ADVERTISEMENT

ಪರ್ತಗಾಳಿ‌ ಮಠದಲ್ಲಿ 77 ಅಡಿಯ ರಾಮನ ಪ್ರತಿಮೆ

ವಿವಿಧ ಯೋಜನೆಗೆ ನ.28ರಂದು ಪ್ರಧಾನಿ ಮೋದಿ ಜನಾರ್ಪಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 15:28 IST
Last Updated 12 ನವೆಂಬರ್ 2025, 15:28 IST
ಪರ್ತಗಾಳಿ ಮಠದಲ್ಲಿ ಜನಾರ್ಪಣೆಗೊಳ್ಳಲಿರುವ ರಾಮನ ಪ್ರತಿಮೆ
ಪರ್ತಗಾಳಿ ಮಠದಲ್ಲಿ ಜನಾರ್ಪಣೆಗೊಳ್ಳಲಿರುವ ರಾಮನ ಪ್ರತಿಮೆ   

ಬೆಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಕರ್ನಾಟಕ ಗೋವಾ ಗಡಿ ಭಾಗದ ಕಾನಕೋಣ ಸಮೀಪದ ಪರ್ತಗಾಳಿಯಲ್ಲಿ ನಿರ್ಮಿಸಿರುವ 77 ಅಡಿ ಎತ್ತರದ ರಾಮನ ಕಂಚಿನ ಪ್ರತಿಮೆ ಹಾಗೂ ರಾಮಾಯಣ ವನ ನ.28ರಂದು ಜನಾರ್ಪಣೆಗೊಳ್ಳಲಿದೆ.

ಐದೂವರೆ ಶತಮಾನದ ಇತಿಹಾಸ ಹೊಂದಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮೂಲ ಮಠದಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಂದು ಮಧ್ಯಾಹ್ನ 3.50ಕ್ಕೆ ಉದ್ಘಾಟಿಸುವರು ಎಂದು ಕಾರ್ಯಕ್ರಮ ಸಮಿತಿಯ ಸಂಚಾಲಕ ಪ್ರದೀಪ್‌ ಜಿ.ಪೈ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

13ನೇ ಶತಮಾನದಲ್ಲಿ ಮಧ್ವಾಚಾರ್ಯರು ಸ್ಥಾಪಿಸಿದ ಮಠವಿದು. ಸದ್ಯ ‌ದಕ್ಷಿಣ ಗೋವಾದ ಪರ್ತಗಾಳಿ ಗ್ರಾಮದ ಕುಶಾವತಿ ನದಿಯ ದಡದಲ್ಲಿರುವ ಪ್ರಧಾನ ಮಠದ ಆವರಣದಲ್ಲಿ ಸುಮಾರು ₹16 ಕೋಟಿ ವೆಚ್ಚದಲ್ಲಿ ಭಾರತದಲ್ಲಿಯೇ ಅತಿ ಎತ್ತರದ‌ ರಾಮನ ಕಂಚಿನ ಪ್ರತಿಮೆ ನಿರ್ಮಿಸಲಾಗಿದೆ. ಇದರೊಟ್ಟಿಗೆ ರಾಮಾಯಣ ಉದ್ಯಾನ, 3ಡಿ ಮ್ಯಾಪಿಂಗ್, ವಿಶಾಲ ಸಭಾಂಗಣ, ವಿಶ್ವ ದರ್ಜೆಯ ಬಹು ಬಳಕೆಯ ಕಟ್ಟಡ, ಮ್ಯೂಸಿಯಂ ಅನ್ನು ರೂಪಿಸಲಾಗಿದೆ ಎಂದು ಹೇಳಿದರು.

ADVERTISEMENT

ಮಠದ 24ನೇ ಪೀಠಾಧ್ಯಕ್ಷರಾದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ  ಮಾರ್ಗದರ್ಶನದಲ್ಲಿಯೇ 550ನೇ ವರ್ಷದ ಆಚರಣೆ, ಧಾರ್ಮಿಕ ಕಾರ್ಯಕ್ರಮಗಳು ನ.27ರಂದು ಆರಂಭಗೊಂಡು ಡಿ.7ರವರೆಗೂ ಪರ್ತಗಾಳಿಯಲ್ಲಿ ಇರಲಿವೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು

ಮಠದ 550 ನೇ ವರ್ಷದ ಸಂದರ್ಭದಲ್ಲಿ ವೇದಿಕ್‌ ಪಾಠ ಶಾಲೆ ನಿರ್ಮಿಸಿ, ಗುರುಕುಲ ಮಾದರಿಯಲ್ಲಿ 12 ವರ್ಷ ಶಿಕ್ಷಣವನ್ನು ನೀಡಲು ಮಠ ಮುಂದಾಗಿದೆ. 1 ಲಕ್ಷ ಚದರಡಿ ಪ್ರದೇಶದಲ್ಲಿ ಗುರುಕುಲ ವಿದ್ಯಾಪೀಠ ಕೆಲಸವೂ ಶುರುವಾಗಿದೆ ಎಂದು ಹೇಳಿದರು.‌‌

ಸಮಿತಿಯ ಪ್ರಮುಖರಾದ ಅಮರನಾಥ ಕಾಮತ್‌, ಅಣ್ಣಪ್ಪ ಕಾಮತ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.