ADVERTISEMENT

ಗ್ರಾ.ಪಂ.ಅಧ್ಯಕ್ಷ ಕೊಲೆ ಪ್ರಕರಣ: ಆರು ಜನರಿಗೆ ಜೀವಾವಧಿ ಶಿಕ್ಷೆ, ಇಬ್ಬರ ಖುಲಾಸೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 17:08 IST
Last Updated 1 ಅಕ್ಟೋಬರ್ 2018, 17:08 IST
   

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕು ದೊಡ್ಡಕಲ್ಲಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನಿಸ್ವಾಮಿಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ಈ ಕುರಿತಂತೆ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಲೇವಾರಿ ಮಾಡಿದೆ.

ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸುವಂತೆ ಕೋರಿ ಆರೋಪಿಗಳಾದ ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ, ತಿಮ್ಮರಾಯಪ್ಪ, ಬಿ.ಟಿ.ರಿಷಿಕುಮಾರ್, ಹರಿಪ್ರಸಾದ್, ಮೊಹಮದ್‌ ಪೀರ್‌ ಮತ್ತು ಅರುಣ ಕುಮಾರ್ ಮೇಲ್ಮನವಿ ಸಲ್ಲಿಸಿದ್ದರು. ಇವರೆಲ್ಲರಿಗೂ ನ್ಯಾಯಪೀಠ ಶಿಕ್ಷೆ ಕಾಯಂಗೊಳಿಸಿದೆ.

ADVERTISEMENT

ಪ್ರಕರಣದ ಏಳು ಮತ್ತು ಎಂಟನೇ ಆರೋಪಿಗಳಾದ ಮೂರ್ತಿ ಹಾಗೂ ಶಾಂತಕುಮಾರ್ ಅವರನ್ನು ಖುಲಾಸೆಗೊಳಿಸಿದೆ.

ನ್ಯಾಯದ ಅಣಕವಾಗಬಾರದು: ‘ಕೊಲೆ ಪ್ರಕರಣದಲ್ಲಿ ಸಾಕ್ಷಿದಾರ ವಿಚಾರಣೆ ವೇಳೆ ಹಿಂದೆ ಸರಿದಾಕ್ಷಣ ಆರೋಪಿಯನ್ನು ತಪ್ಪಿತಸ್ಥ ಅಲ್ಲ ಎಂದು ಹೇಳಿದರೆ ಅದು ನ್ಯಾಯದಾನದ ಅಣಕವಾಗುತ್ತದೆ’ ಎಂಬ ಸುಪ್ರೀಂ ಕೋರ್ಟ್‌ ಅಭಿಪ್ರಾಯವನ್ನು ನ್ಯಾಯಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

‘ಈ ಪ್ರಕರಣದಲ್ಲಿ ಸಾಕ್ಷಿದಾರರು ‍ಪಾಟೀ ಸವಾಲಿಗೆ ಉತ್ತರಿಸುವಾಗ, ಆರೋಪಿಯು ನನ್ನ ಸಂಬಂಧಿ. ಅವರನ್ನು ರಕ್ಷಣೆ ಮಾಡುವುದಕ್ಕಾಗಿ ಹಿಂದೆ ಸರಿದಿದ್ದೇನೆ ಎಂಬ ಅಂಶವನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸಾಕ್ಷಿ ಇಲ್ಲ ಎಂದು ಪ್ರಾಸಿಕ್ಯೂಷನ್‌ ಕೈತೊಳೆದುಕೊಳ್ಳಲು ಬರುವುದಿಲ್ಲ’ ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ‘ಮುನಿಸ್ವಾಮಿ(37) ಅವರನ್ನು ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ 2006ರ ಅಕ್ಟೋಬರ್ 8ರಂದು ಕೊಲೆ ಮಾಡಲಾಗಿತ್ತು.

‘ಘಟನೆ ನಡೆದ ದಿನ ಬೆಳಿಗ್ಗೆ ಮುನಿಸ್ವಾಮಿಮತ್ತು ಅವರ ಅಳಿಯ ಕೆ.ಬಿ.ರವೀಶ್‌ ಕಗ್ಗಲೀಪುರ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಚುನಾವಣಾ ಪ್ರಚಾರಕ್ಕಾಗಿ ತುರಹಳ್ಳಿಗೆ ತೆರಳುತ್ತಿದ್ದರು. ಆಗ ಮಾರ್ಗಮಧ್ಯೆ ವಿಶ್ವನಾಥ ಅವರ ತೋಟದ ಬಳಿ 7.50ರ ವೇಳೆಗೆ ಕುಳ್ಳ ಸೀನ ಸೇರಿದಂತೆ ಒಟ್ಟು ಎಂಟುಜನ ಆರೋಪಿಗಳು ಕಾರನ್ನು ಅಡ್ಡಗಟ್ಟಿ ಮುನಿಸ್ವಾಮಿಅವರ ಮೇಲೆ ಹಲ್ಲೆ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಲಾಗಿತ್ತು.

ಜೆಡಿಎಸ್‌ಗೆ ಸೇರಿದ್ದ ಮುನಿಸ್ವಾಮಿ ದೊಡ್ಡಕಲ್ಲಸಂದ್ರ ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ಮುಖಂಡ ಶ್ರೀನಿವಾಸ ಇವರ ಪ್ರತಿಸ್ಪರ್ಧಿಯಾಗಿದ್ದರು. ಮುನಿಸ್ವಾಮಿಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಪ್ರಾಸಿಕ್ಯೂಷನ್‌ ಪರ ಐ.ಎಸ್‌.ಪ್ರಮೋದ ಚಂದ್ರ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.