ಬೆಂಗಳೂರು: ‘ಪಾಕಿಸ್ತಾನವು ಭಯೋತ್ಪಾದಕರ ಮೂಲಕ ಭಾರತದ ಮೇಲೆ ದಾಳಿ ಮಾಡುತ್ತಿದ್ದರೂ ಅವರ ವಿರುದ್ಧ ಯುದ್ಧ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಅಕ್ಷಮ್ಯ ಅಪರಾಧ ಮತ್ತು ಅವರು ದೇಶ ಜನರ ಕ್ಷಮೆ ಕೇಳಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಶ್ಮೀರದ ಭಯೋತ್ಪಾದಕರ ದಾಳಿ ಮತ್ತು ಹತ್ಯೆಯ ಘಟನೆಯನ್ನು ಪ್ರತಿಯೊಬ್ಬ ಸ್ವಾಭಿಮಾನಿ ಭಾರತೀಯನೂ ಖಂಡಿಸಿದ್ದಾನೆ. ಭಾರತ ಯಾವತ್ತೂ ಯುದ್ಧ ಸಾರಿದ ಇತಿಹಾಸ ಹೊಂದಿಲ್ಲ. ಭಾರತೀಯರ ರಕ್ಷಣೆ ಮಾಡಬೇಕಾದ ಸಂದರ್ಭದಲ್ಲಿ ಏನು ತೀರ್ಮಾನ ಮಾಡಬೇಕೋ ಅದನ್ನು ಪ್ರಧಾನಿಯವರು ಎಲ್ಲ ಮುಖ್ಯಮಂತ್ರಿಗಳ ಜತೆ ಚರ್ಚಿಸಿಯೇ ನಿರ್ಧರಿಸುತ್ತಾರೆ’ ಎಂದರು.
ಇಲ್ಲಿನ ಅಲ್ಪಸಂಖ್ಯಾತರ ಓಲೈಕೆಗಾಗಿ ಪಾಕಿಸ್ತಾನ ಪರವಾಗಿ ಮಾತನಾಡುವುದು ಸರಿಯಲ್ಲ ಎಂದೂ ಆವರು ಹೇಳಿದರು.
‘ಒಂದು ಕಡೆ ಪಾಕಿಸ್ತಾನದ ಕುರಿತು ನಿಮ್ಮ ಸಹಾನುಭೂತಿ ಹೇಳಿಕೆ, ಮತ್ತೊಂದು ಕಡೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ನಿಮ್ಮ ದ್ವೇಷದ ಮಾತುಗಳು ಜನರ ಮನದಲ್ಲಿ ನೀವು ರಾಷ್ಟ್ರ ನಿಷ್ಠರೋ ಅಥವಾ ಪಾಕಿ ಮನಸ್ಥಿತಿಯ ವಕ್ತಾರರೋ ಎಂಬ ಅನುಮಾನ ಮೂಡಿಸುತ್ತಿದೆ’ ಎಂದರು.
‘ಪಾಕಿಸ್ತಾನದಲ್ಲಿ ನಿಮ್ಮ ಹೇಳಿಕೆ ಆಧರಿಸಿ ಅಲ್ಲಿನ ಸುದ್ದಿವಾಹಿನಿಗಳು ನಿಮ್ಮನ್ನು ವೈಭವೀಕರಿಸುತ್ತಿರುವ ಪರಿ ನೋಡಿದರೆ ನಿಮ್ಮ ಅಜೆಂಡಾ ಏನು ಎನ್ನುವುದು ಜನರಿಗೆ ಅರ್ಥವಾಗುತ್ತಿದೆ. ಸಮರ್ಪಣೆಯ ಸಂಕಲ್ಪ ಹೊತ್ತ ಲಕ್ಷಾಂತರ ದೇಶಭಕ್ತ ಕಾರ್ಯಕರ್ತರ ಪಡೆ ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಶತಮಾನ ಪೂರೈಸಿ ವಿಶ್ವ ಮಾನ್ಯತೆ ಪಡೆದ ಭಾರತದ ಹೆಮ್ಮೆಯ ಸಂಘಟನೆ’ ಎಂದು ವಿಜಯೇಂದ್ರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.