ADVERTISEMENT

‘ಪಠ್ಯ: ತಪ್ಪು ಒಪ್ಪಿಕೊಂಡ ಮೇಲೆ ವಿತರಣೆ ಸಲ್ಲ’: ಶಾಲಾ–ಕಾಲೇಜು ಪೋಷಕರ ವೇದಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 19:18 IST
Last Updated 28 ಜೂನ್ 2022, 19:18 IST
   

ಬೆಂಗಳೂರು: ‘ತಿದ್ದೋಲೆ ಆದೇಶ ಹೊರಡಿಸುವ ಮೂಲಕ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ಅನೇಕ ಲೋಪ, ತಪ್ಪುಗಳನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯಗಳನ್ನು ಮಕ್ಕಳಿಗೆ ವಿತರಿಸಬಾರದು’ ಎಂದು ರಾಜ್ಯ ಖಾಸಗಿ ಶಾಲಾ–ಕಾಲೇಜು ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ ಒತ್ತಾಯಿಸಿದೆ.

‘ಪರಿಷ್ಕೃತ ಪಠ್ಯ ಪುಸ್ತಕವನ್ನು ಮಕ್ಕಳಿಗೆ ವಿತರಿಸುವುದನ್ನು ತಕ್ಷಣ ನಿಲ್ಲಿಸಬೇಕು. ಈಗಾಗಲೇ ವಿತರಿಸಿರುವ ಪಠ್ಯಗಳನ್ನು ವಾಪಸು ಪಡೆದು ಶಾಲಾ ಮಕ್ಕಳ ಭವಿಷ್ಯವನ್ನು ಕಾಪಾಡಬೇಕು’ ಎಂದೂ ವೇದಿಕೆಯ ಕಾರ್ಯಕಾರಿ ಸಮಿತಿಯ ಬಿ.ಎನ್‌. ಯೋಗಾನಂದ, ಕೇಸರಿಹರವು, ಚಿದಾನಂದ, ಭಾಸ್ಕರ್ ರೆಡ್ಡಿ ಮತ್ತಿತರರು ಮುಖ್ಯಮಂತ್ರಿ ಬಳಿ ಆಗ್ರಹಿಸಿದ್ದಾರೆ.

‘ಪಠ್ಯ ಪರಿಷ್ಕರಣೆ ಪ್ರಕ್ರಿಯೆಯೇ ನಿಯಮಬಾಹಿರ ಆಗಿರುವುದರಿಂದ ತಿದ್ದೋಲೆ ಮೂಲಕ ಸರ್ಕಾರ ಮತ್ತೊಮ್ಮೆ ಸಮರ್ಥಿಸಿಕೊಂಡಿರುವುದು ಜನವಿರೋಧಿ ನಡೆ. ಪರಿಷ್ಕರಣೆಯ ಮೂಲ ಆಲೋಚನೆಗಳೇ ಸಂವಿಧಾನಬಾಹಿರ, ಪ್ರಜಾಪ್ರಭುತ್ವ ವಿರೋಧಿ ಮತ್ತು ದುರುದ್ದೇಶದಿಂದ ಕೂಡಿದೆ. ಸರ್ಕಾರ ಹೊರಡಿಸಿರುವ ತಿದ್ದೋಲೆಯಿಂದಾಗಿ ಶಾಲಾ ಹಂತದಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಕಲಿಸುವ ಬದಲು, ಪುಸ್ತಕದಲ್ಲಿರುವ ದೋಷಗಳನ್ನು ತಿದ್ದುವ ಕಾರ್ಯದಲ್ಲಿಯೇ ಶೈಕ್ಷಣಿಕ ವರ್ಷ ಮುಗಿಯಲಿದೆ. ಇದು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರಲಿದೆ’ ಎಂದೂ ವೇದಿಕೆ ಅಭಿಪ್ರಾಯಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.