ADVERTISEMENT

ಸಿಂಡಿಕೇಟ್‌ಗಳಿಗೆ ನೇಮಕ: ತಜ್ಞರ ಸಮಿತಿ ರಚನೆಗೆ ಪತ್ರ ಬರೆದು ಪರಮೇಶ್ವರ ಆಗ್ರರ

ಸಿಂಡಿಕೇಟ್‌ಗಳಿಗೆ ನೇಮಕ: ತಜ್ಞರ ಸಮಿತಿ ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 19:09 IST
Last Updated 22 ಸೆಪ್ಟೆಂಬರ್ 2018, 19:09 IST

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ನಂತರ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಪತ್ರ ರಾಜಕೀಯ ಆರಂಭಿಸಿದ್ದಾರೆ.

‘ಸಿಂಡಿಕೇಟ್‌ ಸದಸ್ಯರ ನೇಮಕ ಸಂಬಂಧ ಶಿಕ್ಷಣ ತಜ್ಞರ ಸಮಿತಿಯೊಂದನ್ನು ರಚಿಸಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.

‘ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳು ರಾಷ್ಟ್ರ ಮಟ್ಟದ ಶ್ರೇಣಿ ಹಾಗೂ ದೃಷ್ಟಿಯಲ್ಲಿ ತೀರಾ ಕೆಳಮಟ್ಟಕ್ಕೆ ತಲುಪಿವೆ. ಭಾರತದ ಹಾಗೂ ಹೊರಗಿನ ಶೈಕ್ಷಣಿಕ ಪ್ರಪಂಚದಲ್ಲಿ ಒಂದು ಕಾಲದಲ್ಲಿ ಉತ್ತಮ ಹೆಸರು ಗಳಿಸಿದ್ದ ವಿಶ್ವವಿದ್ಯಾಲಯಗಳ ಕುರಿತು ಅಸಮ್ಮತಿ ವ್ಯಕ್ತವಾಗಿದೆ. ಗುಣಮಟ್ಟವನ್ನು ಕಾಯ್ದುಕೊಳ್ಳದೆ ಕುಲಪತಿಗಳು ಹಾಗೂ ಸಿಂಡಿಕೇಟ್‌ ಸದಸ್ಯರ ನೇಮಕ ಮಾಡಿರುವುದು ಶೈಕ್ಷಣಿಕ ಕುಸಿತಕ್ಕೆ ಪ್ರಮುಖ ಕಾರಣ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಸಿಂಡಿಕೇಟ್ ಸದಸ್ಯರ ನೇಮಕಕ್ಕೆ ನಮ್ಮ ಸರ್ಕಾರ ಮುಂದಾಗಿದೆ. ಹೀಗಾಗಿ, ಶೈಕ್ಷಣಿಕ ಹಿನ್ನೆಲೆ, ಆ ಕ್ಷೇತ್ರದ ಅನುಭವ ಹಾಗೂ ಕಾಯ್ದೆಗೆ ಪೂರಕವಾಗಿರುವ ಇತರ ಮಾನದಂಡಗಳನ್ನು ಪರಿಶೀಲಿಸಿ ಸೂಕ್ತ ಪಟ್ಟಿಯೊಂದನ್ನು ಸಲ್ಲಿಸಲು ಸಮಿತಿ ರಚಿಸಬೇಕು’ ಎಂದು ಅವರು ಕೋರಿದ್ದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಸಿಂಡಿಕೇಟ್‌ ಸದಸ್ಯರ ನಾಮನಿರ್ದೇಶನವನ್ನು ಜಿ.ಟಿ.ದೇವೇಗೌಡ ಅವರು ರದ್ದುಗೊಳಿಸಿದ್ದರು. ಅನರ್ಹರ ನೇಮಕ ಮಾಡಲಾಗಿತ್ತು ಎಂದೂ ಅವರು ಹೇಳಿದ್ದರು.

‘ಶೈಕ್ಷಣಿಕ ಅರ್ಹತೆ ನೋಡಿಯೇ ಸದಸ್ಯರ ನೇಮಕ ಮಾಡಲಾಗಿತ್ತು. ನಾಮನಿರ್ದೇಶನ ರದ್ದುಪಡಿಸಿದ್ದು ಸರಿಯಲ್ಲ’ ಎಂದು ಆಕ್ಷೇಪಿಸಿ ಸಿದ್ದರಾಮಯ್ಯ ಅವರು ಜಿ.ಟಿ.ದೇವೇಗೌಡರಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.