ADVERTISEMENT

ಪಂಚಮಸಾಲಿ 2ಎ ಮೀಸಲಾತಿಗಾಗಿ ಪ್ರಾಣ ಕೊಡಲು ಸಿದ್ಧ: ವಚನಾನಂದ ಸ್ವಾಮೀಜಿ

ಮೂಗಿಗೆ ತುಪ್ಪ ಸವರುವ ಕೆಲಸ ಬೇಡ: ವಚನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 21:02 IST
Last Updated 7 ಡಿಸೆಂಬರ್ 2022, 21:02 IST
ವಚನಾನಂದ ಸ್ವಾಮೀಜಿ
ವಚನಾನಂದ ಸ್ವಾಮೀಜಿ   

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2–ಎ ಪಟ್ಟಿಯಲ್ಲಿ ಮೀಸಲಾತಿ ನೀಡಬೇಕೆಂಬ ಬೇಡಿಕೆ ಈಡೇರಿಕೆಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಂಗಳವಾರ ಭೇಟಿಮಾಡಿದ ಪಂಚಮಸಾಲಿ ಸಮುದಾಯದ ಮುಖಂಡರ ನಿಯೋಗ, ಮೀಸಲಾತಿಗೆ ಸಂಬಂಧಿಸಿದ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸುವಂತೆ ಮನವಿ ಸಲ್ಲಿಸಿತು. ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಮುಖ್ಯಮಂತ್ರಿಯವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸ್ವಾಮೀಜಿ ಮಾತನಾಡಿದರು.

‘28 ವರ್ಷಗಳಿಂದ ಪಂಚಮಸಾಲಿ ಸಮುದಾಯ 2–ಎ ಪಟ್ಟಿಯಡಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದೆ. ಈವರೆಗೂ ಅದು ಈಡೇರಿಲ್ಲ. ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ. ಇನ್ನೂ ಮೂಗಿಗೆ ತುಪ್ಪ ಸವರುವ ಕೆಲಸ ಬೇಡ. ಇದು ಕೊನೆಯ ಮನವಿ. ಇನ್ನು ಮತ್ತೆ ಮನವಿ ಸಲ್ಲಿಸುವುದಿಲ್ಲ. ನಮ್ಮ ಪ್ರಾಣ ತ್ಯಾಗದಿಂದ ಮೀಸಲಾತಿ ಸಿಗುವುದಾದರೆ ಅದಕ್ಕೂ ಸಿದ್ಧ’ ಎಂದು ಹೇಳಿದರು.

ADVERTISEMENT

ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಮತ್ತು ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಬರುವುದು ವಿಳಂಬವಾಗುತ್ತಿದೆ. ತಕ್ಷಣವೇ ವರದಿ ಪಡೆದು ಮೀಸಲಾತಿ ನೀಡಬೇಕು. ಕೆಲವರು ಜೋಕರ್‌ಗಳ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಆ ಬಗ್ಗೆ ಮಾತನಾಡುವುದಿಲ್ಲ. ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಮುನ್ನವೇ ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ‘ಹಿಂದೆ ಪಂಚಮಸಾಲಿ ಸಮುದಾಯ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರಲಿಲ್ಲ. ಬಿ.ಎಸ್‌. ಯಡಿಯೂರಪ್ಪ ಅವರ ಪ್ರಯತ್ನದಿಂದ ಆಗಿದೆ. ಪ್ರವರ್ಗ 2–ಎ ಪಟ್ಟಿಗೆ ಸೇರಿಸುವಂತೆ 2016ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆಗ, ಹಿಂದುಳಿದ ವರ್ಗಗಳ ಆಯೋಗ ಮನವಿಯನ್ನು ತಿರಸ್ಕರಿಸಿತ್ತು. ಈಗ ಮತ್ತೆ ಬೇಡಿಕೆಯ ಆಯೋಗದಿಂದ ವರದಿ ಕೇಳಲಾಗಿದೆ. ಸಂವಿಧಾನಬದ್ಧವಾಗಿಯೇ ತೀರ್ಮಾನಕ್ಕೆ ಬರಬೇಕಾಗುತ್ತದೆ’ ಎಂದು ಹೇಳಿದರು.

‘ವಿವಿಧ ರಾಜ್ಯಗಳಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಕೈಗೊಂಡಿರುವ ತೀರ್ಮಾನಗಳನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಅಂತಹ ಪರಿಸ್ಥಿತಿ ಉದ್ಧವಿಸದಂತೆ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕಿದೆ. ಆಯೋಗದ ವರದಿ ಬಂದ ತಕ್ಷಣ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸಚಿವರಾದ ಮುರುಗೇಶ ನಿರಾಣಿ, ಶಂಕರಪಾಟೀಲ ಮುನೇನಕೊಪ್ಪ, ಶಾಸಕ
ಅರುಣ್‌ ಕುಮಾರ್‌ ಪೂಜಾರ್, ಮುಂಖಡರಾದ ಬಿ.ಸಿ. ಉಮಾಪತಿ, ಬಸವರಾಜ ದಿಂಡೂರ ನಿಯೋಗದಲ್ಲಿದ್ದರು.

--

ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಭೇಟಿಯಾದ ಸಮುದಾಯ ಮುಖಂಡರು

ಆಯೋಗದ ವರದಿ ಬಂದ ತಕ್ಷಣ ನಿರ್ಧಾರ ಕೈಗೊಳ್ಳಲಾಗುವುದು: ಸಿ.ಎಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.