ADVERTISEMENT

ಮುರುಘಾಶ್ರೀ ವೈದ್ಯಕೀಯ ತಪಾಸಣೆಗೆ ಜಿಲ್ಲಾ ನ್ಯಾಯಾಲಯ ಅನುಮತಿ

ಕರೋನರಿ ಆಂಜಿಯೋಗ್ರಾಮ್‌ಗೆ ವೈದ್ಯರ ಸಲಹೆ, ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 19:03 IST
Last Updated 7 ಸೆಪ್ಟೆಂಬರ್ 2022, 19:03 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಚಿತ್ರದುರ್ಗ: ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರಾಗೃಹದಿಂದಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ವೈದ್ಯಕೀಯ ಪರೀಕ್ಷೆ ನಡೆಸಲು ಜಿಲ್ಲಾ ನ್ಯಾಯಾಲಯ ಬುಧವಾರ ಅನುಮತಿ ನೀಡಿತು.

ಹೃದಯ ಸಂಬಂಧಿ ಸಮಸ್ಯೆ ತೀವ್ರಗೊಂಡಿರುವುದರಿಂದ ಕರೋನರಿ ಆಂಜಿಯೋಗ್ರಾಮ್‌ ನಡೆಸಿ ಪರಿಶೀಲಿಸುವ ಅಗತ್ಯವಿದೆ ಎಂಬುದಾಗಿ ತಜ್ಞ ವೈದ್ಯರು ನೀಡಿದ್ದ ವರದಿಯ ಆಧಾರದ ಮೇರೆಗೆ ಕಾರಾಗೃಹದ ಅಧೀಕ್ಷಕಿ ಮಹಾದೇವಿ ಎಂ. ಮರಕಟ್ಟಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಕೆ. ಕೋಮಲಾ ಅವರು ವೈದ್ಯಕೀಯ ಪರೀಕ್ಷೆಗೆ ಅನುಮತಿ ನೀಡಿದರು.

‘ಕಾರಾಗೃಹದ ಸಮೀಪವಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಗಮನಕ್ಕೆ ತನ್ನಿ’ ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

ADVERTISEMENT

ಆರೋಪಿಯನ್ನು ಕಾರಾಗೃಹದಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಇದೆ. ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಚಿತ್ರದುರ್ಗ ಹಾಗೂ ಅಕ್ಕಪಕ್ಕದ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕರೋನರಿ ಆಂಜಿಯೋಗ್ರಾಮ್‌ ಸೌಲಭ್ಯ ಇಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

ಬಂಧನದ ಮಾರನೇ ದಿನ ಸೆ.2ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಮುರುಘಾಶ್ರೀಗಳನ್ನು ತೀವ್ರ ನಿಗಾ ಘಟಕದಲ್ಲಿ ಪರೀಕ್ಷಿಸಿದ್ದ ವೈದ್ಯರು, ಹೃದಯ ಸಂಬಂಧಿ ಸಮಸ್ಯೆ ಇರುವುದಾಗಿ ವರದಿ ನೀಡಿದ್ದರು.

ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀ ಅವರನ್ನು ಹೃದಯ ತಪಾಸಣೆಗೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯಲು ಅನುಮತಿ ನೀಡುವಂತೆ ಕಾರಾಗೃಹದ ಅಧೀಕ್ಷಕರು ನ್ಯಾಯಾಲಯವನ್ನು ಕೋರಿದ್ದರು. ಆದರೆ, ಕೋರಿಕೆಯನ್ನು ಪರಿಗಣಿಸದ ನ್ಯಾಯಾಲಯ ಆರೋಪಿಯನ್ನು ಪೊಲೀಸ್‌ ವಶಕ್ಕೆ ನೀಡಿತ್ತು.

ಜಾಮೀನಿಗೆ ತಕರಾರು ಸಲ್ಲಿಸಲು ಅವಕಾಶ

ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ನ್ಯಾಯಾಲಯ, ಸಂತ್ರಸ್ತ ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿತು. ಈ ಸಂಬಂಧದ ವರದಿಯನ್ನು ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸೂಚಿಸಿತು.

ಪ್ರಕರಣದ ಪ್ರಮುಖ ಆರೋಪಿಯಾದ ಶಿವಮೂರ್ತಿ ಮುರುಘಾ ಶರಣರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮೂರನೇ ಆರೋಪಿ 17 ವರ್ಷದ ಬಾಲಕ, ನಾಲ್ಕನೇ ಆರೋಪಿ ಪರಮಶಿವಯ್ಯ ಹಾಗೂ ಐದನೇ ಆರೋಪಿ ಗಂಗಾಧರಯ್ಯ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ಗುರುವಾರದೊಳಗೆ ತಕರಾರು ಸಲ್ಲಿಸಲು ಸಂತ್ರಸ್ತರ ಪರ ವಕೀಲರಿಗೆ ಅವಕಾಶ ನೀಡಲಾಯಿತು.

***

ಎರಡನೇ ಆರೋಪಿ, ಹಾಸ್ಟೆಲ್‌ನ ಮಹಿಳಾ ವಾರ್ಡನ್‌ ವಿಚಾರಣೆ ನಡೆಸಲಾಗುತ್ತಿದೆ. ಇತರರ ಜಾಮೀನು ಅರ್ಜಿಗೆ ಸಂಬಂಧಿಸಿ ದಂತೆ ಹೇಳಿಕೆ ದಾಖಲಿಸಲು ಸಂತ್ರಸ್ತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

- ಕೆ.ಪರಶುರಾಮ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.