ADVERTISEMENT

ರಫೇಲ್ ವ್ಯವಹಾರ: ಸರ್ಕಾರದ ಪಾತ್ರ ಇಲ್ಲ– ಡಿ.ವಿ.ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 13:29 IST
Last Updated 1 ಅಕ್ಟೋಬರ್ 2018, 13:29 IST
ಡಿ.ವಿ.ಸದಾನಂದಗೌಡ
ಡಿ.ವಿ.ಸದಾನಂದಗೌಡ   

ಯಾದಗಿರಿ: ‘ರಫೇಲ್‌ ಒಂದು ಹಗರಣವೇ ಅಲ್ಲ. ವಿಮಾನ ಖರೀದಿಗೆ ಸಂಬಂಧಿಸಿದಂತೆ ವಿದೇಶಿ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೆ ಕಾಂಗ್ರೆಸ್‌ ವೃಥಾ ಅದನ್ನು ಹಗರಣ ಎಂದು ಬಿಂಬಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ’ ಎಂದು ಕೇಂದ್ರದ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ವಿಮಾನ ಖರೀದಿ ವ್ಯವಹಾರ ನಡೆದಿತ್ತು. ಆದರೆ, ಕಾಂಗ್ರೆಸ್‌ ಆಗ ಖಾಲಿ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಈಗಿನ ಕೇಂದ್ರ ಸರ್ಕಾರ ಯುದ್ಧ ಸಾಮಗ್ರಿ ತುಂಬಿದ ವಿಮಾನಗಳನ್ನು ಖರೀದಿಸಿದೆ. ಹಾಗಾಗಿ ಖರೀದಿ ದರದಲ್ಲಿ ವ್ಯತ್ಯಾಸವಾಗಿದೆ. ವಿಮಾನ ಖರೀದಿ ವ್ಯವಹಾರವನ್ನು ಖಾಸಗಿ ಏಜೆನ್ಸಿಗಳು ನಿರ್ವಹಿಸಿವೆ. ಆ ಏಜೆನ್ಸಿಗಳು ರಿಲಯನ್ಸ್‌ ಕಂಪನಿಗೆ ಸಹಭಾಗಿತ್ವ ನೀಡಿವೆ. ಇದರಲ್ಲಿ ಕೇಂದ್ರ ಸರ್ಕಾರಕ್ಕೆ ಸಂಬಂಧವೇ ಇಲ್ಲ’ ಎಂದು ವಿವರಿಸಿದರು.

‘ಹಿಂದಿನ ಎನ್‌ಡಿಎ ಸರ್ಕಾರ ₹2.50 ಲಕ್ಷ ಕೋಟಿಯಷ್ಟು ಬಾಂಡ್‌ಗಳ ಮೇಲೆ ಸಾಲ ಮಾಡಿದೆ. ಈ ಸಾಲ ತೀರಿಸಲಿಕ್ಕಾಗಿಯೇ ಅಡುಗೆ ಅನಿಲ, ಪೆಟ್ರೋಲ್‌ ದರ ಏರಿಸಲಾಗಿದೆ. ದರ ವ್ಯತ್ಯಾಸದಿಂದ ಸರ್ಕಾರಕ್ಕೆ ಆಗುವ ಲಾಭಾಂಶವನ್ನು ದೇಶದ 17 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಕಲ್ಪಿಸಲು ವಿನಿಯೋಗಿಸಲಾಗಿದೆ’ ಎಂದು ಸಮರ್ಥಿಸಿದರು.

ADVERTISEMENT

‘ಎನ್‌ಡಿಎ ಸರ್ಕಾರ ಇದ್ದಾಗ ನಾನೇ ಅಡುಗೆ ಅನಿಲ, ಪೆಟ್ರೋಲ್‌ ದರ ಏರಿಕೆ ಖಂಡಿಸಿ ಸೈಕಲ್ ಏರಿ ಪ್ರತಿಭಟಿಸಿದ್ದೆ. ಏಕೆಂದರೆ, ದರ ಏರಿಕೆಯಿಂದ ಬರುವ ಆದಾಯವನ್ನು ಕೇಂದ್ರ ಸರ್ಕಾರ ಪರ್ಯಾಯ ಉಪಯೋಗ ಮಾಡುತ್ತಿರಲಿಲ್ಲ. ಆದರೆ, ಬಿಜೆಪಿ ಸರ್ಕಾರ ಪ್ರರ್ಯಾಯ ಉಪಯೋಗ ಮಾಡುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.