ADVERTISEMENT

ಕಟೀಲು ಮೇಳದಿಂದ ಭಾಗವತ ಪಟ್ಲ ಹೊರಕ್ಕೆ

ಸೇವೆಯಾಟದ ಆರಂಭದ ದಿನವೇ ರಂಗದಿಂದ ಕೆಳಕ್ಕಿಳಿಸಿದ ವ್ಯವಸ್ಥಾಪಕರು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 20:00 IST
Last Updated 23 ನವೆಂಬರ್ 2019, 20:00 IST
ಕಟೀಲು ಯಕ್ಷಗಾನ ಮೇಳದ ಭಾಗವತಿಗೆಯಿಂದ ಕೆಳಗಿಳಿಯುತ್ತಿರುವ ಮುಖ್ಯ ಭಾಗವತ ಸತೀಶ್ ಶೆಟ್ಟಿ ಪಟ್ಲ
ಕಟೀಲು ಯಕ್ಷಗಾನ ಮೇಳದ ಭಾಗವತಿಗೆಯಿಂದ ಕೆಳಗಿಳಿಯುತ್ತಿರುವ ಮುಖ್ಯ ಭಾಗವತ ಸತೀಶ್ ಶೆಟ್ಟಿ ಪಟ್ಲ   

ಮೂಲ್ಕಿ: ಕಲಾವಿದರು ಮತ್ತು ವ್ಯವಸ್ಥಾಪನಾ ಮಂಡಳಿ ನಡುವಣ ಸಂಘರ್ಷದಿಂದ ವಿವಾದದ ಗೂಡಾಗಿರುವ ಕಟೀಲು ಮೇಳದಿಂದ ಪ್ರಸಿದ್ಧ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರನ್ನು ಹೊರಹಾಕಲಾಗಿದೆ. ಮೇಳಗಳ ತಿರುಗಾಟದ ಆರಂಭದ ದಿನವೇ ಈ ಘಟನೆ ನಡೆದಿದ್ದು, ವಿವಾದ ಮತ್ತೆ ಭುಗಿಲೆದ್ದಿದೆ.

ಶುಕ್ರವಾರದಿಂದ ಕಟೀಲು ಮೇಳಗಳ ಸೇವೆಯಾಟದ ತಿರುಗಾಟ ಆರಂಭವಾಗಿದೆ. ಈ ಪ್ರಯುಕ್ತ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಮೊದಲ ದಿನ ಆರೂ ಮೇಳಗಳ ಸೇವೆಯಾಟ ನಡೆಯಿತು. ಪಟ್ಲ ಸತೀಶ್‌ ಶೆಟ್ಟಿ ಒಂದನೇ ಮೇಳದ ಮೂರನೇ ಭಾಗವತರಾಗಿದ್ದರು. ತಡರಾತ್ರಿ 12.45ಕ್ಕೆ ಪೀಠ ಏರಿ ಭಾಗವತಿಕೆ ಆರಂಭಿಸಲು ಸಜ್ಜಾಗಿದ್ದ ಕ್ಷಣದಲ್ಲೇ ಅವರನ್ನು ಕೆಳಕ್ಕಿಳಿಸಿ, ಮೇಳದಿಂದ ಹೊರಕ್ಕೆ ಕಳುಹಿಸಲಾಗಿದೆ.

‘ಭಾಗವತಿಕೆ ಆರಂಭಿಸಲು ಸಜ್ಜಾಗಿದ್ದ ಸತೀಶ್‌ ಶೆಟ್ಟಿ ಅವರನ್ನು ಮೇಳದ ವ್ಯವಸ್ಥಾಪಕರು ಪರದೆಯ ಹಿಂದಕ್ಕೆ ಕರೆಸಿಕೊಂಡರು. ಪೀಠದಿಂದ ಕೆಳಕ್ಕೆ ಇಳಿದ ಅವರು ರಂಗದಿಂದ ಹೊರಗೆ ಬಂದರು. ಮೇಳದ ಸಂಚಾಲಕ ದೇವಿಪ್ರಸಾದ್‌ ಶೆಟ್ಟಿ, ಅವರ ಮಕ್ಕಳು ಮತ್ತು ಅಳಿಯ, ‘ನಿಮ್ಮನ್ನು ಮೇಳದಿಂದ ಕೈಬಿಡಲಾಗಿದೆ’ ಎಂದು ಸತೀಶ್‌ ಶೆಟ್ಟಿ ಅವರಿಗೆ ತಿಳಿಸಿದರು. ತಕ್ಷಣವೇ ಚೌಕಿಗೆ ಬಂದ ಶೆಟ್ಟಿ, ಯಕ್ಷಗಾನದ ಪರಿಕರಗಳನ್ನು ಅಲ್ಲಿರಿಸಿ ತೆರಳಿದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ವರ್ಷದಿಂದ ಸಂಘರ್ಷ: ಮೊದಲು ಐದನೇ ಮೇಳದ ಭಾಗವತರಾಗಿದ್ದ ಸತೀಶ್‌ ಶೆಟ್ಟಿ ಅವರನ್ನು ಕಳೆದ ವರ್ಷ ಒಂದನೇ ಮೇಳಕ್ಕೆ ನಿಯೋಜಿಸಲಾಗಿತ್ತು. ಈ ಕುರಿತು ಪ್ರಶ್ನೆ ಎತ್ತಿದ ಮತ್ತು ಹೆಚ್ಚಿನ ಸೌಲಭ್ಯಕ್ಕೆ ಆಗ್ರಹಿಸಿದ್ದ ಏಳು ಕಲಾವಿದರನ್ನು ಮೇಳದಿಂದ ಹೊರಹಾಕಲಾಗಿತ್ತು. ಆ ಸಂದರ್ಭದಲ್ಲಿ ಪಟ್ಲ ಸತೀಶ್‌ ಶೆಟ್ಟಿ ಮೇಳದಿಂದ ಹೊರಬಿದ್ದ ಕಲಾವಿದರ ನೆರವಿಗೆ ನಿಂತಿದ್ದರು ಎಂಬ ಅಸಮಾಧಾನ ವ್ಯವಸ್ಥಾಪನಾ ಸಮಿತಿಗೆ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನದ ಹೆಸರಿನ ಯಕ್ಷಗಾನ ಮೇಳಗಳ ಆಡಳಿತ ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಕಟೀಲು ಯಕ್ಷಗಾನ ಮೇಳಗಳ ನಿರ್ವಹಣೆಯನ್ನು ಮುಜರಾಯಿ ಇಲಾಖೆಯ ಮೂಲಕವೇ ನಡೆಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದರು. ಹೈಕೋರ್ಟ್‌ ಕೂಡ ಈ ತೀರ್ಮಾನವನ್ನು ಜಾರಿಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.

‘ಹೈಕೋರ್ಟ್‌ ಆದೇಶದ ಪ್ರತಿ ಇನ್ನೂ ಲಭ್ಯವಾಗಿಲ್ಲ. ಆದೇಶದ ಪ್ರತಿ ನಮಗೆ ತಲುಪಿದ ತಕ್ಷಣವೇ ಅದನ್ನು ಅನುಷ್ಠಾನಕ್ಕೆ ತರಲಾಗುವುದು. ಈ ಸಂಬಂಧ ಜಿಲ್ಲಾಡಳಿತ ಈಗಾಗಲೇ ಪ್ರಾಥಮಿಕ ಹಂತದ ಚರ್ಚೆ ನಡೆಸಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಪ್ರತಿಕ್ರಿಯಿಸಿದರು.

‘ಅವಮಾನ ಸಾವಿಗೆ ಸಮ’

‘20 ವರ್ಷಗಳಿಂದ ಮೇಳದಲ್ಲೇ ಇದ್ದೇನೆ. ಎಷ್ಟೇ ದೊಡ್ಡ ಆಹ್ವಾನ ಬಂದರೂ ನಾನು ಕಟೀಲು ಮೇಳ ತ್ಯಜಿಸಿಲ್ಲ. ಈಗ ಅದೇ ಮೇಳದಲ್ಲಿ ಅವಮಾನವಾಗಿದೆ. ರಂಗದ ಮೇಲೆ ಆಗಿರುವ ಅವಮಾನ ಸಾವಿಗೆ ಸಮ’ ಎಂದು ಭಾಗವತ ಪಟ್ಲ ಸತೀಶ್‌ ಶೆಟ್ಟಿ ಪ್ರತಿಕ್ರಿಯಿಸಿದರು.

‘ನನ್ನನ್ನು ಕೈಬಿಡುವುದಾದರೆ ರಂಗಸ್ಥಳಕ್ಕೆ ಹೋಗುವ ಮೊದಲು ಹೇಳಬಹುದಿತ್ತು. ರಂಗದಿಂದ ಹೊರಬಂದ ಬಳಿಕವೂ ಸಮಯವಿತ್ತು. ನಾನು ಏನು ತಪ್ಪು ಮಾಡಿದ್ದೇನೆ ಎಂಬುದನ್ನೂ ಹೇಳಿಲ್ಲ’ ಎಂದು ಬೇಸರ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.