ADVERTISEMENT

4 ಜಿಲ್ಲೆಗಳ ಎಸಿ ವ್ಯಾಪ್ತಿಯ 13,000 ಪ್ರಕರಣ ಬಾಕಿ: ಶೀಘ್ರ ಇತ್ಯರ್ಥಕ್ಕೆ ಸೂಚನೆ

ತಿಂಗಳ ಕೊನೆಯೊಳಗೆ ಇತ್ಯರ್ಥಕ್ಕೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 13:53 IST
Last Updated 7 ಜನವರಿ 2026, 13:53 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿನ ಉಪ ವಿಭಾಗಾಧಿಕಾರಿಗಳ ವ್ಯಾಪ್ತಿಯಲ್ಲಿ ಸುಮಾರು 13 ಸಾವಿರ ಪ್ರಕರಣ ಬಾಕಿ ಇವೆ. ಇದು ರಾಜ್ಯದಲ್ಲೇ ಅತಿ ಹೆಚ್ಚಾಗಿದ್ದು, ತ್ವರಿತಗತಿಯಲ್ಲಿ ಈ ಪ್ರಕರಣ ವಿಲೇವಾರಿ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದರು.

ಈ ನಾಲ್ಕು ಜಿಲ್ಲೆಗಳ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. 

‘ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲೇ ಅತಿ ಹೆಚ್ಚು ಪ್ರಕರಣಗಳು ಉಳಿದಿವೆ. ರಾಜ್ಯದ ಇತರ ಭಾಗಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದಾಗ ಅವರಿಗೆ ಏನೆಂದು ಉತ್ತರ ನೀಡಲಿ. ಉಳಿದ ಜಿಲ್ಲೆಗಳಲ್ಲಿ ಕೇವಲ ಆರು ಸಾವಿರ ಪ್ರಕರಣ ಮಾತ್ರ ಬಾಕಿ ಇವೆ. ನಾಲ್ಕು ಜಿಲ್ಲೆಗಳ ಅಧಿಕಾರಿಗಳು ತಮ್ಮ ಕೆಲಸಕ್ಕೆ ವೇಗ ನೀಡಿದರೆ ಮಾತ್ರ ಇತರ ಜಿಲ್ಲೆಗಳ ಅಧಿಕಾರಿಗಳನ್ನು ಪ್ರಶ್ನಿಸಲು ಸಾಧ್ಯವಾಗುತ್ತದೆ’ ಎಂದರು.

ADVERTISEMENT

‘ಕಳೆದ ಅಕ್ಟೋಬರ್‌ನಲ್ಲಿ ಈ ನಾಲ್ಕು ಜಿಲ್ಲೆಗಳಲ್ಲಿ 15,364 ಪ್ರಕರಣ ಬಾಕಿ ಇದ್ದವು. ಈಗ 13,610 ಕ್ಕೆ ಇಳಿದಿರುವುದು ಉತ್ತಮ ಬೆಳವಣಿಗೆ. ಕಳೆದು ಹೋದ ಕಡತಗಳು, ಆರ್‌ಸಿಎಂಎಸ್‌ನಲ್ಲಿ ವಿಲೇವಾರಿ ಆಗದ ಪ್ರಕರಣಗಳು, ಅನರ್ಹ ಪ್ರಕರಣಗಳು ಹಾಗೂ ಆದೇಶಕ್ಕಾಗಿ ಕಾಯ್ದಿರಿಸಿದ ಪ್ರಕರಣಗಳನ್ನು ಈ ತಿಂಗಳ ಕೊನೆಯೊಳಗೆ ಇತ್ಯರ್ಥಗೊಳಿಸಿದರೆ ಈ ಸಂಖ್ಯೆ ಮತ್ತಷ್ಟು ಸುಧಾರಿಸುತ್ತದೆ’ ಎಂದು ಅವರು ಹೇಳಿದರು.

‘ಉಪ ವಿಭಾಗಾಧಿಕಾರಿಗಳಿಗೆ ತಮ್ಮ ಮುಂದಿರುವ ಸವಾಲುಗಳು ಹಾಗೂ ಪರಿಹಾರಗಳ ಬಗ್ಗೆ ಅರಿವಿದೆ. ಆದ್ದರಿಂದ ಸುಲಭವಾಗಿ ಇತ್ಯರ್ಥಗೊಳ್ಳಬಹುದಾದ ಪ್ರಕರಣಗಳನ್ನು ಮೊದಲು ಕೈಗೆತ್ತಿಕೊಳ್ಳಬೇಕು. ಮಾರ್ಚ್‌ ಕೊನೆಯೊಳಗೆ ಆರು ತಿಂಗಳು ಮೀರಿದ ಎಲ್ಲಾ ಪ್ರಕರಣಗಳನ್ನು ಕಡ್ಡಾಯವಾಗಿ ಇತ್ಯರ್ಥಗೊಳಿಸಬೇಕು’ ಎಂದು ಸೂಚಿಸಿದರು.

ಫೆಬ್ರುವರಿ ಮೊದಲ ವಾರದಲ್ಲಿ ಈ ನಾಲ್ಕೂ ಜಿಲ್ಲೆಗಳ ಮತ್ತೊಂದು ಸಭೆ ನಡೆಸಿ, ಅದರ ಆಧಾರದಲ್ಲಿ ರಾಜ್ಯಾದ್ಯಂತ ಇರುವ ಎಲ್ಲಾ ಉಪವಿಭಾಗಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು.

ಈ ನಾಲ್ಕೂ ಜಿಲ್ಲೆಗಳಲ್ಲಿ ಸುಧಾರಣೆ ಕಾಣದಿದ್ದರೆ, ಇಡೀ ರಾಜ್ಯದ ಎಲ್ಲ ಉಪವಿಭಾಗಾಧಿಕಾರಿಗಳ ಸಭೆಯೂ ವ್ಯರ್ಥವಾಗುತ್ತದೆ. ಆದ್ದರಿಂದ ಪ್ರತಿ ಶನಿವಾರ ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ಮೇಲ್ವಿಚಾರಣೆ ಸಭೆ ನಡೆಸುವಂತೆ ನೂತನ ಕಂದಾಯ ಆಯುಕ್ತೆ ಮೀನಾ ನಾಗರಾಜ್ ಅವರಿಗೆ ಸೂಚಿಸಿದರು

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್  ಉಪಸ್ಥಿತರಿದ್ದರು.

* ರಾಜ್ಯಾದ್ಯಂತ 19,000 ಪ್ರಕರಣಗಳು ಬಾಕಿ

* ನಾಲ್ಕು ಜಿಲ್ಲೆಗಳಲ್ಲಿ ಬಾಕಿ ಇರುವ ಪ್ರಕರಣ ಇದೇ ತಿಂಗಳು ಇತ್ಯರ್ಥಕ್ಕೆ ಸೂಚನೆ

*ಆಯುಕ್ತರಿಂದ ಪ್ರತಿ ಶನಿವಾರ ಮೇಲ್ವಿಚಾರಣಾ ಸಭೆ