ನವದೆಹಲಿ: ಪೆಗಾಸಸ್ ಗೂಢಚರ್ಯೆ ವಿವಾದವು ಇದೀಗ ಕರ್ನಾಟಕದ ಬಾಗಿಲಿಗೆ ಬಂದು ನಿಂತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಜಿ ಪರಮೇಶ್ವರ, ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಆಪ್ತರು ಪೆಗಾಸಸ್ ಮೂಲಕ ಗೂಢಚರ್ಯೆಯ ಟಾರ್ಗೆಟ್ ಆಗಿದ್ದಿರಬಹುದು ಎಂದು ಇತ್ತೀಚೆಗೆ ಬಿಡುಗಡೆಗೊಂಡಿರುವ ಮಾಹಿತಿಯಲ್ಲಿ ತಿಳಿದುಬಂದಿರುವುದಾಗಿ ’ದಿ ವೈರ್’ ವರದಿ ಮಾಡಿದೆ.
ಅವರ ದೂರವಾಣಿ ಸಂಖ್ಯೆಗಳು ಫ್ರೆಂಚ್ ಮಾಧ್ಯಮ ಫರ್ಬಿಡನ್ ಸ್ಟೋರೀಸ್ ಪಡೆದಿರುವ ಸೋರಿಕೆಯಾದ ಪೆಗಾಸಸ್ ಸ್ಪೈವೇರ್ ಡೇಟಾಬೇಸ್‌ನ ಭಾಗವಾಗಿವೆ.ಈ ಮಾಹಿತಿಯನ್ನು ‘ದಿ ಪೆಗಾಸಸ್ ಪ್ರಾಜೆಕ್ಟ್’ನ ಭಾಗವಾಗಿ ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್ ಮತ್ತು ದಿ ವೈರ್ ಅನ್ನು ಒಳಗೊಂಡ ಅಂತರರಾಷ್ಟ್ರೀಯ ಮಾಧ್ಯಮ ಒಕ್ಕೂಟದೊಂದಿಗೆ ಹಂಚಿಕೊಳ್ಳಲಾಗಿದೆ.
‘2019ರಲ್ಲಿ ಅಂದಿನ ಆಡಳಿತಾರೂಢ ಮೈತ್ರಿ(ಕಾಂಗ್ರೆಸ್–ಜೆಡಿಎಸ್) ಸರ್ಕಾರದ 17 ಮಂದಿ ಶಾಸಕರು ಹಠಾತ್ತನೆ ರಾಜೀನಾಮೆ ನೀಡಿ, ವಿಶ್ವಾಸಮತ ಯಾಚನೆಗೆ ಕಾರಣವಾಗಿದ್ದರು. ಆ ನಂತರ ಬಿಜೆಪಿ ಮತ್ತು ಜೆಡಿಎಸ್ -ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನಡುವೆ ಅಧಿಕಾರಕ್ಕಾಗಿ ತೀವ್ರ ಸಂಘರ್ಷ ನಡೆಯುತ್ತಿದ್ದ ಸಮಯದಲ್ಲಿ ಕರ್ನಾಟಕದ ಕೆಲವು ಪ್ರಮುಖ ರಾಜಕೀಯ ನಾಯಕರ ದೂರವಾಣಿ ಸಂಖ್ಯೆಗಳನ್ನು ಪೆಗಾಸಸ್‌ನಲ್ಲಿ ಗೂಢಚರ್ಯೆ ನಡೆಸಲು ಆಯ್ಕೆ ಮಾಡಲಾಗಿದೆ ಎಂದು ದಾಖಲೆಗಳು ಸೂಚಿಸುತ್ತವೆ.’ ಎಂದು ದಿ ವೈರ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.