ADVERTISEMENT

ಪಾಕ್‌ ಶತ್ರು ದೇಶ ಎಂದು ಘೋಷಿಸಲಿ: ಕೇಂದ್ರಕ್ಕೆ ಬಿ.ಕೆ.ಹರಿಪ್ರಸಾದ್‌ ಸವಾಲು

ಬಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 16:35 IST
Last Updated 4 ಫೆಬ್ರುವರಿ 2026, 16:35 IST
<div class="paragraphs"><p>ಬಿ.ಕೆ.ಹರಿಪ್ರಸಾದ್‌, ವಿಧಾನ ಪರಿಷತ್‌ ಸದಸ್ಯ</p></div>

ಬಿ.ಕೆ.ಹರಿಪ್ರಸಾದ್‌, ವಿಧಾನ ಪರಿಷತ್‌ ಸದಸ್ಯ

   

ಬೆಂಗಳೂರು: ‘ಕೇಂದ್ರ ಸರ್ಕಾರವು ಪಾಕಿಸ್ತಾನವನ್ನು ಶತ್ರುದೇಶ ಎಂದು ಘೋಷಿಸಿಬಿಡಲಿ’ ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು.

ಮಂಗಳವಾರದ ಕಲಾಪದ ವೇಳೆ ಬಿಜೆಪಿಯ ಸಿ.ಟಿ.ರವಿ ಅವರು ಪಾಕಿಸ್ತಾನವನ್ನು ಉಲ್ಲೇಖಿಸಿ ಮಾತನಾಡಿದ್ದರು. ಸಿ.ಟಿ.ರವಿ ಅವರ ಮಾತನ್ನು ಸಮರ್ಥಿಸಿಕೊಂಡು ಬುಧವಾರದ ಕಲಾಪದಲ್ಲಿ ಮಾತನಾಡಿದ ಬಿಜೆಪಿಯ ಕೆ.ಎಸ್‌.ನವೀನ್‌, ‘ಹರಿಪ್ರಸಾದ್ ಅವರು ಈ ಹಿಂದೆ ಪಾಕಿಸ್ತಾನ ಶತ್ರು ದೇಶವಲ್ಲ, ಪಕ್ಕದ ದೇಶ ಎಂದಿದ್ದರು’ ಎಂದರು.

ADVERTISEMENT

ಇದಕ್ಕೆ ಕಾಂಗ್ರೆಸ್‌ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ನವೀನ್‌ ಅವರು, ‘ನೀವು ಹಾಗೆ ವರ್ತಿಸುತ್ತೀರಿ. ಹೀಗಾಗಿ ಪಾಕಿಸ್ತಾನದ ಹೆಸರು ಹೇಳಬೇಕಾಗುತ್ತದೆ’ ಎಂದರು.

ಆಗ ವಿವರಣೆ ನೀಡಿದ ಹರಿಪ್ರಸಾದ್‌ ಅವರು, ‘ನಾವು ಯಾರೂ ಪಾಕಿಸ್ತಾನಕ್ಕೆ ಹೋಗಿಲ್ಲ. ನಿಮ್ಮದೇ ಪಕ್ಷದ ಮುಖ್ಯಸ್ಥರಾಗಿದ್ದವರು ಕರಾಚಿಗೆ ಹೋಗಿ ಮಹಮದ್ ಆಲಿ ಜಿನ್ನಾ ಗೋರಿ ಎದುರು ನಿಂತು, ‘ಜಿನ್ನಾ ಅವರಂತಹ ಜಾತ್ಯತೀತ ನಾಯಕ ಇನ್ನೊಬ್ಬರಿಲ್ಲ’ ಎಂದಿದ್ದರು. ನಿಮ್ಮದೇ ಪಕ್ಷದಿಂದ ಪ್ರಧಾನಿ ಆದವರು ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರ ಮೊಮ್ಮಗನ ಜನ್ಮದಿನ ಕಾರ್ಯಕ್ರಮಕ್ಕೆ ಹೋಗಿ, ಬಿರಿಯಾನಿ ತಿಂದು ಬಂದರು’ ಎಂದು ಹೇಳಿದರು.

‘ನೀವು ಪಾಕಿಸ್ತಾನವನ್ನು ಶತ್ರು ರಾಷ್ಟ್ರ ಎನ್ನುತ್ತೀರಿ. ಆದರೆ 2014ರಲ್ಲಿ ಪ್ರಧಾನಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಪ್ರಧಾನಿ ಷರೀಫ್‌ ಅವರನ್ನು ಅತಿಥಿಯಾಗಿ ಕರೆಯಿಸಿದ್ದಿರಿ. ಇದನ್ನೆಲ್ಲಾ ಮೊದಲು ನಿಲ್ಲಿಸಿ’ ಎಂದು ಆಗ್ರಹಿಸಿದರು.

‘ಇಲ್ಲಿ ನಿಂತು ಶತ್ರು ರಾಷ್ಟ್ರ ಎಂದು ಕರೆಯುವ ಬದಲು ಪಾಕಿಸ್ತಾನಕ್ಕೆ ದನದಮಾಂಸ, ಬಟ್ಟೆಯ ರಫ್ತು ಹಾಗೂ ಅಲ್ಲಿಂದ ಸಕ್ಕರೆ ಆಮದನ್ನು ನಿಷೇಧಿಸಿ. ದೆಹಲಿಯಲ್ಲಿ ಇರುವ ಪಾಕಿಸ್ತಾನದ ರಾಯಭಾರ ಕಚೇರಿಯನ್ನು ಖಾಲಿ ಮಾಡಿಸಿ. ಪಾಕಿಸ್ತಾನದ ಶತ್ರು ರಾಷ್ಟ್ರ ಎಂಬುದು ನಿಮ್ಮ ಭಾವನೆ ಇರಬಹದು, ನಮ್ಮ ವಿದೇಶಾಂಗ ನೀತಿಯಲ್ಲಿ ಅದು ಇಲ್ಲ. ಯಾರೋ ಬೀದಿಯಲ್ಲಿ ನಿಂತವರು ಅದನ್ನು ನಿರ್ಧರಿಸಲು ಸಾಧ್ಯವಿಲ್ಲ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ‘ಪಾಕಿಸ್ತಾನ ನಮ್ಮ ಶತ್ರು ದೇಶ’ ಎಂದು ಅಧಿಕೃತವಾಗಿ ಘೋಷಿಸಿಬಿಡಿ. ಆನಂತರ ನಾವೂ ಹಾಗೇ ಕರೆಯೋಣ’ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.