ADVERTISEMENT

ರಸ್ತೆ ಮೇಲೆ ಪ್ರಾರ್ಥನೆಗೆ ಅನುಮತಿ ಅಗತ್ಯ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 13:51 IST
Last Updated 20 ಅಕ್ಟೋಬರ್ 2025, 13:51 IST
<div class="paragraphs"><p>ಪ್ರಿಯಾಂಕ್ ಖರ್ಗೆ</p></div>

ಪ್ರಿಯಾಂಕ್ ಖರ್ಗೆ

   

ಬೆಂಗಳೂರು: ‘ರಸ್ತೆ ಮೇಲೆ ಪ್ರಾರ್ಥನೆ ಮಾಡಲು ಅರ್ಜಿ ಹಾಕಿ ಅನುಮತಿ ಪಡೆದುಕೊಳ್ಳಬೇಕು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

‘ರಸ್ತೆ ಮೇಲೆ ಪೂರ್ವಾನುಮತಿ ಇಲ್ಲದೇ ನಮಾಜ್ ಮಾಡಲು ಮಾಡಲು ಮುಸ್ಲಿಮರಿಗೆ ಅವಕಾಶ ‌ನೀಡಬಾರದು’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ​ ಯತ್ನಾಳ ಅವರು​ ಪತ್ರ ಬರೆದಿದ್ದಾರಲ್ಲ ಎಂಬ ಪ್ರಶ್ನೆಗೆ,  ಪ್ರಿಯಾಂಕ್‌ ಹೀಗೆ ಪ್ರತಿಕ್ರಿಯಿಸಿದರು.

ADVERTISEMENT

‘ಈ ವಿಚಾರವಾಗಿ ಯತ್ನಾಳ್ ಅವರು ಇಂಗ್ಲಿಷ್​ನಲ್ಲಿ ಪತ್ರ ಬರೆದಿರುವುದು ವಿಶೇಷ. ಯಾರಿಗೆ ಸಂದೇಶ ಕೊಡಲು ಇಂಗ್ಲಿಷ್​ನಲ್ಲಿ ಪತ್ರ ಬರೆದಿದ್ದಾರೊ ಗೊತ್ತಿಲ್ಲ. ಮುಖ್ಯಮಂತ್ರಿಗೆ ಗೊತ್ತಾಗಲಿ ಎಂದೊ, ಅಮಿತ್ ಶಾಗೆ ಗೊತ್ತಾಗಲಿ ಎಂದೊ, ಅಥವಾ ಬೇರೆ ಯಾರಿಗೆ ಗೊತ್ತಾಗಲಿ ಎಂದು ಬರೆದಿದ್ದಾರೊ ಗೊತ್ತಿಲ್ಲ’ ಎಂದು ಹೇಳಿದರು.

‘ನಮ್ಮದು ಒಕ್ಕೂಟ ವ್ಯವಸ್ಥೆ. ಕೇಂದ್ರ ಸರ್ಕಾರದ ಎಲ್ಲ ನಿಯಮಗಳನ್ನು ನಾವು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರಿ ನೌಕರರು‌ ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ಕಾನೂನು ತಿದ್ದುಪಡಿ ತಂದಿದೆ. ಆದರೆ, ರಾಜ್ಯ ಸರ್ಕಾರಿ ನೌಕರರು‌ ಆರ್‌ಎಸ್‌ಎಸ್ ಕಾರ್ಯಕ್ರಮ, ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಇಲ್ಲ’ ಎಂದರು.

ಹಸ್ತಕ್ಷೇಪ ಮಾಡುವುದಿಲ್ಲ: ‘ಪಥ ಸಂಚಲನ ನಡೆಸಲು ಹೈಕೋರ್ಟ್ ಆದೇಶದಂತೆ ಆರ್‌ಎಸ್‌ಎಸ್‌ ಹೊಸದಾಗಿ ಅರ್ಜಿ ಸಲ್ಲಿಸಲಿ. ಅನುಮತಿ ನೀಡುವ ಕುರಿತು ಜಿಲ್ಲಾಡಳಿತ ತೀರ್ಮಾನ ಮಾಡಲಿದೆ. ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ’ ಎಂದೂ ಹೇಳಿದರು.

‘ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಆರ್‌ಎಸ್‌ಎಸ್‌ ಬಗ್ಗೆ ಏನು ಹೇಳಿದ್ದರು ಎಂದು ನೋಡಲಿ. ಈಗ ಸಿದ್ಧಾಂತ ಬದಲಿಸಿ, ಕುರ್ಚಿಗಾಗಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಹೊರಡಿಸಿದ್ದ‌ ಸುತ್ತೋಲೆಯಲ್ಲಿ ಆರ್‌ಎಸ್‌ಎಸ್ ಹೆಸರು ಪ್ರಸ್ತಾಪಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಾಲಿಶ ಹೇಳಿಕೆ ನೀಡಿದ್ದಾರೆ. ಈಗ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಆರ್‌ಎಸ್‌ಎಸ್‌ಗೆ ನಿರ್ಬಂಧ ಎಂದು ಎಲ್ಲೂ ಹೇಳಿಲ್ಲ. ಅವರು ಹೊರಡಿಸಿದ್ದ ಆದೇಶವನ್ನೇ ನಾವು ಮಾಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಕಪ್ಪ ಕೊಡಬೇಕು ಎಂದು ಕಣ್ಣೀರು ಹಾಕುತ್ತಾ ಹೇಳಿದ್ದರು. ಹೈಕಮಾಂಡ್‌ಗೆ ಹಣ ತಲುಪಿಸಿರಲಿಲ್ಲ ಎಂಬ ಕಾರಣಕ್ಕೆ ಆಗ ಮೂವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಆದರೆ, ಬಿಜೆಪಿಯವರು ಬಿಹಾರ ಚುನಾವಣೆಗೆ ಕಪ್ಪ ನೀಡಿದ್ದಾರೆ ಎಂದು ನಮ್ಮ (ಕಾಂಗ್ರೆಸ್) ಬಗ್ಗೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಆಪರೇಷನ್ ಕಮಲಕ್ಕೆ ಹಣ ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.