ADVERTISEMENT

ಆನ್‌ಲೈನ್‌ ಮದ್ಯ ಮಾರಾಟಕ್ಕೆ ಸರ್ಕಾರ ಚಿಂತನೆ

ಅಧ್ಯಯನಕ್ಕೆ ಅಬಕಾರಿ ಆಯುಕ್ತರ ನೇತೃತ್ವದಲ್ಲಿ ಸಮಿತಿ– ಸಚಿವ ಎಚ್. ನಾಗೇಶ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 20:31 IST
Last Updated 1 ಸೆಪ್ಟೆಂಬರ್ 2020, 20:31 IST
   

ಬೆಂಗಳೂರು: ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ಸುಳಿವು ನೀಡಿದ ಅಬಕಾರಿ ಸಚಿವ ಎಚ್. ನಾಗೇಶ್, ‘ಬೇರೆ ರಾಜ್ಯಗಳಲ್ಲಿ ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಈ ಬಗ್ಗೆ ವರದಿ ನೀಡಲು ಇಲಾಖೆಯ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ಸಮಿತಿ‌ ರಚಿಸಲಾಗಿದೆ’ ಎಂದರು.

‘ಮಹಿಳೆಯರು, ಯುವಕರು ಹೊರಗಡೆ ಹೋಗಿ ಖರೀದಿ ಮಾಡಲು ಸಮಸ್ಯೆಯಾಗುತ್ತಿದೆ. ಹೀಗಾಗಿ, ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಸಾಧಕ– ಬಾಧಕಗಳ ಕುರಿತು ತಜ್ಞರು, ಬುದ್ದಿಜೀವಿಗಳ ಜೊತೆಗೂ ಚರ್ಚೆ ಮಾಡುತ್ತೇವೆ. ಆನ್‌ಲೈನ್‌ ಮದ್ಯ ಮಾರಾಟಕ್ಕೆ ಕೆಲವರಿಂದ ವಿರೋಧವೂ ಇದೆ. ಎಲ್ಲವೂ ವರದಿ ಬಂದ ಬಳಿಕ ಮುಖ್ಯಮಂತ್ರಿ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ADVERTISEMENT

‘ಕ್ಲಬ್‌, ಪಬ್‌, ಬಾರ್ ಆಂಡ್‌ ರೆಸ್ಟೊರೆಂಟ್‌ಗಳಲ್ಲಿ ಮಂಗಳವಾರದಿಂದ ಮದ್ಯ ಸೇವನೆಗೆ ಅವಕಾಶ ನೀಡಲಾಗಿದೆ. ಇದೀಗ ನಿತ್ಯ ₹ 80 ಕೋಟಿ ವರಮಾನ ನಿರೀಕ್ಷೆ ಇದೆ. ಹೀಗಾಗಿ, ವರಮಾನದಲ್ಲಿ ಶೇ 50ರಷ್ಟು ಹೆಚ್ಚಳ ಆಗಬಹುದು’ ಎಂದರು.

‘ಈಗಾಗಲೇ ಎಂಎಸ್ಐಎಲ್ ಮಳಿಗೆಗಳಿಗೆ ಹೊಸದಾಗಿ ಪರವಾನಗಿ ನೀಡಿದ್ದೇವೆ. ಬೇರೆ ಯಾವುದೇ ಮದ್ಯ ಮಾರಾಟ ಸನ್ನದುಗಳಿಗೆ ಪರವಾನಗಿ ಕೊಡುತ್ತಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

‘ಡ್ರಗ್ಸ್ ಮಾರಾಟ ವಿಷಯ ಇಲಾಖೆಯ ಗಮನಕ್ಕೆ ಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗುವುದು. ಜಂಟಿ ಕಾರ್ಯಾಚರಣೆ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.