ADVERTISEMENT

Pahalgam Attack | ಗಂಭೀರ ಪರಿಸ್ಥಿತಿಯಲ್ಲಿ ರಾಜಕಾರಣ ಬೇಡ: ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 6:43 IST
Last Updated 28 ಏಪ್ರಿಲ್ 2025, 6:43 IST
   

ಬೆಳಗಾವಿ: ‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವಾಗಿ, ಕೇಂದ್ರ ಸರ್ಕಾರದ ಜತೆಗೆ ನಾವು ನಿಂತಿದ್ದೇವೆ. ಆದರೆ, ಬಿಜೆಪಿಯೇ ಇದರಲ್ಲಿ ರಾಜಕೀಯ ಮಾಡುತ್ತಿದೆ’ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ದೂರಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಥದ್ದೊಂದು ಘಟನೆ ಆಗಬಾರದಿತ್ತು. ಇದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಆದರೆ, ನಮಗೆ ರಾಜಕೀಯಕ್ಕಿಂತ ದೇಶದ ಹಿತ ಮುಖ್ಯ. ಹಾಗಾಗಿ ಸರ್ವಪಕ್ಷಗಳ ಸಭೆಯಲ್ಲೇ ಕೇಂದ್ರದ ತೀರ್ಮಾನಕ್ಕೆ ಬೆಂಬಲ ಸೂಚಿಸಿದ್ದೇವೆ. ಗಂಭೀರ ಪರಿಸ್ಥಿತಿಯಲ್ಲಿ ಯಾರೂ ರಾಜಕಾರಣ ಮಾಡಬಾರದು’ ಎಂದರು.

ಪಹಲ್ಗಾಮ್‌ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಬಿಜೆಪಿಯವರು ಆಕ್ಷೇಪ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದರು.

ADVERTISEMENT

‘ಕೇಂದ್ರ ಸರ್ಕಾರದ ಅಗತ್ಯ ವಸ್ತುಗಳ ಬೆಲೆ ಏರಿಸಿದ್ದು ಖಂಡನೀಯ. ಇದನ್ನು ಖಂಡಿಸಿ ಇಂದು ಪ್ರತಿಭಟನಾ ಸಮಾವೇಶ ಮಾಡುತ್ತಿದ್ದೇವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿದೆ. ಆದರೆ, ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಸಲಾಗಿದೆ. ಸದನದಲ್ಲಿ ಇದನ್ನು ಪ್ರಶ್ನಿಸುತ್ತೇವೆ’ ಎಂದರು.

ಜೋಳ ವಿತರಿಸಲು ಚಿಂತನೆ:

‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ 1 ಲಕ್ಷ ಟನ್‌ ಜೋಳ ಖರೀದಿಗೆ ತೀರ್ಮಾನಿಸಿದ್ದೇವೆ. ಅನ್ನಭಾಗ್ಯ ಯೋಜನೆಯಡಿ ಈಗ ಪ್ರತಿ ಫಲಾನುಭವಿಗೆ 5 ಕೆ.ಜಿ ಅಕ್ಕಿ ವಿತರಿಸುತ್ತಿದ್ದೇವೆ. ಆದರೆ, ರಾಜ್ಯದ ಕೆಲವೆಡೆ ಜನರು ಅಕ್ಕಿಗಿಂತ ಜೋಳ ಹೆಚ್ಚಾಗಿ ಬಳಸುತ್ತಾರೆ. ಅಂಥ ಕಡೆ ಪ್ರತಿ ಫಲಾನುಭವಿಗೆ 3 ಕೆ.ಜಿ ಅಕ್ಕಿ, 2 ಕೆ.ಜಿ ಜೋಳ ಮತ್ತು ಉತ್ತರ ಕರ್ನಾಟಕದಲ್ಲಿ 3 ಕೆ.ಜಿ ಜೋಳ, 2 ಕೆ.ಜಿ ಅಕ್ಕಿ ವಿತರಿಸಲು ಚಿಂತನೆ ನಡೆಸಿದ್ದೇವೆ’ ಎಂದರು.

‘ಹೊಸ ಪಡಿತರ ಚೀಟಿಗಳನ್ನು ಕೋರಿ ಅರ್ಜಿ ಸಲ್ಲಿಸಿದವರಿಗೆ ಶೀಘ್ರವೇ ಕಾರ್ಡ್‌ಗಳನ್ನು ವಿತರಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.