ADVERTISEMENT

ವಿಶ್ವೇಶತೀರ್ಥರ ಬದುಕು ಸಾಗಿಬಂದ ಹಾದಿ: 80 ವರ್ಷಗಳ ಸನ್ಯಾಸತ್ವ

7 ವರ್ಷಕ್ಕೆ ಸನ್ಯಾಸ ದೀಕ್ಷೆ; 8 ದಶಕಗಳ ದೀರ್ಘ ಸನ್ಯಾಸತ್ವ

ಪ್ರಜಾವಾಣಿ ವಿಶೇಷ
Published 30 ಡಿಸೆಂಬರ್ 2019, 4:47 IST
Last Updated 30 ಡಿಸೆಂಬರ್ 2019, 4:47 IST
ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ
ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ   

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ರಾಮಕುಂಜ ಎಂಬ ಪುಟ್ಟ ಗ್ರಾಮದಲ್ಲಿ ಏಪ್ರಿಲ್ 27, 1931ರಲ್ಲಿ ವೆಂಕಟರಮಣನ ಜನನವಾಯಿತು. ಮುಂದೆ, ವೆಂಕಟರಮಣ ವಿಶ್ವೇಶತೀರ್ಥರಾಗಿ ಮಾಧ್ವ ಪರಂಪರೆಯ ಯತಿವರ್ಯರಲ್ಲಿ ಅಗ್ರಗಣ್ಯರಾದರು.

ಶ್ರೀಗಳ ಬಾಲ್ಯ: ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ ಎರಡನೆಯ ಪುತ್ರನಾಗಿ ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿಯ ದಿನ ಜನಿಸಿದ ವೆಂಕಟರಮಣ, ರಾಮಕುಂಜದ ಹಳ್ಳಿಯ ಸಂಸ್ಕೃತ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದರು. 7ನೇ ವರ್ಷಕ್ಕೆ ಉಪನಯನವಾಗಿ, ಗಾಯತ್ರೀಮಂತ್ರದ ಉಪದೇಶ ನಡೆಯಿತು.

ಪೋಷಕರು ವೆಂಕಟರಮಣನನ್ನು ಉಡುಪಿಯ ಕೃಷ್ಣಮಠಕ್ಕೆ ಕರೆದುಕೊಂಡು ಬಂದಾಗ, ಆಗ ಪೇಜಾವರ ಮಠದ ಪರ್ಯಾಯವೇ ನಡೆಯುತ್ತಿತ್ತು. ಅಂದು ಕೃಷ್ಣಪೂಜೆಯ ಸೆಳೆತಕ್ಕೆ ಸಿಕ್ಕ ವೆಂಕಟರಮಣನನ್ನು ಅಂದಿನ ಪರ್ಯಾಯ ಮಠಾಧಿಪತಿ ವಿಶ್ವಮಾನ್ಯ ತೀರ್ಥರು ‘ಸ್ವಾಮಿಯಾಗುತ್ತೀಯೇನು’ ಎಂದಾಗ, ಅಂಜಿಕೆಯಿಂದಲೇ ಹ್ಞೂಗುಟ್ಟಿದ್ದರು.

ADVERTISEMENT

ಉತ್ತರಾಧಿಕಾರಿ ಆಯ್ಕೆ: ಪರ್ಯಾಯದ ಅವಧಿ ಮುಗಿಸಿ ಸಂಚಾರಕ್ಕೆ ಹೊರಟ ವಿಶ್ವಮಾನ್ಯತೀರ್ಥರು, ವ್ಯಾಸತೀರ್ಥರ ತಪೋಭೂಮಿ ಹಂಪೆಯಲ್ಲಿ ಮಠಕ್ಕೆ ಯೋಗ್ಯ ಉತ್ತರಾಧಿಕಾರಿ ನೇಮಕ ಮಾಡುವ ನಿರ್ಧಾರ ಮಾಡಿದರು. ವಿಳಂಬ ಮಾಡದೆ ಅಂದು ಹ್ಞೂಗುಟ್ಟಿದ್ದ ವೆಂಕಟರಮಣನನ್ನು ಅಲ್ಲಿಗೆ ಕರೆಸಿಕೊಂಡರು. ಜಾತಕದಲ್ಲಿ ವೇದಾಂತ ಸಾಮ್ರಾಜ್ಯ ಪೀಠಾರೋಹಣ ಮತ್ತು ಅಲೌಕಿಕ ಲಕ್ಷಣ ಗೋಚರವಾದ ಹಿನ್ನೆಲೆಯಲ್ಲಿ ಡಿ.3, 1938ರಲ್ಲಿ ಹಂಪೆಯ ಪ್ರಾಣದೇವರ ಸನ್ನಿಧಿಯಲ್ಲಿ ಪ್ರಣವೋಪದೇಶ ನಡೆಯಿತು. ವೆಂಕಟರಮಣ ವಿಶ್ವೇಶತೀರ್ಥರಾಗಿ ಮರುನಾಮಕರಣಗೊಂಡರು. ಏಳು ವರ್ಷದ ಬಾಲಕ ಪೇಜಾವರ ಮಠದ 32ನೇ ಯತಿಯಾಗಿ ಪೀಠವನ್ನು ಅಲಂಕರಿಸಿದರು.

ಬಾಲಯತಿಗೆ ಗೌರವ: ಭಂಡಾರಕೇರಿ ಮಠಾಧೀಶರಾದ ವಿದ್ಯಾಮಾನ್ಯತೀರ್ಥರು ವಿಶ್ವೇಶತೀರ್ಥರಿಗೆ ವಿದ್ಯೆಯನ್ನು ಧಾರೆ ಎರೆದರು. ಚುರುಕು ಬುದ್ಧಿಯ ಚಾಕಚಕ್ಯತೆ ಬಾಲಯತಿಯನ್ನು 1943ರಲ್ಲಿ ಭಂಡಾರಕೇರಿಯಲ್ಲಿ ನಡೆದ ಶ್ರೀಮಧ್ವರಾದ್ಧಾಂತ ಸಂವರ್ಧಿನಿ ಸಭೆಗೆ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಆಗ ಪೇಜಾವರ ಶ್ರೀಗಳ ವಯಸ್ಸು 12ವರ್ಷ.

ಅಂದಿನ ವಿದ್ವತ್ ಸಭೆಯಲ್ಲಿ ಬಾಲಯತಿಯ ಭಾಷಣಕ್ಕೆ ಇಡೀ ಸಭೆ ತಲೆದೂಗಿತ್ತು. ಶಾರ್ದೂಲವಿಕ್ರೀಡಿತದಲ್ಲಿ ರಚಿಸಿದ ಪದ್ಯ ಬೆರಗುಗೊಳಿಸಿತು. ಪ್ರತಿಭೆಯನ್ನು ಕಂಡು ವಿಸ್ಮಿತರಾದ ವಿದ್ಯಾಮಾನ್ಯತೀರ್ಥರು, ವಿಶ್ವೇಶತೀರ್ಥರಿಗೆ ಸಂಪೂರ್ಣ ಅರಿವಿನ ಜ್ಞಾನಧಾರೆಯನ್ನು ಎರೆದರು.

ಶಾಸ್ತ್ರಪಾಂಡಿತ್ಯದಲ್ಲಿ ವಿಶ್ವೇಶತೀರ್ಥರ ಸಮ ನಿಲ್ಲಬಲ್ಲ ಪೀಠಾಧಿಪತಿ ಯಾರೂ ಇಲ್ಲ ಎಂದೇ ಇಂದಿಗೂ ವಿದ್ವಾಂಸರು ಹೇಳುತ್ತಾರೆ. 1951ರಲ್ಲಿ ನಂಜನಗೂಡಿನಲ್ಲಿ ಆಗಮತ್ರಯ ವಿದ್ವಾಂಸರ ಸಮ್ಮೇಳನದಲ್ಲಿ ವಿಶ್ವೇಶತೀರ್ಥರ ಪಾಂಡಿತ್ಯಕ್ಕೆ ಖುದ್ದು ಮೈಸೂರು ಅರಸ ಜಯಚಾಮರಾಜೇಂದ್ರ ಒಡೆಯರು ಬೆರಗಾಗಿದ್ದರು.

ಮಾಧ್ವ ಸಂಘಟನೆಗೆ ಶ್ರಮ: ಮಾಧ್ವ ಸಮುದಾಯದ ನಡುವೆ ಒಗ್ಗಟ್ಟಿನ ಕೊರತೆಯನ್ನು ಅರಿತ ಶ್ರೀಗಳು ಸಮಾಜವನ್ನು ಸಂಘಟಿತವಾಗಿಸುವ ಸಂಕಲ್ಪದೊಂದಿಗೆ ಜ.4, 1953ರಲ್ಲಿ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ ನಡೆಸಿದರು. ಇದೇ ಅವಧಿಯಲ್ಲಿ ಮಾಧ್ವ ಮಹಾಮಂಡಲ ಸ್ಥಾಪನೆಯಾಯಿತು. ಚದುರಿದ್ದ ಮಾಧ್ವ ಸಮಾಜ ಮತ್ತೆ ಒಟ್ಟುಗೂಡಿತು.

1956ರಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಸ್ಥಾಪನೆ, 1962ರಲ್ಲಿ ಬೇಸಿಗೆ ಆಧ್ಯಾತ್ಮ ಶಿಬಿರಗಳ ಆರಂಭ, 1967, 69ರಲ್ಲಿ ನಡೆದ ವಿಶ್ವ ಹಿಂದೂ ಸಮ್ಮೇಳನದಲ್ಲಿ ಶ್ರೀಗಳು ಪ್ರಮುಖ ಪಾತ್ರ ವಹಿಸಿದ್ದರು.

ಸನ್ಯಾಸ ಪಾಲನೆ: ಸಾರ್ವಜನಿಕವಾಗಿ ತೊಡಗಿಸಿಕೊಂಡರೂ ಶ್ರೀಗಳು ಯತಿಧರ್ಮ ಪಾಲನೆಯನ್ನು ಕೈ ಬಿಟ್ಟವರಲ್ಲ. ಅಖಂಡ ಬ್ರಹ್ಮಚರ್ಯ, ನಿತ್ಯ ಪ್ರಣವಜಪ, ಸಂಸ್ಥಾನದ ಮೂರ್ತಿಗಳ ಪೂಜೆ, ವಿದ್ಯಾರ್ಥಿಗಳಿಗೆ ವೇದಾಂತ ಗ್ರಂಥಗಳ ಪಾಠ–ಪ್ರವಚನ ನಿತ್ಯ ಜೀವನದ ಅವಿಭಾಜ್ಯ ಅಂಗಗಳಾಗಿ ಕೊನೆಯವರೆಗೂ ನಡೆದವು.

ದಣಿವರಿಯದ ಶ್ರೀಗಳ ದಿನಚರಿ
88 ವರ್ಷದ ಇಳಿ ವಯಸ್ಸಿನಲ್ಲೂ ಪೇಜಾವರ ಶ್ರೀಗಳದ್ದು ತಾರುಣ್ಯದ ದಿನಚರಿ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಮೃತ್ತಿಕಾಶೌಚ ಆಚಮನ ವಿಧಾನಗಳ ಬಳಿಕ ಶಿಷ್ಯರಿಗೆ ಸುಧಾಪಾಠ ಮಾಡುತ್ತಿದ್ದರು. ಬೆಳಿಗ್ಗೆ 5.30ಕ್ಕೆ ಗೋಶಾಲೆಗೆ ಭೇಟಿ ನೀಡಿ ಹಸುಗಳಿಗೆ ಹಿಡಿ ಹುಲ್ಲು, ಕರುಗಳಿಗೆ ಬಾಳೆಹಣ್ಣು ಕೊಡುವುದು ರೂಢಿ. ನಂತರ ಕೆಲಹೊತ್ತು ಯೋಗಾಸನ, 7.30ಕ್ಕೆ ಮತ್ತೊಮ್ಮೆ ಸ್ನಾನ ಮುಗಿಸಿ ಸರ್ವಜ್ಞಪೀಠದಲ್ಲಿ ಮಂತ್ರಗಳ ಜಪ. 9 ಗಂಟೆಗೆ ಮಧ್ವ ಸರೋವರದ ಬಳಿ ಪಾರಿವಾಳಗಳಿಗೆ, ಮೀನುಗಳಿಗೆ ಧಾನ್ಯ ಹಾಕುತ್ತಿದ್ದ ಯತಿಗಳು ಸರೋವರದಲ್ಲಿ ಈಜುವ ಹವ್ಯಾಸ ರೂಢಿಸಿಕೊಂಡಿದ್ದರು. 11.45ರವರೆಗೆ ದೇವರ ಪೂಜೆ ಮಾಡಿ, 12ಕ್ಕೆ ಯತಿಗಳ ಭೋಜನ ಸ್ವೀಕರಿಸುತ್ತಿದ್ದ ಸ್ವಾಮೀಜಿ ಮಧ್ಯಾಹ್ನ 2ರವರೆಗೆ ಭಕ್ತರಿಗೆ ಮಂತ್ರಾಕ್ಷತೆ ವಿತರಿಸುತ್ತಿದ್ದರು. ಬಳಿಕ ಸ್ವಲ್ಪ ವಿಶ್ರಾಂತಿ ಪಡೆದು, ಸಂಜೆ ರಾಜಾಂಗಣದಲ್ಲಿ ವಿದ್ವಾಂಸರ ಪ್ರವಚನ ಆಲಿಸುತ್ತಿದ್ದರು. ರಾತ್ರಿ ಸ್ನಾನ ಮುಗಿಸಿ ರಾತ್ರಿ ಪೂಜೆ, ರಥೋತ್ಸವದಲ್ಲಿ ಭಾಗವಹಿಸಿ 9.30ರ ಹೊತ್ತಿಗೆ ಅಲ್ಪ ಉಪಾಹಾರ ಸೇವಿಸಿ ಗ್ರಂಥಾವಲೋಕನ ಮಾಡಿ ನಿದ್ರೆಗೆ ಜಾರುತ್ತಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.