ADVERTISEMENT

ವಿಧಾನಪರಿಷತ್‌ | ಪಂಚಾಯಿತಿಗಳಿಗೆ ಏಕಕಾಲದಲ್ಲಿ ಚುನಾವಣೆ: ಸಚಿವ ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 16:09 IST
Last Updated 13 ಆಗಸ್ಟ್ 2025, 16:09 IST
<div class="paragraphs"><p>ಪ್ರಿಯಾಂಕ್‌ ಖರ್ಗೆ</p></div>

ಪ್ರಿಯಾಂಕ್‌ ಖರ್ಗೆ

   

ಬೆಂಗಳೂರು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು, ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಸಮಗ್ರ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ವಿಧಾನಪರಿಷತ್‌ನಲ್ಲಿ ಗಮನ ಸೆಳೆಯುವ ಸೂಚನೆಯಡಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಹಾಗೂ ಬಿಜೆಪಿಯ ಡಿ.ಎಸ್‌. ಅರುಣ್‌ ಅವರ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಶೀಘ್ರ ಚುನಾವಣೆ ನಡೆಸುವ ವಿಷಯದ ಬಗ್ಗೆ ಅವರು ಉತ್ತರ ನೀಡಿದರು.

ADVERTISEMENT

‘ಸ್ಥಳೀಯ ಸಂಸ್ಥೆಗಳಿಗೆ ಬೇಗ ಚುನಾವಣೆ ನಡೆಯಬೇಕು ಎಂಬುದನ್ನು ನಾನೂ ಒಪ್ಪುತ್ತೇನೆ. ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಂಡು, ಕಗ್ಗಂಟು ಸರಿಪಡಿಸಿಕೊಂಡು ಮೀಸಲಾತಿಯನ್ನು ಪ್ರಕಟಿಸುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರ ಚುನಾವಣೆ ನಡೆಸಲಾಗುತ್ತದೆ’ ಎಂದರು.

‘ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುವುದರಿಂದ ಐದು ವರ್ಷದಲ್ಲಿ ಒಂದೂವರೆ ವರ್ಷ ಚುನಾವಣೆ ಪ್ರಕ್ರಿಯೆಯಲ್ಲೇ ಮುಗಿದುಹೋಗುತ್ತದೆ. ಕೆಲಸಗಳು ಆಗುವುದಿಲ್ಲ. ಒಂದೇ ಬಾರಿಗೆ ಮೂರು ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕು’ ಎಂದು ಮಂಜುನಾಥ ಭಂಡಾರಿ ಒತ್ತಾಯಿಸಿದರು.

‘ಒಂದೇ ಬಾರಿ ಚುನಾವಣೆ ನಡೆಯುವುದಕ್ಕೆ ಕಾಯ್ದೆಗೆ ತಿದ್ದುಪಡಿ ತರಬೇಕೇ? ಸಂವಿಧಾನಕ್ಕೆ ತಿದ್ದುಪಡಿಯಾಗಬೇಕೇ? ಎಂಬುದರ ಬಗ್ಗೆ ಅಧ್ಯಯನದ ಅಗತ್ಯವಿದೆ. ಕೇರಳದಲ್ಲಿ ಏಕ ಕಾಲದಲ್ಲಿ, ಐದು ವರ್ಷಕ್ಕೆ ಸರಿಯಾಗಿ ಚುನಾವಣೆ ನಡೆಯುತ್ತಿದೆ ಎಂದು ಹೇಳಿದ್ದೀರಿ. ಎಲ್ಲವನ್ನೂ ಪರಿಶೀಲಿಸಿ, ವರದಿ ಸಲ್ಲಿಸಲು ಸಮಿತಿ ರಚಿಸಲಾಗುತ್ತದೆ’ ಎಂದು ಪ್ರಿಯಾಂಕ್‌ ಹೇಳಿದರು.

‘ತಾಲ್ಲೂಕು ಪಂಚಾಯಿತಿಗಳನ್ನೇ ಕೈಬಿಡಬೇಕೆಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಪಂಚಾಯಿತಿಗಳು ಸರಳೀಕರಣವಾಗಿ, ಸಬಲೀಕರಣವಾಗಬೇಕು. ಸದಸ್ಯರ ಗೌರವಧನ ಹೆಚ್ಚಿಸಲು ಆರ್ಥಿಕ ಇಲಾಖೆಗೆ ಹೋಗಿದ್ದ ಪ್ರಸ್ತಾವ ವಾಪಸ್‌ ಬಂದಿದೆ. ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

‘ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಮಾಡಿದರಷ್ಟೇ ಸಾಲದು, ಆಡಳಿತಾತ್ಮಕ ಅಧಿಕಾರ ಕೊಡಬೇಕು. ಎಲ್ಲದ್ದಕ್ಕೂ ಸರ್ಕಾರವನ್ನೇ ಕೇಳಬೇಕು ಎಂಬ ಪರಿಸ್ಥಿತಿ ಇದೆ. ಬರೀ ಚುನಾವಣೆ ಮಾಡಿ, ಕೈಕಟ್ಟಬೇಡಿ’ ಎಂದು ಕಾಂಗ್ರೆಸ್‌ನ ಬಲ್ಕೀಸ್‌ ಬಾನು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.