ADVERTISEMENT

2ಎ ಮೀಸಲಾತಿ: ಗಡುವು ನೀಡಿಲ್ಲವೆಂದ ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 16:12 IST
Last Updated 16 ಡಿಸೆಂಬರ್ 2021, 16:12 IST
ಪಂಚಮಸಾಲಿ ಸಮಾಜದವರ ಸಭೆ
ಪಂಚಮಸಾಲಿ ಸಮಾಜದವರ ಸಭೆ   

ಬೆಳಗಾವಿ: 'ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿ ನೀಡುವ ಸಂಬಂಧ ಗಡುವು ಕೊಟ್ಟಿಲ್ಲ. ಆದರೆ, ಸಮಯ ಬೇಕು ಎನ್ನುವುದು ಅವರಿಗೂ ಗೊತ್ತಾಗಿದೆ. ವರದಿ ಬಂದ ಕೂಡಲೇ ಮುಂದಿನ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪಂಚಮಸಾಲಿ ಸಮಾಜದವರ ಸಭೆಯ ನಂತರ ಪತ್ರಕರ್ತರೊಂದಿಗೆ ಸಿಎಂ ಬೊಮ್ಮಾಯಿ ಮಾತನಾಡಿದರು.

'ಹಿಂದುಳಿದ ವರ್ಗ 2ಎ ಮೀಸಲಾತಿ ಬಗ್ಗೆ ಚರ್ಚೆ ನಡೆದಿದೆ. ಅವರ‌ ಮನಸ್ಸಿನಲ್ಲಿದ್ದ ಹಲವಾರು ವಿಚಾರ ನನಗೆ ಹೇಳಿದ್ದಾರೆ. ನಾನು ಸುಪ್ರೀಂ ಕೋರ್ಟ್ ತೀರ್ಪು ಸೇರಿದಂತೆ ಕಾನೂನಿಗೆ ಸಂಬಂಧಿಸಿದ ವಿಚಾರಗಳ ಹೇಳಿದ್ದೇನೆ' ಎಂದರು.

ADVERTISEMENT

'ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ‌ ನಾವು ಶಿಪಾರಸು ಮಾಡಿದ್ದೇವೆ. ಆ ವರದಿ ಬಂದ ಕೂಡಲೇ ಸಚಿವ ಸಂಪುಟ ಸಭೆಯಲ್ಲಿಟ್ಟು ಚರ್ಚಿಸಿ ತೀರ್ಮಾನ ಮಾಡುತ್ತೇವೆ' ಎಂದು ಸ್ಪಷ್ಟಪಡಿಸಿದರು.

ಬೆಳಗಾವಿಯಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯ ನಿರ್ಣಯಗಳು

* ಮುಂಬರುವ ಜ.14ರಂದು ಮಕರ‌ ಸಂಕ್ರಾಂತಿ ದಿನದಂದು ಕೂಡಲಸಂಗಮದಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಡೆಸಿದ ಪಾದಯಾತ್ರೆಗೆ ವರ್ಷ ತುಂಬುವ ಹಿನ್ನೆಲೆಯಲ್ಲಿ 'ಮೀಸಲಾತಿಗಾಗಿ ಪಂಚಮಸಾಲಿಗಳ ಆಕ್ರೋಶ' ಎಂಬ ಘೋಷಣೆಯೊಂದಿಗೆ ಅಂತಿಮ ಚಳವಳಿಯ ಅಂತಿಮ ಘೋಷಣೆ ಮಾಡಲಾಗುವುದು.

* ಡಿ.23ರಂದು ಸ್ವಾಮೀಜಿ ಜನ್ಮ ದಿನದ ಅಂಗವಾಗಿ ಪಂಚಮಸಾಲಿ ಮೀಸಲಾತಿ ಚಳವಳಿ ಭಾಗವಾಗಿ ರಕ್ತವನ್ನು ಕೊಡುತ್ತೇವೆ ಮೀಸಲಾತಿ ಪಡೆತಲಯುತ್ತೇವೆ ಎಂದ ಘೋಷಣೆಯೊಂದಿಗೆ 'ರಕ್ತದಾಸೋಹ' ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸುವುದು.

* ಮಾರ್ಚ್ ಒಳಗೆ ಮೀಸಲಾತಿ ಘೋಷಿಸಬೇಕು.

* ಶೀಘ್ರದಲ್ಲೇ ಮೀಸಲಾತಿ ‌ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ಹಿನ್ನೆಲೆಯಲ್ಲಿ ಅವರ ಮೇಲೆ ಮತ್ತೊಮ್ಮೆ‌ ವಿಶ್ವಾಸ ಇಡುವುದು.

ಸಭೆಗೆ ನಿರಾಣಿ ಗೈರು

ಬೆಳಗಾವಿಯಲ್ಲೇ ಇದ್ದರೂ ಸಚಿವ ಮುರುಗೇಶ ನಿರಾಣಿ ಗೈರು ಹಾಜರಾದರು.ಸಚಿವರಾದ ಶಂಕರ ಪಾಟೀಲ ಮುನೇಕೊಪ್ಪ, ಸಿ.ಸಿ. ಪಾಟೀಲ,ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ಸಿದ್ದು ಸವದಿ, ಅರವಿಂದ ಬೆಲ್ಲದ, ಮಹೇಶ ಕುಮಠಳ್ಳಿ, ಆನಂದ ಮಾಮನಿ, ಲಕ್ಷ್ಮಿ ಹೆಬ್ಬಾಳ್ಕರ, ಚನ್ನರಾಜ ಹಟ್ಟಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮುಖಂಡರಾದ ವಿಜಯಾನಂದ ಕಾಶಪ್ಪನವರ, ರಾಜು ಕಾಗೆ, ಎಚ್.ಎಸ್.‌ ಶಿವಶಂಕರ್, ಮಲ್ಲೇಶ್ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.