ADVERTISEMENT

ಹಿಂದುಳಿದ ವರ್ಗಗಳ 2ಎ ಪಟ್ಟಿಗೆ ಸೇರಿಸುವಂತೆ 24 ದಾಖಲೆ ಸಲ್ಲಿಸಿದ ಪಂಚಮಸಾಲಿ ನಿಯೋಗ

ಪಂಚಮಸಾಲಿ ಸಮುದಾಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 2:53 IST
Last Updated 7 ಡಿಸೆಂಬರ್ 2021, 2:53 IST
ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮೀಸಲಾತಿ ಬೇಡಿಕೆ ಕುರಿತು ಪರಾಮರ್ಶಿಸುತ್ತಿರುವ ಸಮಿತಿಯ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ಅವರಿಗೆ ದಾಖಲೆಗಳನ್ನು ಸಲ್ಲಿಸಿದರು. ಪಂಚಮಸಾಲಿ ಸಮುದಾಯದ ಮುಖಂಡ ಚಂದ್ರಶೇಖರ ಪೂಜಾರ್‌, ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ವಕೀಲ ಬಿ.ಎಸ್‌. ಪಾಟೀಲ ಮತ್ತು ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಇದ್ದರು – ಪ್ರಜಾವಾಣಿ ಚಿತ್ರ
ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮೀಸಲಾತಿ ಬೇಡಿಕೆ ಕುರಿತು ಪರಾಮರ್ಶಿಸುತ್ತಿರುವ ಸಮಿತಿಯ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ಅವರಿಗೆ ದಾಖಲೆಗಳನ್ನು ಸಲ್ಲಿಸಿದರು. ಪಂಚಮಸಾಲಿ ಸಮುದಾಯದ ಮುಖಂಡ ಚಂದ್ರಶೇಖರ ಪೂಜಾರ್‌, ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ವಕೀಲ ಬಿ.ಎಸ್‌. ಪಾಟೀಲ ಮತ್ತು ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಪಂಚಮಸಾಲಿ ಸಮು ದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2–ಎ ಪಟ್ಟಿಗೆ ಸೇರಿಸುವ ಬೇಡಿಕೆ ಕುರಿತು ಅಧ್ಯಯನ ನಡೆಸುತ್ತಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ.ಅಡಿ ನೇತೃತ್ವದ ಸಮಿತಿ ಎದುರು ಸೋಮವಾರ ಹಾಜರಾದ ಹರಿಹರ ಪಂಚಮಸಾಲಿ ಪೀಠದ ವಚನಾ ನಂದ ಸ್ವಾಮೀಜಿ ನೇತೃತ್ವದ ನಿಯೋ‌ಗ, ತಮ್ಮ ಬೇಡಿಕೆಗೆ ಪೂರಕವಾಗಿ 24 ದಾಖಲೆಗಳನ್ನು ಸಲ್ಲಿಸಿತು.

ಪಂಚಮಸಾಲಿ ಮಠಾಧೀಶರು ಮತ್ತು ಮುಖಂಡರ ನಿಯೋಗದ ಪರವಾಗಿ ವಾದ ಮಂಡಿಸಿದ ವಕೀಲ ಬಿ.ಎಸ್‌.ಪಾಟೀಲ, ‘1871 ರಲ್ಲೇ ಪಂಚಮಸಾಲಿ ಲಿಂಗಾಯತರನ್ನು ಶೂದ್ರರು ಎಂದು ಗುರುತಿಸಲಾಗಿತ್ತು. 1919ರ ಮಿಲ್ಲರ್ಸ್‌ ಆಯೋಗದ ವರದಿಯಲ್ಲೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಈ ಎಲ್ಲವನ್ನೂ ಪರಿಗಣಿಸಿ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2–ಎ ಪಟ್ಟಿಗೆ ಸೇರಿಸಿ, ಮೀಸಲಾತಿ ನೀಡಬೇಕು’ ಎಂದು ಮನವಿ ಮಾಡಿದರು.

ಚಿನ್ನಪ್ಪರೆಡ್ಡಿ ಮತ್ತು ಎಲ್‌.ಜಿ.ಹಾವನೂರು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗಗಳು ಪಂಚಮಸಾಲಿ ಲಿಂಗಾಯತರ ಕುರಿತು ಸರಿಯಾದ ಸಮೀಕ್ಷೆ ನಡೆಸಿಲ್ಲ. ಈ ಕಾರಣದಿಂದ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೀಸಲಾತಿ ದೊರಕಿಲ್ಲ. ಈ ಎಲ್ಲ ಲೋಪಗಳನ್ನು ಸರಿಪಡಿಸಿ ಪಂಚಮಸಾಲಿಗಳಿಗೆ 2–ಎ ಪ್ರವರ್ಗದಡಿ ಮೀಸಲಾತಿ ಕಲ್ಪಿಸಬೇಕು ಎಂದರು.

ADVERTISEMENT

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ 1879 ರಿಂದಲೂ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಪ್ರಕಟವಾದ ವಿವಿಧ ತೀರ್ಪುಗಳು, ಇತ್ತೀಚಿನ ವರ್ಷಗಳಲ್ಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳು ಸೇರಿದಂತೆ 24 ದಾಖಲೆಗಳನ್ನು ಸಮಿತಿಗೆ ಸಲ್ಲಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಚನಾನಂದ ಸ್ವಾಮೀಜಿ, ‘ಕೃಷಿಯೇ ಪಂಚಮಸಾಲಿ ಲಿಂಗಾಯಿತ ಸಮುದಾಯದ ಮೂಲ ಕಸುಬಾಗಿತ್ತು. ಆದರೆಈವರೆಗೆ ಸರಿಯಾದ ಮೀಸಲಾತಿ ದೊರಕಿಲ್ಲ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2–ಎ ಅಡಿಯಲ್ಲಿ ಮೀಸಲಾತಿ ನೀಡಬೇಕು ಎಂಬುದು ನಮ್ಮ ಬೇಡಿಕೆ. ಅದಕ್ಕೆ ಪೂರಕವಾದ ಮಹತ್ವದ ದಾಖಲೆಗಳನ್ನು ಸಮಿತಿಗೆ ಸಲ್ಲಿಸಿದ್ದೇವೆ’ ಎಂದರು.

ಪ್ರವರ್ಗ 2–ಎ ಅಡಿಯಲ್ಲಿ ಮೀಸಲಾತಿ ಪಡೆಯಲು ಪಂಚಮಸಾಲಿ ಲಿಂಗಾಯತ ಸಮುದಾಯ ಎಲ್ಲ ರೀತಿಯಿಂದಲೂ ಅರ್ಹವಾಗಿದೆ. ತಮ್ಮ ಬೇಡಿಕೆಯನ್ನು ಸಮಿತಿ ಪುರಸ್ಕರಿಸುವ ವಿಶ್ವಾಸವಿದೆ ಎಂದು ಹೇಳಿದರು.

ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ,ಮನ ಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಪಂಚಮಸಾಲಿ ಮುಖಂಡರಾದ ಬಸವರಾಜದಿಂಡೂರ, ಸೋಮನಗೌಡ ಪಾಟೀಲ, ಚಂದ್ರಶೇಖರ ಪೂಜಾರ, ವಸಂತಾ ಹುಲ್ಲತ್ತಿ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.