ADVERTISEMENT

ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಮರ: ಲಕ್ಷಾಂತರ ಭಕ್ತರ ಅಶ್ರುತರ್ಪಣ

ವಿದ್ಯಾಪೀಠದಲ್ಲಿ ವೃಂದಾವನಸ್ಥರಾದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 23:30 IST
Last Updated 29 ಡಿಸೆಂಬರ್ 2019, 23:30 IST
   

ಬೆಂಗಳೂರು:ಪ್ರಖರ ಚಿಂತನೆ, ಜನಪರ ಕಾಳಜಿಯ ಮೂಲಕ ಜಗದಗಲ ಭಕ್ತರನ್ನು ಸಂಪಾದಿಸಿದ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ‌ಭಾನುವಾರ ಲಕ್ಷಾಂತರ ಭಕ್ತರ ಕಂಬನಿ ಅಭಿಷೇಕದೊಂದಿಗೆ ವಿದ್ಯಾಪೀಠದಲ್ಲಿ ವೃಂದಾವನಸ್ಥರಾದರು.

ಸಾವಿರಾರು ಕಂಠಗಳಿಂದ ಮೊಳಗಿದ ‘ಹರಿ ಸರ್ವೋತ್ತಮ ವಾಯು ಜೀವೋತ್ತಮ’ ಘೋಷಣೆಗಳೊಂದಿಗೆ ಶಾಶ್ವತ ಧ್ಯಾನಕ್ಕೆ ಕುಳಿತ ಶ್ರೀಗಳನ್ನು ಸಾವಿರಾರು ಕಣ್ಣುಗಳು ಕೊನೆಯ ಬಾರಿ ತುಂಬಿಕೊಂಡವು.

ಮಠದ ಭಕ್ತರಷ್ಟೇ ಅಲ್ಲ, ಹಲವು ಜಾತಿ, ಸಮುದಾಯಗಳ ಜನರೂ ಶ್ರೀಗಳನ್ನು ಕೊನೆಯ ಬಾರಿ ನೋಡಲು ಬಂದುದಕ್ಕೆ ಉಡುಪಿ ಕೃಷ್ಣಮಠವಷ್ಟೇ ಅಲ್ಲ, ನಗರದ ನ್ಯಾಷನಲ್ ಕಾಲೇಜು ಮೈದಾನ ಮತ್ತು ಪೀಠದ ಆವರಣ ಆವರಣವೂ ಸಾಕ್ಷಿಯಾದವು.

ADVERTISEMENT

ಉಸಿರಾಟದ ಸಮಸ್ಯೆ ಯಿಂದ ಒಂಬತ್ತು ದಿನಗಳ ಹಿಂದೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳ ಆರೋಗ್ಯ ಕ್ಷೀಣಿಸಿತ್ತು. ಮಠದಲ್ಲೇ ತಾವು ಕೊನೆಯುಸಿರೆಳೆಯಬೇಕು ಎಂಬ ಅವರ ಬಯಕೆಯಂತೆ ಭಾನುವಾರ ಬೆಳಿಗ್ಗೆ 7 ಗಂಟೆ ವೇಳೆಗೆ ಮಠಕ್ಕೆ ಅವರನ್ನು ಕರೆತರಲಾಗಿತ್ತು. ಬೆಳಿಗ್ಗೆ 9.22ಕ್ಕೆ ಅವರು ಇಹಲೋಕ ತ್ಯಜಿಸಿರುವುದನ್ನು ‘ಗೋವಿಂದಾ’ ಎಂದು ಘೋಷಿಸುವ ಮೂಲಕ ಹಾಗೂ ತೋಪು ಹಾರಿಸುವ ಮೂಲಕ ಪ್ರಕಟಿಸಲಾಯಿತು.

ವೃಂದಾವನವನ್ಮು ವಿದ್ಯಾಪೀಠದಲ್ಲೇ ಮಾಡಬೇಕು ಎಂಬ ಶ್ರೀಗಳ ಬಯಕೆಯಂತೆ ಪಾರ್ಥಿವ ಶರೀರವನ್ನು ವಾಯುಪಡೆ ಹೆಲಿಕಾಪ್ಟರ್ ಮೂಲಕ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತಂದು, ಅಲ್ಲಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಸಂಜೆ ವಿದ್ಯಾಪೀಠದ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣಕ್ಕೆ ಬಂದಾಗ ಜನ ಗದ್ಗದಿತರಾಗಿದ್ದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವ ಸಮರ್ಪಿಸಿದ ಬಳಿಕ ಸಾರ್ವಜನಿಕರ ದರ್ಶನಕ್ಕೆ ಸ್ವಲ್ಪ ಹೊತ್ತು ಅವಕಾಶ ನೀಡಲಾಯಿತು. ಬಳಿಕ ವಿದ್ಯಾಪೀಠಕ್ಕೆ ಒಂದು ಪ್ರದಕ್ಷಿಣೆ ಬಂದು ವೃಂದಾವನ ಸ್ಥಳಕ್ಕೆ ಬುಟ್ಟಿಯಲ್ಲಿ ಕೂರಿಸಿ ಕರೆತರಲಾಯಿತು.

ಮೊದಲಿಗೆ ದೇಹಕ್ಕೆ ಸ್ನಾನ ಮಾಡಿಸಲಾಯಿತು. ನಂತರ ಗೋಪಿ ಚಂದನ, ಮುದ್ರಾಧಾರಣೆ ಮಾಡಲಾಯಿತು. ಶ್ರೀ ಕೃಷ್ಣನ ಪೂಜೆಯನ್ನು ಶ್ರಿಗಳಿಂದ ಮಾಡಿಸಿ, ದೇವಸ್ಥಾನ ಪಕ್ಕ ಉದ್ಯಾನದಲ್ಲಿ ತಾತ್ಕಾಲಿಕವಾಗಿ ಮಾಡಿದ್ದ ವೃಂದಾವನ ಗುಂಡಿಯಲ್ಲಿ ಶ್ರೀಗಳ ಶರೀರವನ್ನು ಸ್ವಸ್ತಿಕಾಸನದಲ್ಲಿ ಇರಿಸಲಾಯಿತು.

ಶ್ರೀಗಳ ಬ್ರಹ್ಮರಂದ್ರಕ್ಕೆ ತೆಂಗಿನ ಕಾಯಿ ಇಡಲಾಯಿತು. ಸಾಸಿವೆ, ಉಪ್ಪು, ಹತ್ತಿಯನ್ನು ಹಾಕಲಾಯಿತು. ಗಿಂಡಿ, ತುಳಸಿ ಮಾಲೆ, ಪೂಜಾ ಸಾಮಗ್ರಿ ಇಡಲಾಯಿತು. ಬಳಿಕ ವೃಂದಾವನ್ನು ಮಣ್ಣಿನಿಂದ ಮುಚ್ಚಲಾಯಿತು. ಬೇರೆ ಪುಣ್ಯ ಕ್ಷೇತ್ರಗಳಿಂದ ತಂದ‌ ಮಣ್ಣನ್ನು ಕೂಡಾ‌ ಹಾಕಲಾಯಿತು. ಬೃಂದಾವನದ ಮೇಲೆ ಪಾತ್ರೆ ಹಾಗೂ ಅದರಲ್ಲಿ ಸಾಲಿಗ್ರಾಮ ಇರಿಸಲಾಯಿತು. ಈ ಪಾತ್ರೆಯಲ್ಲಿ ರಂಧ್ರ ಇರುತ್ತದೆ. ಪ್ರತಿ ದಿನ ಪೂಜೆ ಮಾಡಿದ ಬಳಿಕ ನೀರನ್ನು ಸಾಲಿಗ್ರಾಮಕ್ಕೆ ಸುರಿಯಲಾಗುತ್ತದೆ.‌ ಆ ನೀರು ಅವರ ದೇಹದ ಮೇಲೆ ಬೀಳುತ್ತದೆ.

ಸದ್ಯಕ್ಕೆ ತಾತ್ಕಾಲಿಕ ‌ಬೃಂದಾವನ ಮಾಡಲಾಗಿದ್ದು, ಒಂದೆರಡು ತಿಂಗಳುಗಳ ನಂತರ ಇದೇ ತಿಥಿ ಗೊತ್ತುಮಾಡಿ, ವ್ಯವಸ್ಥಿತವಾಗಿ ರೂಪಿಸಿದ ಕಲ್ಲಿನ ಬೃಂದಾವನ ಪ್ರತಿಷ್ಠಾಪಿಸಲಾಗುತ್ತದೆ.

ವಿದ್ಯಾಪೀಠದ ಕಾರ್ಯದರ್ಶಿ ಕೇಶವಾಚಾರ್ಯ ಅವರ ನೇತೃತ್ವದಲ್ಲಿ ಅಂತಿಮ‌ ವಿಧಿ ವಿಧಾನಗಳು ಉಡುಪಿ‌ ಮಾಧ್ವ ಸಂಪ್ರದಾಯದಂತೆ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.