ADVERTISEMENT

ಸುಸ್ಥಿರ ಆಡಳಿತ: ಐದನೇ ಸ್ಥಾನಕ್ಕೆ ಕರ್ನಾಟಕ

ಸಾರ್ವಜನಿಕ ಆಡಳಿತ: ಕೇರಳಕ್ಕೆ ಅಗ್ರಸ್ಥಾನ * ಕರ್ನಾಟಕ ನಾಲ್ಕನೇ ಸ್ಥಾನದಲ್ಲಿ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 19:03 IST
Last Updated 30 ಅಕ್ಟೋಬರ್ 2020, 19:03 IST
ಕೆ. ಕಸ್ತೂರಿ ರಂಗನ್
ಕೆ. ಕಸ್ತೂರಿ ರಂಗನ್   

ಬೆಂಗಳೂರು: ಸುಸ್ಥಿರ ಆಡಳಿತದಲ್ಲಿ ಕಳೆದ ವರ್ಷ ಅಗ್ರಸ್ಥಾನದಲ್ಲಿದ್ದ ಕರ್ನಾಟಕ, ಈ ಬಾರಿ ಐದನೇ ಸ್ಥಾನಕ್ಕೆ ಕುಸಿದಿದೆ. ಅತ್ಯುತ್ತಮ ಸಾರ್ವಜನಿಕ ಆಡಳಿತ ನೀಡಿದ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕೇರಳಕ್ಕೆ ಅಗ್ರಸ್ಥಾನ ದೊರೆತಿದೆ. ಸತತ ಐದನೇ ಬಾರಿಗೆ ಕೇರಳ ಈ ಸಾಧನೆ ಮಾಡಿದೆ.

ಈ ಸಾರ್ವಜನಿಕ ಆಡಳಿತ ಸೂಚ್ಯಂಕದಲ್ಲಿ (ಪಿಎಐ) ಕರ್ನಾಟಕವು ನಾಲ್ಕನೇ ಸ್ಥಾನದಲ್ಲಿದೆ. ಕಳೆದ ಬಾರಿಯೂ ಈ ಪಟ್ಟಿಯಲ್ಲಿ ರಾಜ್ಯ ನಾಲ್ಕನೇ ಸ್ಥಾನದಲ್ಲಿತ್ತು.

ಸಾರ್ವಜನಿಕ ಆಡಳಿತ ಕೇಂದ್ರದ (ಪಿಎಸಿ) ಮುಖ್ಯಸ್ಥ ಡಾ. ಕಸ್ತೂರಿ ರಂಗನ್‌ ಶುಕ್ರವಾರ ಈ ಸೂಚ್ಯಂಕವನ್ನು ಬಿಡುಗಡೆಗೊಳಿಸಿದರು. ಐದನೇ ವಾರ್ಷಿಕ ಆವೃತ್ತಿಯ ಈ ಸೂಚ್ಯಂಕ ಬಿಡುಗಡೆ ವರ್ಚುವಲ್‌ ರೂಪದಲ್ಲಿ ನಡೆಯಿತು.

ADVERTISEMENT

ರಾಜ್ಯದ ಒಟ್ಟು ಇಂಧನ ಬಳಕೆಯಲ್ಲಿ ನವೀಕರಿಸಬಹುದಾದ ಸಂಪನ್ಮೂಲಗಳ ಪಾಲು, ನಗರ ಪ್ರದೇಶದಲ್ಲಿ ಮಹತ್ವದ ಹತ್ತು ಅಂಶಗಳಲ್ಲಿ ರಾಜ್ಯದ ಪ್ರದರ್ಶನ ಆಧರಿಸಿದ ಸುಸ್ಥಿರತೆ ಪಟ್ಟಿ ತಯಾರಿಸಲಾಗುತ್ತದೆ.

‘ನಮ್ಮ ಅಭಿವೃದ್ಧಿ ದೃಷ್ಟಿಕೋನದಲ್ಲಿ ಒಂದೇ ಬಗೆಯು ಎಲ್ಲದಕ್ಕೂ ಸರಿ ಹೊಂದುತ್ತದೆ ಎಂದೇ ಭಾವಿಸಲಾಗುತ್ತಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಾಂತ್ರಿಕವಾಗಿ ವಿನ್ಯಾಸಗೊಳಿಸಲಾಗಿದೆ. ಕೆಲವೊಮ್ಮೆ ಇಂತಹ ಯೋಜನೆಗಳು ವಸ್ತುನಿಷ್ಠ ಬಹುತ್ವ ಸಿದ್ಧಾಂತಕ್ಕೆ ವಿರುದ್ಧವಾಗಿರುವಂತೆ ಕಾಣುತ್ತವೆ’ ಎಂದು ಕಸ್ತೂರಿ ರಂಗನ್ ಹೇಳಿದರು.

ದೇಶದಲ್ಲಿ ಸಾರ್ವಜನಿಕ ಆಡಳಿತ ಸುಧಾರಣೆಗೆ ಸಲಹೆ ನೀಡುವ ಉದ್ದೇಶದಿಂದ 1994ರಲ್ಲಿ ಪಿಎಸಿಯನ್ನು ಸ್ಥಾಪಿಸಲಾಗಿದೆ. ರಾಜ್ಯಗಳ ಆಡಳಿತಕ್ಕೆ ಸಂಬಂಧಿಸಿದ 10 ವಿಚಾರಗಳನ್ನು ಹಾಗೂ 30 ಆದ್ಯತಾ ವಿಷಯಗಳನ್ನು ಆಧರಿಸಿ ಅಧ್ಯಯನ ನಡೆಸುವ ಪಿಎಸಿ ಪ್ರತಿ ವರ್ಷವೂ ಸೂಚ್ಯಂಕವನ್ನು ಸಿದ್ಧಪಡಿಸುತ್ತದೆ.

ಅಧ್ಯಯನಕ್ಕೆ ಪ್ರಮುಖವಾಗಿ ಆಯಾ ರಾಜ್ಯ ಸರ್ಕಾರದ ನೀತಿ–ನಿರೂಪಣೆ, ಅಭಿವೃದ್ಧಿ ಮತ್ತು ಸುಸ್ಥಿರತೆ ಅಂಶಗಳನ್ನು ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.