
ಡಿಯುನಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಬೀಚ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕರ್ನಾಟಕದ ಪೆಂಕಾಕ್ ಸಿಲಾಟ್ ಪುರುಷರ ಮತ್ತು ಮಹಿಳೆಯರ ತಂಡ. ಎಡದಿಂದ. ಹರ್ಷಿತ್, ಆಕಾಶ್, ರಿಷಿತಾ, ದೇಚಮ್ಮ ಮತ್ತು ಮನೋಜ್‌ಕುಮಾರ್,
ದಿಯು: ‘ಪೆಂಕಾಕ್ ಸಿಲಾಟ್ ಕ್ರೀಡೆಯ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಹಲವು ಪದಕಗಳನ್ನು ಗೆದ್ದಿದ್ದೇವೆ. ಆದರೆ, ಈ ಕ್ರೀಡೆಗೆ ಮತ್ತು ಕ್ರೀಡಾಪಟುಗಳಿಗೆ ನಮ್ಮ ರಾಜ್ಯದಲ್ಲಿ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ’
ಇಂದು ಎರಡನೇ ಆವೃತ್ತಿಯ ಖೇಲೊ ಇಂಡಿಯಾ ಬೀಚ್ ಗೇಮ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದ ಕ್ರೀಡಾಪಟುಗಳ ಅಳಲು. ಇಲ್ಲಿನ ಘೋಘ್ಲಾ ಕಡಲ ತೀರದಲ್ಲಿ ನಡೆಯುತ್ತಿರುವ ಕೂಟದಲ್ಲಿ ಕರ್ನಾಟಕದ ಪೆಂಕಾಕ್ ಸಿಲಾತ್‌ನ ರೆಗು ಪುರುಷರ ತಂಡ ಮತ್ತು ಗಾಂಡಾದಲ್ಲಿ ಮಹಿಳೆಯರ ತಂಡವು ಕಂಚಿನ ಪದಕದ ಸಾಧನೆ ಮಾಡಿದೆ.
ಕೊಪ್ಪಳ ಗಂಗಾವತಿಯ ಆಕಾಶ್ ದೊಡ್ಡವಾಳ, ಮನೋಜ್ ಕುಮಾರ್ ಎ.ಪಿ. ಮತ್ತು ಬೆಂಗಳೂರಿನ ಹರ್ಷಿತ್ ಎ. ಅವರ ತಂಡವು ಗುರುವಾರ ಕಂಚಿನ ಸಾಧನೆ ಮಾಡಿದೆ. ಬಳ್ಳಾರಿ ಕಂಪ್ಲಿಯ ರಿಷಿತಾ ಜಿ. ಮತ್ತು ಕೊಡಗು ಮೂಲದ ದೇಜಮ್ಮ ಸುದಯ ಅವರ ತಂಡವು ಬುಧವಾರ ಗಾಂಡಾ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದೆ.
ಪೆಂಕಾಕ್ ಸಿಲಾಟ್ ಎಂಬುದು ಮಲಯ ಸಂಸ್ಕೃತಿಯಲ್ಲಿ ಬೇರೂರಿರುವ ವಿಶಿಷ್ಟವಾದ ಸಮರ ಕಲೆ. ಇದು ಇಂಡೊನೇಷ್ಯಾ, ಮಲೇಷ್ಯಾದ ಸಂಪ್ರಾದಾಯಕ ಕರಾಟೆ ಎಂದು ಕರೆಯುತ್ತಾರೆ. ಇದರಲ್ಲಿ ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ತುಂಗಲ್ (ಸಿಂಗಲ್ ಆರ್ಟಿಸ್ಟಿಕ್), ಗಾಂಡಾ (ಡಬಲ್ ಆರ್ಟಿಸ್ಟಿಕ್), ರೆಗು (ತ್ರಿಬಲ್ ಆರ್ಟಿಸ್ಟಿಕ್), ಸೋಲೊ ಕ್ರಿಯೇಟಿವ್ ಮತ್ತು ಟ್ಯಾಂಡಿಂಗ್ (ಫೈಟಿಂಗ್) ಇದು ಈ ಸ್ಪರ್ಧೆಯಲ್ಲಿರುವ ವಿಭಾಗಗಳು. ಈ ಕ್ರೀಡೆಯು ಕರಾಟೆ, ಬಾಕ್ಸಿಂಗ್, ಜುಡೊ ಮತ್ತು ಕುಸ್ತಿಯ ಮಿಶ್ರಣವಾಗಿದೆ.
‘ಕಳೆದ ಹತ್ತು ವರ್ಷಗಳಿಂದ ರಾಷ್ಟ್ರ ಮಟ್ಟದ ಪೆಂಕಾಕ್ ಸಿಲಾಟ್ ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಹಲವು ಪದಕಗಳನ್ನು ಗೆದ್ದಿದ್ದೇವೆ. ಆದರೆ, ರಾಷ್ಟ್ರೀಯ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಿದ್ದೇವೆ. ಆದರೆ, ನಮಗೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ’ ಎಂದು ಕಂಚಿನ ಪದಕ ಗೆದ್ದ ತಂಡದ ಸದಸ್ಯ ಆಕಾಶ್ ದೊಡ್ಡವಾಳ ಬೇಸರ ವ್ಯಕ್ತಪಡಿಸಿದರು.
‘ನಮ್ಮ ರಾಜ್ಯವನ್ನು ಪ್ರತಿನಿಧಿಸಿ ಪದಕ ಗೆದ್ದಿರುವುದು ಖುಷಿಯಿದೆ. ಆದರೆ, ರಾಜ್ಯ ಸರ್ಕಾರದಿಂದ ನಿರೀಕ್ಷಿತ ಪ್ರೋತ್ಸಾಹ ದೊರಕಿಲ್ಲ. ಚಿನ್ನ ಗೆಲ್ಲುವ ಗುರಿಯಿಂದಲೇ ಇಲ್ಲಿ ಕಣಕ್ಕೆ ಇಳಿದಿದ್ದೆವು. ನಮಗೂ ಸೂಕ್ತ ರೀತಿಯ ತರಬೇತಿ ಸಿಗುತ್ತಿದ್ದರೆ ಖಂಡಿತವಾಗಿಯೂ ಸ್ವರ್ಣ ಪದಕ ಜಯಿಸುತ್ತಿದ್ದೆವು. ರಾಜ್ಯ ಸರ್ಕಾರದಿಂದ ನೆರವು ದೊರೆತರೆ ದಿಯುನಲ್ಲೇ ನಡೆಯುವ ಮೂರನೇ ಆವೃತ್ತಿಯಲ್ಲಿ ಚಿನ್ನ ಗೆದ್ದು ತರುತ್ತೇವೆ’ ಎಂದು ಅವರು ಹೇಳಿದರು.
‘ರಾಜ್ಯದಲ್ಲಿ 800ಕ್ಕೂ ಅಧಿಕ ಪೆಂಕಾಕ್ ಸಿಲಾಟ್ ಕ್ರೀಡಾಪಟುಗಳು ಇದ್ದಾರೆ. ಇತರ ರಾಜ್ಯಗಳಲ್ಲಿ ಇದೇ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳಲ್ಲಿ ಕ್ರೀಡಾ ಕೋಟಾದ ಅಡಿಯಲ್ಲಿ ಉದ್ಯೋಗ ದೊರಕಿದೆ. ಆದರೆ, ನಮ್ಮಲ್ಲಿ ಯಾರಿಗೂ ಉದ್ಯೋಗ ಸಿಗದಿರುವುದು ಆತ್ಮವಿಶ್ವಾಸ ಕುಗ್ಗಿಸಿದೆ’ ಎಂದು ನೋವು ತೋಡಿಕೊಂಡರು.
ಮಾನ್ಯತೆ ಕೊಡುತ್ತಿಲ್ಲ: ‘ಭಾರತ ಪೆಂಕಾಕ್ ಸಿಲಾಟ್ ಒಕ್ಕೂಟದ ಕೇಂದ್ರ ಕಚೇರಿ ನಮ್ಮ ರಾಜ್ಯದಲ್ಲೇ ಇದೆ. ಇದೇ ಒಕ್ಕೂಟದ ಅಧೀನದಲ್ಲಿ 20ಕ್ಕೂ ಅಧಿಕ ರಾಜ್ಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಸಂಸ್ಥೆಗಳಿಗೆ ಅಲ್ಲಿನ ಕ್ರೀಡಾ ಪಾಧಿಕಾರಗಳಿಂದ ಮಾನ್ಯತೆ ಲಭಿಸಿದೆ. ಆದರೆ, ಕರ್ನಾಟಕದಲ್ಲಿ ಮಾನ್ಯತೆ ಸಿಗದಿರುವುರಿಂದ ಕ್ರೀಡಾಪಟುಗಳಿಗೆ ಸೌಲಭ್ಯ ಪಡೆಯಲು ಅಡಚಣೆಯಾಗಿದೆ’ ಎಂದು ಪೆಂಕಾಕ್ ಸಿಲಾಟ್‌ನ ತಾಂತ್ರಿಕ ನಿರ್ದೇಶಕ, ಒಕ್ಕೂಟದ ಸ್ಥಾಪಕ ಸದಸ್ಯರೂ ಆಗಿರುವ ಅಬ್ದುಲ್ ರಜಾಕ್ ಅಸಮಾಧಾನ ಹೊರಹಾಕಿದರು.
ಗಮನ ಸೆಳೆಯುತ್ತೇನೆ:
‘ರಾಜ್ಯದಲ್ಲಿರುವ ಯಾವುದೇ ಕ್ರೀಡಾ ಸಂಸ್ಥೆಗಳಿಗೆ ಕರ್ನಾಟಕ ಕ್ರೀಡಾ ಪಾಧಿಕಾರ ಮಾನ್ಯತೆ ನೀಡುತ್ತದೆ. ರಾಜ್ಯ ಪೆಂಕಾಕ್ ಸಿಲಾಟ್ ಸಂಸ್ಥೆಗೆ ಮಾನ್ಯತೆ ನೀಡುವ ಕುರಿತು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ನಾನೇ ಗಮನ ಸೆಳೆಯುತ್ತೇನೆ. ಆ ಸಂಸ್ಥೆಯ ಬಗ್ಗೆ ಅಧ್ಯಯನ ನಡೆಸಿ ಸಭೆಯು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್. ಅವರು ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.
‘ಖೇಲೊ ಇಂಡಿಯಾ ಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪದಕ ಗೆದ್ದಿರುವುದು ಹೆಮ್ಮೆಯ ವಿಷಯ. ಸಾಧಕ ಕ್ರೀಡಾಪಟುಗಳಿಗೆ ನಗದು ಬಹುಮಾನ, ಇತರ ಸೌಲಭ್ಯಗಳು ಸರ್ಕಾರದಿಂದ ಖಂಡಿತವಾಗಿಯೂ ಸಿಗಲಿದೆ. ಅವರಿಗೆ ಕ್ರೀಡಾ ಮೀಸಲಾತಿಯಲ್ಲಿ ಉದ್ಯೋಗ ಕಲ್ಪಿಸುವ ಕುರಿತು ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಲಾಗುವುದು. ಸಂಸ್ಥೆಯ ಮಾನ್ಯತೆಗೂ, ಕ್ರೀಡಾಪಟುಗಳ ಸೌಲಭ್ಯಕ್ಕೂ ಸಂಬಂಧವಿಲ್ಲ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.