ADVERTISEMENT

ಸುರೇಶ್‌ಕುಮಾರ್‌ಗೆ ತೇಜೋವಧೆ: ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ಖಂಡಿಸಿದ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 13:42 IST
Last Updated 27 ಜನವರಿ 2026, 13:42 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಬೆಂಗಳೂರು: ಸದನದಲ್ಲಿ ಆಡಿದ ಮಾತುಗಳನ್ನೇ ಮುಂದಿಟ್ಟುಕೊಂಡು ಬಿಜೆಪಿಯ ಎಸ್‌. ಸುರೇಶ್‌ ಕುಮಾರ್‌ ಅವರ ಮನೆಯ ಗೋಡೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಕೀಳುಮಟ್ಟದ ಪೋಸ್ಟರ್‌ಗಳನ್ನು ಅಂಟಿಸಿ, ತೇಜೋವಧೆ ಮಾಡಿರುವ ಪ್ರಕರಣವನ್ನು ಹಕ್ಕು ಬಾಧ್ಯತಾ ‌ಸಮಿತಿಗೆ ವಹಿಸುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ರೂಲಿಂಗ್‌ ನೀಡಿದರು.

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುರೇಶ್ ಕುಮಾರ್, ‘ನಾನು ಸಾಮಾನ್ಯವಾಗಿ ರೂಢಿಯಲ್ಲಿರುವ ಒಂದು ಮಾತನ್ನು ಹೇಳಿದ್ದೆ. ಬಳಿಕ ಆ ಮಾತನ್ನು ಕಡತದಿಂದ ತೆಗೆಯುವಂತೆ ಮತ್ತು ಅದನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಎಂದೂ ಹೇಳಿದ್ದೇನೆ. ಕಡತದಿಂದ ತೆಗೆಯುವಂತೆ ಮುಖ್ಯಮಂತ್ರಿ ಕೂಡ ಹೇಳಿದ್ದರು. ಈ ಪ್ರಕರಣ ಮುಕ್ತಾವಾಯಿತು ಎಂದು ನಾನು ಅಂದುಕೊಂಡಿದ್ದೆ’ ಎಂದರು.

ADVERTISEMENT

‘ಆದರೆ, ಕೆಲವು ಕಾಂಗ್ರೆಸ್ ಕಾರ್ಯರ್ತರು ಇದೇ 24ರಂದು ನನ್ನ ಮನೆಯ ಗೋಡೆಯ ಮೇಲೆ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಮರುದಿನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ರಾಜಕೀಯ ದುರುದ್ದೇಶದಿಂದ ಈ ರೀತಿ ತೇಜೋವಧೆ ಮಾಡಲಾಗಿದೆ. ಸದನದ ಒಳಗೆ ನಡೆದ ಪ್ರಕರಣವನ್ನು ಉಲ್ಲೇಖಿಸಿ ದೂರು ದಾಖಲಾಗಿರುವುದು ವಿಧಾನಸಭಾ ಸದಸ್ಯನಾಗಿ ನನ್ನ ಕರ್ತವ್ಯ ನಿರ್ವಹಣೆಗೆ ಚ್ಯುತಿ ಉಂಟುಮಾಡಿದೆ. ಈ ವಿಚಾರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರಿದರು.

ಸುರೇಶ್ ಕುಮಾರ್ ಬೆಂಬಲಕ್ಕೆ ನಿಂತ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, ‘ಸದನದಲ್ಲಿ ಮಾತನಾಡಿದ್ದನ್ನು ವಾಪಸ್ ಪಡೆದ ಮೇಲೂ ಮನೆ ಬಳಿ ಹೋಗಿ ಪ್ರತಿಭಟಿಸುವುದು ಸರಿಯಲ್ಲ. ಈಗ ನಿಮ್ಮ ಸರ್ಕಾರ ಇದೆ ಎಂದು ಈ ರೀತಿ ಮಾಡುತ್ತಿದ್ದೀರಾ? ಮುಂದೆ ನಮ್ಮ ಸರ್ಕಾರವೂ ಬರುತ್ತದೆ. ಇಂತಹ ಕೆಟ್ಟ ಸಂಪ್ರದಾಯಕ್ಕೆ ತಡೆ ಹಾಕಬೇಕು’ ಎಂದು ಆಗ್ರಹಿಸಿದರು. 

ಘಟನೆಯನ್ನು ಖಂಡಿಸಿದ ಗೃಹ ಸಚಿವ ಜಿ. ಪರಮೇಶ್ವರ ಅವರು, ‘ಯಾರು ಪೋಸ್ಟರ್ ಅಂಟಿಸಿದ್ದಾರೊ ಅವರ ಬಗ್ಗೆ ಖುದ್ದಾಗಿ ನಾನೇ ವಿಚಾರಿಸುತ್ತೇನೆ. ಶಾಸಕರ ಮನೆ ಬಳಿ ಹೋಗಿ ಈ ರೀತಿ ಮಾಡುವುದು ಒಳ್ಳೆಯ ಸಂಪ್ರದಾಯವಲ್ಲ. ದೂರು ನೀಡುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಆದರೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದರು.

‘ಸದನ ಕುಟುಂಬ ಇದ್ದಂತೆ. ಸದನದ ಒಳಗೆ ನಡೆದಿರುವ ವಿಚಾರದಲ್ಲಿ ಹೊರಗಡೆ ಇರುವವರು ಮಧ್ಯಪ್ರವೇಶಿಸುವುದು ಸರಿಯಲ್ಲ. ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪ್ರಕರಣವನ್ನು ಹಕ್ಕುಚ್ಯುತಿ ಸಮಿತಿಗೆ ವಹಿಸುತ್ತೇನೆ’ ಎಂದು ಸಭಾಧ್ಯಕ್ಷರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.