ADVERTISEMENT

ಚನ್ನಡಲು ಸಂತ್ರಸ್ತರಿಂದ ಮನೆಯ ಅಡಿಪಾಯದಲ್ಲಿ ರಾಷ್ಟ್ರಧ್ವಜ ಹಾರಾಟ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 23:15 IST
Last Updated 13 ಆಗಸ್ಟ್ 2022, 23:15 IST
ಕಳಸ ತಾಲ್ಲೂಕಿನ ಇಡಕಿಣಿ ಗ್ರಾಮದಲ್ಲಿ ತಮ್ಮ ಮನೆಗಳ ಅಡಿಪಾಯದ ಮೇಲೆ ಚನ್ನಡಲು ಸಂತ್ರಸ್ತರು ರಾಷ್ಟ್ರಧ್ವಜ ಹಾರಿಸಿದರು
ಕಳಸ ತಾಲ್ಲೂಕಿನ ಇಡಕಿಣಿ ಗ್ರಾಮದಲ್ಲಿ ತಮ್ಮ ಮನೆಗಳ ಅಡಿಪಾಯದ ಮೇಲೆ ಚನ್ನಡಲು ಸಂತ್ರಸ್ತರು ರಾಷ್ಟ್ರಧ್ವಜ ಹಾರಿಸಿದರು   

ಕಳಸ: ಚನ್ನಡಲು ಭೂಕುಸಿತದ ಸಂತ್ರಸ್ತರು ತಮ್ಮ ಮನೆಗಳ ಅಡಿಪಾಯದ ಮೇಲೆ ಶನಿವಾರ ರಾಷ್ಟ್ರಧ್ವಜ ಹಾರಿಸಿದರು.

ಇಡಕಿಣಿ ಗ್ರಾಮದ ಓಡಿನಕುಡಿಗೆಯಲ್ಲಿ ತಮಗೆ ಕಾದಿರಿಸಿರುವ ಜಮೀನಿನಲ್ಲಿ ತಾವು ನಿರ್ಮಿಸಿಕೊಂಡಿರುವ ಅಡಿಪಾಯದ ಬಳಿ ಬೆಳಿಗ್ಗೆ ಸಂತ್ರಸ್ತರು ಸೇರಿದರು. ತಮ್ಮ ಮನೆಗಳ ಅಡಿಪಾಯದ ಮೇಲೆ ಅವರು ಪ್ರತ್ಯೇಕವಾಗಿ ರಾಷ್ಟ್ರಧ್ವಜ ಹಾರಿಸಿದರು.

ಈ ಬಗ್ಗೆ ಮಾತನಾಡಿದ ಯುವಕ ಅವಿನಾಶ್, ‘ಹರ್‌ ಘರ್ ತಿರಂಗಾ’ ಘೋಷಣೆ ಮೂಲಕ ಮನೆಗಳ ಮೇಲೆ ಧ್ವಜ ಹಾರಿಸಲು ಕರೆ ನೀಡಲಾಗಿದೆ. ನಮಗೆ ಮನೆ ಇಲ್ಲದ ಕಾರಣ ನಾವು ಅಡಿಪಾಯದ ಮೇಲೆ ಬಾವುಟ ಹಾರಿಸಿದ್ದೇವೆ. ಇದು ಯಾರ ವಿರುದ್ಧ ಪ್ರತಿಭಟನೆ ಅಥವಾ ಧ್ವಜಕ್ಕೆ ಅಗೌರವ ಅಲ್ಲ. ನಮ್ಮ ದೇಶಭಕ್ತಿಯನ್ನು ನಾವು ತೋರಿಸುತ್ತಿದ್ದೇವೆ ಅಷ್ಟೇ’ ಎಂದರು.

ADVERTISEMENT

ಚನ್ನಡಲಿನಲ್ಲಿ 2019ರಲ್ಲಿ ನಡೆದ ಭೂಕುಸಿತದಿಂದಾಗಿ ಮನೆ ಕಳೆದುಕೊಂಡ ಈ 16 ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು ಅಧಿಕಾರಿಗಳು ನಿವೇಶನ ತೋರಿಸಿದ್ದಾರೆ. ಆದರೆ, ಈವರೆಗೂ ಅವರಿಗೆ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಹಕ್ಕುಪತ್ರ ಸಿಕ್ಕಿಲ್ಲ. ಇದರಿಂದ ಮನೆ ನಿರ್ಮಾಣಕ್ಕೆ ಅನುದಾನ ಕೂಡ ಸಿಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.