ADVERTISEMENT

ಆನ್‌ಲೈನ್‌ ಜೂಜಾಟ ತಡೆ ಕಾಯ್ದೆ ಪ್ರಶ್ನಿಸಿದ ಅರ್ಜಿ:ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 14:25 IST
Last Updated 30 ಆಗಸ್ಟ್ 2025, 14:25 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಆನ್‌ಲೈನ್ ಜೂಜು ನಿಷೇಧಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಆನ್‌ಲೈನ್‌ ಗೇಮಿಂಗ್‌ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ’ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಕಾಯ್ದೆಯನ್ನು ಪ್ರಶ್ನಿಸಿ ದೆಹಲಿಯ, ‘ಹೆಡ್‌ ಡಿಜಿಟಲ್‌ ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸಿದ್ಧಾರ್ಥ ಶರ್ಮಾ ಮತ್ತು ಮುಂಬೈನ ಸುಮಿತ್‌ ಸಿಂಗ್ ನಿಂದರಾಜೋಗ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್‌ ಅವರ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಸುಪ್ರೀಂ ಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ಆರ್ಯಮಾ ಸುಂದರಮ್‌ ಅವರು, ‘ಆನ್‌ಲೈನ್ ಗೇಮಿಂಗ್‌ ಉತ್ತೇಜನ ಮತ್ತು ನಿಯಂತ್ರಣ ಮಸೂದೆಗೆ ರಾಷ್ಟ್ರಪತಿ ಈಗಾಗಲೇ ಅಂಕಿತ ಹಾಕಿದ್ದಾರೆ. ಆದರೆ, ಅಧಿಸೂಚನೆ ಇನ್ನೂ ಪ್ರಕಟವಾಗಿಲ್ಲ. ರಾತ್ರೋರಾತ್ರಿ ಗೇಮಿಂಗ್‌ ಕ್ಷೇತ್ರವನ್ನು ಮುಚ್ಚಿದರೆ ಅದರಿಂದ ಭಾರಿ ಅಪಾಯ ಎದುರಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಇದರಲ್ಲಿ ಲಕ್ಷಾಂತರ ಮಂದಿಯ ಉದ್ಯೋಗದ ವಿಚಾರ ಅಡಕವಾಗಿದೆ. ಹಾಗಾಗಿ, ಅರ್ಜಿಗೆ ಸಂಬಂಧಿಸಿದಂತೆ ನಮ್ಮ ವಾದ ಪೂರ್ಣಗೊಳ್ಳುವ ತನಕ ಕೇಂದ್ರ ಸರ್ಕಾರ ಕಾಯ್ದೆಯ ಅಧಿಸೂಚನೆ ಪ್ರಕಟಿಸದಂತೆ ನಿರ್ದೇಶಿಸಬೇಕು. ಇಲ್ಲವೇ, ಅಧಿಸೂಚನೆ ಪ್ರಕಟಿಸುವುದಕ್ಕೂ ಒಂದು ವಾರ ಮೊದಲು ನಮಗೆ ಮಾಹಿತಿ ನೀಡಲು ನಿರ್ದೇಶಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ‘ಯಾರಿಗೋ ಸಮಸ್ಯೆಯಾಗಿದೆ ಎಂದ ಮಾತ್ರಕ್ಕೆ ಕಾಯ್ದೆಗೆ ಸಂಬಂಧಿಸಿದ ಅಧಿಸೂಚನೆ ಪ್ರಕಟಿಸುವುದನ್ನು ಮುಂಚಿತವಾಗಿ ತಿಳಿಸುವ ಅಗತ್ಯವಿಲ್ಲ. ಈ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಗದು. ಇದರಲ್ಲಿ ಗಡಿಯಾಚೆಗಿನ ಪರಿಣಾಮಗಳಿವೆ ಎಂಬುದನ್ನು ನ್ಯಾಯಪೀಠ ಸೂಕ್ಷ್ಮವಾಗಿ ಪರಿಗಣಿಸಬೇಕು’ ಎಂದು ಕೋರಿದರು.

‘ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ ಬಳಿಕ ಅಧಿಸೂಚನೆ ಪ್ರಕಟಿಸುವುದು ಸಾಂವಿಧಾನಿಕ ಪ್ರಕ್ರಿಯೆ. ಆದಾಗ್ಯೂ, ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಯಾದ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಅಂತೆಯೇ, ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.