ADVERTISEMENT

ಪ್ರವೀಣ್ ನೆಟ್ಟಾರು ಕೊಲೆ ಹಿಂದೆ ಪಿಎಫ್ಐ ಕೈವಾಡ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 9:23 IST
Last Updated 31 ಜುಲೈ 2022, 9:23 IST
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರವೀಣ್‌ ನೆಟ್ಟಾರು ಅವರ ತಾಯಿ ರತ್ನಾವತಿ ಅವರ ಜೊತೆ ಭಾನುವಾರ ಮಾತನಾಡಿದರು. (ಎಡದಿಂದ) ಪ್ರವೀಣ್‌ ಅವರ ಸೋದರಿ ರೋಹಿಣಿ, ಬಿಜೆಪಿ ಮುಖಂಡರಾದ ಆಶಾ ತಿಮ್ಮಪ್ಪ ಗೌಡ ಇದ್ದಾರೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರವೀಣ್‌ ನೆಟ್ಟಾರು ಅವರ ತಾಯಿ ರತ್ನಾವತಿ ಅವರ ಜೊತೆ ಭಾನುವಾರ ಮಾತನಾಡಿದರು. (ಎಡದಿಂದ) ಪ್ರವೀಣ್‌ ಅವರ ಸೋದರಿ ರೋಹಿಣಿ, ಬಿಜೆಪಿ ಮುಖಂಡರಾದ ಆಶಾ ತಿಮ್ಮಪ್ಪ ಗೌಡ ಇದ್ದಾರೆ   

ಸುಳ್ಯ: ‘ಪ್ರವೀಣ್ ನೆಟ್ಟಾರು ಕೊಲೆ ಹಿಂದೆ ಪಿಎಫ್ಐ ಸಂಘಟನೆಯ ಕೈವಾಡ ಇದೆ. ಕೇರಳ ಮಾದರಿಯಲ್ಲಿ ಈ ಕೊಲೆ ನಡೆಸಲಾಗಿದೆ. ಹಾಗಾಗಿಯೇ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಪ್ರಕರಣದ ತನಿಖೆಯ ಹೊಣೆಯನ್ನು ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಎನ್‌ಐಎ ನೀಡುವ ವರದಿ ಆಧಾರದಲ್ಲಿ ಪಿಎಫ್ಐ ಸಂಘಟನೆ ನಿಷೇಧಕ್ಕೆ ಕೇಂದ್ರ ಬದ್ದ’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಪ್ರವೀಣ್ ನೆಟ್ಟಾರು ಅವರ ಮನೆಗೆ ಭಾನುವಾರ ಭೇಟಿ ನೀಡಿದ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪ್ರವೀಣ್‌ ಸಾವಿಗೆ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದರು. ‘ಈ ಸಾವಿಗೆ ಖಂಡಿತಾ ನ್ಯಾಯ ದೊರಕಿಸುತ್ತೇವೆ’ ಎಂದು ಶೋಭಾ ಭರವಸೆ ನೀಡಿದರು. ಒಂದು ತಿಂಗಳ ಸಂಬಳದ ಚೆಕ್ ಮತ್ತು ₹ 5 ಲಕ್ಷ ನಗದನ್ನು ಪ್ರವೀಣ್‌ ಕುಟುಂಬಸ್ಥರಿಗೆ ಪರಿಹಾರವಾಗಿ ನೀಡಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ, ‘ಪ್ರವೀಣ್ ನೆಟ್ಟಾರು ಸಾವು ನಮಗೆಲ್ಲರಿಗೂ ದುಃಖ ತಂದಿದೆ. ಯಾರಿಗೇ ಸಮಸ್ಯೆ ಆದರೂ ಆತ ಸ್ಪಂದಿಸುತ್ತಿದ್ದ. ಎಲ್ಲರ ಜೊತೆ ಪ್ರೀತಿಯಿಂದ ಬದುಕುತ್ತಿದ್ದ ವ್ಯಕ್ತಿ ಇಂದು ನಮ್ಮೊಂದಿಗೆ ಇಲ್ಲ’ ಎಂದು ಬೇಸರ ತೋಡಿಕೊಂಡರು.

ADVERTISEMENT

‘ಪ್ರವೀಣ್‌ ಹತ್ಯೆಯಾದಾಗ ನಾನು ದೆಹಲಿಯಲ್ಲಿ ಇದ್ದೆ. ತನಿಖೆಯನ್ನು ಎನ್ಐಎಗೆ ವಹಿಸಲು ಕ್ರಮ ಕೈಗೊಂಡಿದ್ದೇವೆ. ಪ್ರಕರಣದ ನಿಜವಾದ ಆರೋಪಿಗಳು ಸಿಗುತ್ತಾರೆ. ಅವರಿಗೆ ಕಠಿಣ ಶಿಕ್ಷೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ನಾಗರಾಜ ಶೆಟ್ಟಿ, ಸುಳ್ಯ ತಾಲ್ಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್.ರೈ ಕೆಡೆಂಜಿ, ಮುಖಂಡರಾದ ಎಸ್.ಎನ್ ಮನ್ಮಥ, ಬೆಳ್ಳಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್ ಪನ್ನೆ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಮಾಜಿ ಎಪಿಎಂಸಿ ಸದಸ್ಯೆ ಪುಲಸ್ಯಾ.ರೈ, ಮುಖಂಡ ಅರುಣ್ ಕುಮಾರ್ ಪುತ್ತಿಲ ಜೊತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.