ADVERTISEMENT

ಕೋವಿಡ್‌-19 ಪರಿಣಾಮ: ಬಾಡಿಗೆ ಮನೆಗಳು ಖಾಲಿ, ಖಾಲಿ!

ಪಿ.ಜಿ. ವಾಸಿಗಳಿಗೂ ತಪ್ಪದ ಪರದಾಟ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 19:30 IST
Last Updated 27 ಮಾರ್ಚ್ 2020, 19:30 IST
   

ಬೆಂಗಳೂರಿನಲ್ಲಿ ಒಳ್ಳೆಯ ಬಾಡಿಗೆ ಮನೆ ಮತ್ತು ಮಾಲೀಕರು ಸಿಗಲು ಅದೃಷ್ಟ ಮಾಡಿರಬೇಕು. ಮನೆ ಮಾಲೀಕ ಹೇಳಿದಷ್ಟು ಬಾಡಿಗೆ ಮತ್ತು ಅವರ ಷರತ್ತುಗಳಿಗೆ ಒಪ್ಪಿದರೂ ಒಳ್ಳೆಯ ಬಾಡಿಗೆ ಮನೆ ಸಿಗುವುದು ದುರ್ಲಬವಾಗಿತ್ತು.

ಬೆಳಿಗ್ಗೆ ಮನೆಗಳ ಮುಂದೆ ನೇತಾಡುತ್ತಿದ್ದ ‘ಬಾಡಿಗೆಗೆ’ ಬೋರ್ಡ್‌ ಸಂಜೆಯೊಳಗೆ ಕಾಣೆಯಾಗುತ್ತಿದ್ದವು. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಅಷ್ಟು ಡಿಮ್ಯಾಂಡ್‌ ಇತ್ತು. ಆದರೆ, ಕೆಲವು ತಿಂಗಳಿಂದ ಬಾಡಿಗೆ ಮನೆಗಳ ಬೇಡಿಕೆ ಏಕಾಏಕಿ ಕುಸಿದಿದೆ.

ಯಾವುದಾದರೂ ಬಡಾವಣೆಯಲ್ಲಿ ಸುಮ್ಮನೆ ಒಂದು ಸುತ್ತು ಹಾಕಿದರೆ ಸಾಕು ಹತ್ತಾರು ಮನೆಗಳ ಮುಂದೆ ನೇತಾಡುವ ‘ಟು ಲೆಟ್‌’ ಮತ್ತು ‘ಮನೆ ಬಾಡಿಗೆಗೆ ಇದೆ’ ಎಂಬ ಬೋರ್ಡ್‌ಗಳು ಕಣ್ಣಿಗೆ ಬೀಳುತ್ತವೆ. ಕೆಲವು ತಿಂಗಳ ಹಿಂದೆ ಹಾಕಿದ ಈ ಬೋರ್ಡ್‌ಗಳು ಈಗಲೂ ನೇತಾಡುತ್ತಿವೆ. ಅಷ್ಟೇ ಅಲ್ಲ, ಅವುಗಳ ಸಾಲಿಗೆ ಮತ್ತಷ್ಟು ಹೊಸ ಬೋರ್ಡ್‌ಗಳು ಸೇರ್ಪಡೆಯಾಗುತ್ತಿವೆ.

ADVERTISEMENT

ರಾಜಾಜಿನಗರ, ಸುಬ್ರಹ್ಮಣ್ಯನಗರ, ಗಾಯತ್ರಿನಗರ, ಪೀಣ್ಯ, ದಾಸರಹಳ್ಳಿ, ಶಿವನಹಳ್ಳಿ, ಮಹಾಲಕ್ಷ್ಮಿಪುರ, ಮಹಾಲಕ್ಷ್ಮಿ ಲೇಔಟ್‌, ವೈಯಾಲಿಕಾವಲ್‌, ಕೋದಂಡರಾಮಪುರ, ಶಿವನಗರ, ಶ್ರೀರಾಂಪುರ, ವಿಜಯನಗರ, ಮಲ್ಲೇಶ್ವರ, ಗುಟ್ಟಳ್ಳಿ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಖಾಲಿ ಬಿದ್ದಿರುವ ಹತ್ತಾರು ಬಾಡಿಗೆ ಮನೆಗಳು ಕಣ್ಣಿಗೆ ಬೀಳುತ್ತವೆ.

ಹಾಗಾದರೆ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳು ಇಷ್ಟು ದಿನ ಖಾಲಿ ಉಳಿಯಲು ಕಾರಣ ಏನು? ಎಂದು ಹುಡುಕಲು ಹೊರಟರೆ ಸಿಗುವ ಉತ್ತರಆರ್ಥಿಕ ಹಿಂಜರಿತ ಮತ್ತು ಕೊರೊನಾ ವೈರಸ್‌!

ಖಾಲಿ ಉಳಿಯಲು ಕಾರಣ ಏನು?

ಆರ್ಥಿಕ ಹಿಂಜರಿತ ಪರಿಣಾಮ ಅನೇಕ ಉದ್ಯಮಗಳು ಮುಚ್ಚಿದ್ದರಿಂದ ಕೆಲಸ ಕಳೆದುಕೊಂಡ ನೂರಾರು ಜನರು ಮನೆ ಬಾಡಿಗೆಗೆ ಹಣ ಹೊಂದಿಸಲಾಗದೆ ಮನೆ ಖಾಲಿ ಮಾಡಿ ಊರುಗಳಿಗೆ ತೆರಳಿದ್ದಾರೆ. ಇದರಿಂದಾಗಿ ಜನವರಿ ಮತ್ತು ಫೆಬ್ರುವರಿಯಿಂದಲೇ ಸಾಕಷ್ಟು ಮನೆಗಳು ಖಾಲಿ ಉಳಿದಿವೆ.

ಅದರ ಬೆನ್ನಲ್ಲೇ ಕೊರೊನಾ ದಾಂಗುಡಿ ಇಟ್ಟಿದೆ. ಇದರಿಂದ ಬೆಂಗಳೂರಿನ ಸಹವಾಸವೇ ಬೇಡ ಎಂದು ಜನರು ಮನೆ ತೊರೆದು ಸ್ವಗ್ರಾಮಗಳಿಗೆ ಮರಳುತ್ತಿದ್ದಾರೆ. ಮನೆಗಳ ಮಾಲೀಕರು ಸಹ ಇಂತಹ ಸಂದರ್ಭದಲ್ಲಿ ಮನೆತೋರಿಸಲು ಮತ್ತು ಬಾಡಿಗೆ ನೀಡಲು ಹಿಂಜರಿಯುತ್ತಿದ್ದಾರೆ.

ಮುಂಗಡ ನೀಡಿದವರು ಬಂದಿಲ್ಲ

ಈ ಮೊದಲೇ ಮನೆ ನೋಡಿ ಅಡ್ವಾನ್ಸ್‌ ನೀಡಿ ಹೋದವರು ಮರಳಿ ಬಂದಿಲ್ಲ. ಕೊರೊನಾ ಹಾವಳಿ ಕಡಿಮೆಯಾದ ನಂತರ ಬರುವುದಾಗಿ ತಿಳಿಸಿದ್ದಾರೆ. ಅಲ್ಲಿಯವರೆಗೆ ಮನೆ ಖಾಲಿ ಉಳಿದಿದ್ದರೆ ಬರುತ್ತೇವೆ. ಇಲ್ಲದಿದ್ದರೆ ಬೇರೆ ಮನೆ ಹುಡುಕುತ್ತೇವೆ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವಡೆ ಬಾಡಿಗೆದಾರರು ಬರುತ್ತೇವೆ ಎಂದು ಸಜ್ಜಾದರೂ ಮಾಲೀಕರು ‘ಸದ್ಯ ಬೇಡ’ ಎಂದು ಮುಂದೂಡುತ್ತಿದ್ದಾರೆ.

ಆಟೊ ರಿಕ್ಷಾ ಚಾಲಕರು, ಕ್ಯಾಬ್‌ ಚಾಲಕರು, ಗಾರ್ಮೆಂಟ್ಸ್‌, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದವರು ಬಾಡಿಗೆ ಹಣ ಕೊಡಲಾಗದೆ ಮನೆ ಖಾಲಿ ಮಾಡಿ ತಮ್ಮ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ.

ಯಾರೂ ಬರುತ್ತಿಲ್ಲ..

‘ಮೊದಲ ಅಂತಸ್ತಿನಲ್ಲಿ ಎರಡು ಮನೆ ಖಾಲಿ ಉಳಿದು ಎರಡು ತಿಂಗಳಾಗಿದೆ. 1980ರಲ್ಲಿ ಕಟ್ಟಿಸಿದ ನಂತರ ಇಲ್ಲಿವರೆಗೆ ಇಷ್ಟು ದಿನ ಎಂದಿಗೂ ನಮ್ಮ ಮನೆ ಇಷ್ಟು ದಿನ ಖಾಲಿ ಉಳಿದಿರಲಿಲ್ಲ. ಖಾಲಿಯಾದ ವಾರದೊಳಗೆ ಬಾಡಿಗೆದಾರರು ಬರುತ್ತಿದ್ದರು. ಅಷ್ಟು ಡಿಮ್ಯಾಂಡ್‌ ಇತ್ತು. ನಮ್ಮ ಗಲ್ಲಿಯಲ್ಲಿಯೇ ಐದಾರು ಮನೆಗಳು ಖಾಲಿಯಾಗಿವೆ. 500–1000 ರೂಪಾಯಿ ಬಾಡಿಗೆ ಕಡಿಮೆ ಮಾಡಲೂ ಸಿದ್ಧ. ಆದರೆ, ಯಾರೂ ಬರುತ್ತಿಲ್ಲವೇ...’ ಎನ್ನುತ್ತಾರೆ ಸುಬ್ರಮಣ್ಯ ನಗರದ 3ನೇ ಮುಖ್ಯರಸ್ತೆಯಲ್ಲಿರುವ ಕಾಮಾಕ್ಷಮ್ಮ.

‘ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಡಿಗೆದಾರರು ನವೆಂಬರ್‌ನಲ್ಲಿ ಮನೆ ಖಾಲಿ ಮಾಡಿದರು. ಹೊಸ ಬಾಡಿಗೆದಾರರು ಬಂದಿಲ್ಲ. ಮೂರ‍್ನಾಲ್ಕು ತಿಂಗಳಿಂದ ಮನೆ ಖಾಲಿ ಇದೆ. ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಹೊಸ ಬಾಡಿಗೆದಾರರು ಬರಬಹುದು ಎಂಬ ನಿರೀಕ್ಷೆ ಇತ್ತು. ಕೊರೊನಾ ಭೀತಿಯಿಂದ ಹೊಸ ಬಾಡಿಗೆದಾರರು ಬರುತ್ತಿಲ್ಲ. ಬ್ರೋಕರ್‌ಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ನಮ್ಮ ಯಜಮಾನ್ರು ಹೋದ ನಂತರ ಮನೆ ಬಾಡಿಗೆ ಹಣದಲ್ಲಿಯೇ ಸಂಸಾರ ಸಾಗಿಸುತ್ತಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೇಗೆ ಎಂದು ಚಿಂತೆಯಾಗಿದೆ’ ಎನ್ನುವುದು ಮಹಾಲಕ್ಷ್ಮಿಪುರದ ಶೈಲಜಾ ಅವರ ಚಿಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.