ಹೈಕೋರ್ಟ್ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (ಒಳಚಿತ್ರ)
ಬೆಂಗಳೂರು: ಎರಡೂ ಕೈಗಳನ್ನು ಕಳೆದುಕೊಂಡಿದ್ದರೂ ರಾಷ್ಟ್ರೀಯ ಪ್ಯಾರಾಲಿಂಪಿಕ್ ಈಜು ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದು ದೇಶದ ಕೀರ್ತಿ ಮೆರೆಸಿದ ನಗರದ ಈಜುಗಾರನಿಗೆ ನ್ಯಾಯಯುತವಾಗಿ ದಕ್ಕಬೇಕಾದ ₹ 6 ಲಕ್ಷ ನಗದು ಬಹುಮಾನದಲ್ಲಿ ಬಾಕಿ ₹ 1.26 ಲಕ್ಷ ಪಾವತಿ ಮಾಡದೆ ಕಂಬದಿಂದ ಕಂಬಕ್ಕೆ ಅಲೆದಾಡಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ₹ 2 ಲಕ್ಷದಂಡ ಹಾಕುವ ಮೂಲಕ ತಪರಾಕಿ ಬೀಸಿದೆ.
ಈ ಸಂಬಂಧ ಕೆ.ಎಸ್.ವಿಶ್ವಾಸ್ (34) ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ದಂಡದ ಮೊತ್ತವನ್ನು ದಾವೆಯ ಖರ್ಚಿನ ರೂಪದಲ್ಲಿ ಅರ್ಜಿದಾರರಿಗೆ ಎರಡು ವಾರಗಳಲ್ಲಿ ಪಾವತಿಸಬೇಕು’ ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ. ಅಂತೆಯೇ, ‘ಅಂಗವಿಕಲ ಸಾಧಕನ ಬಗ್ಗೆಗಿನ ಸರ್ಕಾರದ ಇಂತಹ ನಿರ್ದಯ ಉದಾಸೀನತೆ ಖಂಡನೀಯ’ ಎಂದು ಕಿಡಿ ಕಾರಿದೆ.
‘ಜೀವನದ ಭಾರಿ ಅಡೆತಡೆಗಳ ವಿರುದ್ಧ ಈಜಿ ಜಯಗಳಿಸಿದ ವ್ಯಕ್ತಿಯ ಅಪರೂಪದ ಸಾಧನೆಗೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು. ವಿಶೇಷ ಪ್ರತಿಭೆಯ ಮಾನವ ಚೈತನ್ಯಗಳಿಗೆ ಸರ್ಕಾರ ಅಂತಃಕರಣವನ್ನು ತೆರೆದು ಕಕ್ಕುಲತೆಯನ್ನು ಸ್ಫುರಿಸಬೇಕು. ಆದರೆ, ಈ ಪ್ರಕರಣದಲ್ಲಿ ಅಧಿಕಾರಿಗಳು ಅರ್ಜಿದಾರರ ಮನವಿಯನ್ನು ನಿರಾಕರಿಸಿರುವ ಮೂಲಕ ನಿರ್ದಯತೆ ತೋರಿದ್ದಾರೆ. ಇದು ನ್ಯಾಯದ ಘನತೆಯನ್ನು ಕುಗ್ಗಿಸಿದೆ. ಹೀಗಾಗಿ, ಇದಕ್ಕೆ ಕಾರಣವಾದ ಅಧಿಕಾರಿಗಳನ್ನು ಎಚ್ಚರಿಸಲು ಇದು ಸಕಾಲ’ ಎಂದು ನ್ಯಾಯಪೀಠ ಹೇಳಿದೆ.
‘ಅರ್ಜಿದಾರ ವಿಶ್ವಾಸ್ 2016 ರಿಂದ 2018ರವರೆಗಿನ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗಳಿಸಿರುವುದು ನಿಚ್ಚಳವಾಗಿದೆ. ಆದರೆ, ಇವರ ಸಾಧನೆಗೆ ಸರ್ಕಾರವೇ ಘೋಷಿಸಿದ ನಗದು ಬಹುಮಾನದ ಬಾಕಿಯನ್ನು ಆರು ವರ್ಷಗಳು ಕಳೆದರೂ ನೀಡಿಲ್ಲ. ಅದರಲ್ಲಿ ಒಂದು ರೂಪಾಯಿಯನ್ನೂ ಪಾವತಿ ಮಾಡದೆ ಅಲೆದಾಡಿಸುತ್ತಿರುವುದಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಬೇಕು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲೆ ಅಶ್ವಿನಿ ಓಬಳೇಶ್ ವಾದ ಮಂಡಿಸಿದ್ದರು.
ನಿರ್ದೇಶನ: ‘ದಂಡದ ₹2 ಲಕ್ಷ ಮೊತ್ತವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಬಂಧಿಸಿದ ಅಧಿಕಾರಿ ತನ್ನ ಜೇಬಿನಿಂದಲೇ ಪಾವತಿಸಬೇಕು. ಅಂತೆಯೇ, ₹1.26 ಲಕ್ಷ ಬಾಕಿ ಮೊತ್ತವನ್ನು ಎರಡು ವಾರಗಳ ಒಳಗಾಗಿ ವಿಶ್ವಾಸ್ ಅವರಿಗೆ ಪಾವತಿಸಬೇಕು. ಒಂದು ವೇಳೆ ಪಾವತಿ ಮಾಡದೇ ಹೋದರೆ ಎರಡು ವಾರಗಳ ನಂತರದ ದಿನದಿಂದ ಪೂರ್ಣ ಮೊತ್ತವನ್ನು ಪಡೆಯುವತನಕ ದಿನಂಪ್ರತಿ ₹1 ಸಾವಿರ ಹೆಚ್ಚುವರಿ ದಂಡವನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯಾಗಬೇಕು. ಇದೂ ಕೂಡಾ ನಾಲ್ಕು ವರಗಳ ಒಳಗಾಗಿ ಆಗತಕ್ಕದ್ದು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಸರ್ಕಾರದ ಕರ್ತವ್ಯ ಕೇವಲ ಆಡಳಿತಾತ್ಮಕ ಅಂಶಗಳನ್ನಷ್ಟೇ ಅವಲಂಬಿಸಬಾರದು ಮತ್ತು ಅಧಿಕಾರಶಾಹಿ ತಾಂತ್ರಿಕ ಅಂಶಗಳಿಗೆ ಮಾತ್ರವೇ ಒತ್ತು ನೀಡತಕ್ಕದ್ದಲ್ಲ. ಅದು ನೈತಿಕ, ಸಾಂವಿಧಾನಿಕ ಮತ್ತು ಮಾನವೀಯತೆಯ ಕಮಂಡಲವಾಗಿರಬೇಕು.– ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.