ADVERTISEMENT

ಫಲ್ಗುಣಿ ನದಿ: 40 ವರ್ಷ ಹಳೆಯ ಬೃಹತ್ ಅಡ್ಡ ಸೇತುವೆ ಕುಸಿತ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 18:39 IST
Last Updated 25 ಜೂನ್ 2018, 18:39 IST
   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳ ತಾಲ್ಲೂಕುಗಳ ಗಡಿಯಲ್ಲಿರುವ ಮುಲಾರಪಟ್ಣದಲ್ಲಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಸೋಮವಾರ ಸಂಜೆ ಕುಸಿದುಬಿದ್ದಿದೆ. ಇದರಿಂದಾಗಿ ಬಂಟ್ವಾಳ ತಾಲ್ಲೂಕು ಕೇಂದ್ರ ಮತ್ತು ನದಿಯ ಆಚೆಯ ದಡದ ಪ್ರದೇಶಗಳ ನಡುವೆ ಸಂಪರ್ಕ ಕಡಿತಗೊಂಡಿದೆ.

ಮಂಗಳೂರು ತಾಲ್ಲೂಕಿನ ಎಡಪದವು, ಬಂಟ್ವಾಳ ತಾಲ್ಲೂಕಿನ ಕುಪ್ಪೆಪದವು, ಅರಳ, ಮುತ್ತೂರು ಮಾರ್ಗವಾಗಿ ಬಂಟ್ವಾಳ ತಲುಪುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಈ ಸೇತುವೆ ಇದೆ. 1980ರ ದಶಕದಲ್ಲಿ ನಿರ್ಮಿಸಿದ್ದ 176.4 ಮೀಟರ್‌ ಉದ್ದದ ಸೇತುವೆಯ ಎರಡು ಸ್ತಂಭಗಳು ಮತ್ತು ಅವುಗಳಿಗೆ ಹೊಂದಿಕೊಂಡಿದ್ದ ಭಾಗ ಕುಸಿದು ನದಿಗೆ ಬಿದ್ದಿದೆ.

ಈ ಮಾರ್ಗದಲ್ಲಿ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ಸೇತುವೆ ಕುಸಿದ ಸಮಯದಲ್ಲಿ ಅದೃಷ್ಟವಶಾತ್‌ ಯಾವುದೇ ವಾಹನ ಅಥವಾ ಪಾದಚಾರಿಗಳು ಇರಲಿಲ್ಲ. ಹೀಗಾಗಿ ಪ್ರಾಣಹಾನಿ ತಪ್ಪಿದೆ. ಸೇತುವೆಯ ಕೆಲವು ಸ್ತಂಭಗಳು (ಪಿಲ್ಲರ್) ಬುಡ ಕುಸಿದು ಉರುಳಿ ಬಿದ್ದಿರುವುದು ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ADVERTISEMENT

ಅಧಿಕಾರಿಗಳು ದೌಡು: ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಲೋಕೋಪಯೋಗಿ, ಕಂದಾಯ ಮತ್ತು ಪೊಲೀಸ್‌ ಇಲಾಖೆಗಳ ಅಧಿಕಾರಿಗಳು ದೌಡಾಯಿಸಿದ್ದಾರೆ. ಸೇತುವೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ, ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೇತುವೆ ಮಾರ್ಗದಲ್ಲಿ ಸಂಚಾರ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.