ಬಲಿಯಾಗಿದ್ದರು. ಅಲ್ಲಿಗೆ ಪ್ರವಾಸಕ್ಕೆಂದು ತೆರಳಿದ್ದ ಸುಮಾರು 180 ಮಂದಿ ಅಲ್ಲಿಯೇ ಸಿಲುಕಿದ್ದರು. ದಾಳಿಯ ಕಾರಣದಿಂದ ಕನ್ನಡಿಗರೂ ಸೇರಿ ಬಹುತೇಕ ಪ್ರವಾಸಿಗರು, ಪ್ರವಾಸವನ್ನು ಮೊಟಕುಗೊಳಿಸಿ ತಮ್ಮ ರಾಜ್ಯಗಳಿಗೆ ಮರಳಲು ಮುಂದಾಗಿದ್ದರು. ಆದರೆ ವಿಮಾನಯಾನ ಕಂಪನಿಗಳು ಟಿಕೆಟ್ ದರ ಏರಿಕೆ ಮಾಡಿದ್ದರಿಂದ ಮರಳಲಾಗದೇ ಅಲ್ಲಿಯೇ ಉಳಿದಿದ್ದರು.

₹1.37 ಕೋಟಿ ವೆಚ್ಚ ಭರಿಸಿದ ಲಾಡ್‌

‘ಇಡೀ ಕಾರ್ಯಾಚರಣೆಗೆ ₹1.37 ಕೋಟಿ ವೆಚ್ಚವಾಗಿದ್ದು ಸಚಿವ ಸಂತೋಷ್‌ ಲಾಡ್‌ ಅವರು ಇಡೀ ಮೊತ್ತವನ್ನು ತಾವೇ ಭರಿಸಿದ್ದಾರೆ. ವೆಚ್ಚವನ್ನು ಸರ್ಕಾರದಿಂದ ಮರಳಿ ಪಡೆಯಬೇಡಿ ಎಂದು ಸೂಚಿಸಿದ್ದಾರೆ’ ಎಂದು ಲಾಡ್ ಅವರ ಆಪ್ತ ಮೂಲಗಳು ತಿಳಿಸಿವೆ. ‘ಕಾಶ್ಮೀರದಲ್ಲಿನ ಪ್ರವಾಸಿಗರ ರಕ್ಷಣೆಗೆ ಹುಬ್ಬಳ್ಳಿಯಿಂದ ತೆರಳಿದ್ದ ರಾಜ್ಯದ ವಿಶೇಷ ತಂಡದ ಪ್ರಯಾಣ ಮತ್ತು ಶ್ರೀನಗರದಲ್ಲಿನ ಇನ್ನಿತರ ವೆಚ್ಚ ಸುಮಾರು ₹60 ಲಕ್ಷವಾಗಿದೆ. ಅಲ್ಲಿಂದ 177 ಪ್ರವಾಸಿಗರು ಮತ್ತು ರಾಜ್ಯ ಸರ್ಕಾರದ ತಂಡಗಳನ್ನು ವಿಶೇಷ ವಿಮಾನದಲ್ಲಿ ಕರೆತರಲು ₹77 ಲಕ್ಷವಾಗಿದೆ’ ಎಂದು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.