ADVERTISEMENT

ವಿಧಾನಪರಿಷತ್‌ನಲ್ಲಿ ಅರಮನೆ ಮಸೂದೆ ಅಂಗೀಕಾರ: ವಿಪಕ್ಷ ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 16:06 IST
Last Updated 10 ಮಾರ್ಚ್ 2025, 16:06 IST
   

ಬೆಂಗಳೂರು: ವಿರೋಧ ಪಕ್ಷಗಳಾದ ಬಿಜೆಪಿ–ಜೆಡಿಎಸ್‌ ಸದಸ್ಯರ ವಿರೋಧ, ಸಭಾತ್ಯಾಗದ ನಡುವೆ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಮಸೂದೆ ವಿಧಾನಪರಿಷತ್‌ನಲ್ಲಿ ಅಂಗೀಕಾರವಾಯಿತು. 

ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಮಸೂದೆಯನ್ನು ಕಾನೂನು ಸಚಿವ ಎಚ್‌.ಕೆ. ಪಾಟೀಲ ವಿಧಾನಪರಿಷತ್‌ನಲ್ಲಿ ಸೋಮವಾರ ಮಂಡಿಸಿದರು. ಮಸೂದೆಗೆ ಬಿಜೆಪಿ–ಜೆಡಿಎಸ್‌ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ಎನ್‌. ರವಿಕುಮಾರ್, ಬಿಜೆಪಿಯ ಸಿ.ಟಿ. ರವಿ, ಎಚ್‌. ವಿಶ್ವನಾಥ್‌, ಜೆಡಿಎಸ್‌ನ ಎಸ್‌.ಎಲ್‌. ಬೋಜೇಗೌಡ, ಟಿ.ಎ. ಶರವಣ ಮತ್ತಿತರರು, ‘ಮೈಸೂರು ಭಾಗದ ಜನರ ಕಲ್ಯಾಣಕ್ಕೆ ಒಡೆಯರ್‌ ವಂಶದ ಕೊಡುಗೆ ಅಪಾರವಾದುದು. ಸ್ವಾತಂತ್ರ್ಯಾ ನಂತರ ಯಾವ ಷರತ್ತೂ ಇಲ್ಲದೆ ಮೈಸೂರು ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಿದರು. ನಂತರ ಜಾರಿಗೆ ಬಂದ ಭೂ ಸುಧಾರಣಾ ಕಾಯ್ದೆ ಸೇರಿದಂತೆ ಹಲವು ಜನಪರ ಕಾರ್ಯಗಳಿಗೆ ಉದಾರವಾಗಿ ಭೂಮಿ ಬಿಟ್ಟುಕೊಟ್ಟಿದ್ದರು. ಇಂದು ರಾಜವಂಶ ಆರ್ಥಿಕ ಸಂಕಷ್ಟದಲ್ಲಿದೆ. ರಾಜ್ಯ ಸರ್ಕಾರ ಅವರ ವಿರುದ್ಧ ಕಾಯ್ದೆ ರೂಪಿಸಬಾರದು’ ಎಂದು ಒತ್ತಾಯಿಸಿದರು.

ADVERTISEMENT

ಅರಮನೆ ಮೈದಾನ ಸುತ್ತಲ ಪ್ರದೇಶದಲ್ಲಿನ ಭೂಮಿಯ ಮಾರ್ಗಸೂಚಿ ದರದಂತೆ ಲೆಕ್ಕ ಹಾಕಿದರೆ ವಶಪಡಿಸಿಕೊಳ್ಳುವ 15 ಎಕರೆ ಜಮೀನಿಗೆ ಸುಪ್ರೀಂ ಕೋರ್ಟ್‌ ನಿಗದಿ ಮಾಡಿದ ಮೊತ್ತ ಸರಿಯಾಗಿದೆ. ಅದು ಹೆಚ್ಚು ಎನಿಸಿದರೆ ರಾಜವಂಶಸ್ಥರ ಜತೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಮಸೂದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಅಧಿಕ ಪರಿಹಾರ ನೀಡಲು ವಿರೋಧ ವ್ಯಕ್ತಪಡಿಸಿತ್ತು. ರಾಜಕೀಯ ಕಾರಣಗಳಿಗಾಗಿ ಈಗ ಮಸೂದೆ ವಿರುದ್ಧ ನಿಂತಿದ್ದಾರೆ. ಅಷ್ಟಕ್ಕೂ ಭೂ ಮಾಲೀಕತ್ವದ ವಿಚಾರವೇ ಇತ್ಯರ್ಥವಾಗಿಲ್ಲ ಎಂಬ ಸಚಿವ ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂರಾವ್, ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಮೊದಲಾದವರ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ವಾಗ್ವಾದದ ನಂತರ ಬಿಜೆಪಿ–ಜೆಡಿಸ್‌ ಸದಸ್ಯರು ಸಭಾತ್ಯಾಗ ಮಾಡಿದರು. ಮಸೂದೆ ಅಂಗೀಕಾರವಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.