ADVERTISEMENT

ಕಂದಾಯ ದಾಖಲೆ | ಬಜೆಟ್‌ ನಂತರ ಏಕೀಕೃತ ವ್ಯವಸ್ಥೆ: ಸಚಿವ ಕೃಷ್ಣಬೈರೇಗೌಡ

ಪಹಣಿಯಲ್ಲಿಯೇ ದೊರೆಯಲಿವೆ ಮ್ಯುಟೇಷನ್, ಇ.ಸಿ, ಆಕಾರ್ ಬಂದ್ ಮತ್ತು ಸರ್ವೆ ಸ್ಕೆಚ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 20:41 IST
Last Updated 27 ಫೆಬ್ರುವರಿ 2026, 20:41 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಕಂದಾಯ ಇಲಾಖೆ ಸೌಲಭ್ಯಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು 
ಚಿಕ್ಕಬಳ್ಳಾಪುರದಲ್ಲಿ ನಡೆದ ಕಂದಾಯ ಇಲಾಖೆ ಸೌಲಭ್ಯಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು    

ಚಿಕ್ಕಬಳ್ಳಾಪುರ: ‘ಖಾತೆ ಬದಲಾವಣೆ ಪ್ರಮಾಣ ಪತ್ರ (ಮ್ಯುಟೇಷನ್), ಋಣಭಾರ ರಾಹಿತ್ಯ ಪ್ರಮಾಣಪತ್ರ (ಇ.ಸಿ), ಆಕಾರ್ ಬಂದ್ ಮತ್ತು ಭೂಮಾಪನ ನಕ್ಷೆ(ಸರ್ವೆ ಸ್ಕೆಚ್‌) ಈ ನಾಲ್ಕೂ ದಾಖಲೆಗಳು ಇನ್ಮುಂದೆ ಪಹಣಿಯಲ್ಲಿಯೇ ಸಿಗಲಿವೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. 

ಶುಕ್ರವಾರ ಇಲ್ಲಿ ನಡೆದ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪ್ರತ್ಯೇಕವಾಗಿ ಈ ದಾಖಲೆಗಳಿಗಾಗಿ ರೈತರು ಈಗ ಬೇರೆ, ಬೇರೆ ಕಚೇರಿಗಳಿಗೆ ಅಲೆಯಬೇಕಾಗುತ್ತಿದೆ. ಈ ಸಮಸ್ಯೆ ಮನಗಂಡು ಪಹಣಿಯಲ್ಲಿಯೇ ಈ ನಾಲ್ಕೂ ದಾಖಲೆಗಳನ್ನೂ ಸೇರಿಸುವ ಕೆಲಸ ನಡೆಯುತ್ತಿದೆ’ ಎಂದರು. 

ಏಕೀಕೃತ ವ್ಯವಸ್ಥೆಯಡಿ ಆನ್‌ಲೈನ್ ಮೂಲಕ ದಾಖಲೆ ನೀಡಲಾಗುವುದು. ಈ ವ್ಯವಸ್ಥೆ ರೂಪಿಸಲು ಐದಾರು ತಿಂಗಳಿನಿಂದ ಕೆಲಸ ಮಾಡಲಾಗುತ್ತಿದೆ.  ನಂತರದ ಹಂತದಲ್ಲಿ ಪಹಣಿಯಲ್ಲಿಯೇ ಜಮೀನಿನ ಡ್ರೋನ್‌ ಚಿತ್ರ, ಜಮೀನು ಮಾಲೀಕರ ಚಿತ್ರ ಸಹ ಸೇರಿಸಲಾಗುವುದು’ ಎಂದರು. 

ADVERTISEMENT

‘ಬಜೆಟ್ ಮಂಡನೆ ನಂತರದ ಒಂದೆರೆಡು ತಿಂಗಳಲ್ಲಿ ಪಹಣಿಯ ಜೊತೆಯಲ್ಲಿಯೇ ಮ್ಯುಟೇಷನ್, ಇ.ಸಿ, ಆಕಾರ್ ಬಂದ್ ಮತ್ತು ಸರ್ವೆ ಸ್ಕೆಚ್‌ ಸೇರಿಸಿ ಕೊಡುತ್ತೇವೆ ಎಂದು ಸಚಿವರು ಹೇಳಿದರು.

ಕಂದಾಯ ಇಲಾಖೆಯಲ್ಲಿ ಮೌನ ಕ್ರಾಂತಿ
ಒಂದು ಪೋಡಿ ದುರಸ್ತಿಗೆ ಒಂದು ಎಕರೆಗೆ ₹50 ಸಾವಿರದಿಂದ ₹5 ಲಕ್ಷ, ₹10 ಲಕ್ಷ ಖರ್ಚಾಗುತ್ತದೆ ಎಂದು ರೈತರು ಹೇಳಿದ್ದನ್ನು ಕೇಳಿದ್ದೇನೆ. ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳು ಜನರನ್ನು ಶೋಷಿಸುತ್ತಿದ್ದರು. ಮಧ್ಯವರ್ತಿಗಳಿಗೆ ಹಣ ಕೊಟ್ಟರೆ ಕೆಲಸ ಆಗುತ್ತದೆ ಎನ್ನುವ ಸ್ಥಿತಿ ಇತ್ತು. ಆದರೆ ಈ ವ್ಯವಸ್ಥೆ ಬದಲಿಸಿ ಕಂದಾಯ ಇಲಾಖೆಯಲ್ಲಿ ಮೌನಕ್ರಾಂತಿ ಮಾಡಲಾಗುತ್ತಿದೆ ಎಂದು ಕೃಷ್ಣಬೈರೇಗೌಡ ಹೇಳಿದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ರೆಕಾರ್ಡ್ ರೂಂನಲ್ಲಿ ಇಟ್ಟಿದ್ದಾರೆ. ಹೀಗೆ ನಕಲು, ಫೋರ್ಜರಿ ತಡೆಗೆ ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುತ್ತಿದ್ದೇವೆ. ಈಗ 71 ಕೋಟಿ ಪುಟಗಳು ಸ್ಕ್ಯಾನಿಂಗ್ ಆಗಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.