ADVERTISEMENT

ಛಾಯಾಗ್ರಾಹಕ ಜಿ.ಎಸ್‌. ನಾರಾಯಣಸ್ವಾಮಿ ನಿಧನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 11:59 IST
Last Updated 12 ಜನವರಿ 2021, 11:59 IST
ಜಿ.ಎಸ್‌. ನಾರಾಯಣಸ್ವಾಮಿ
ಜಿ.ಎಸ್‌. ನಾರಾಯಣಸ್ವಾಮಿ   

ಬೆಂಗಳೂರು: ಐದು ದಶಕಗಳಿಗೂ ಹೆಚ್ಚು ಕಾಲ ರಾಷ್ಟ್ರ ಮತ್ತು ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ಛಾಯಾಗ್ರಾಹಕರಾಗಿದ್ದ ಖ್ಯಾತ ಛಾಯಾಗ್ರಾಹಕ ಜಿ.ಎಸ್‌. ನಾರಾಯಣಸ್ವಾಮಿ (85) ಸೋಮವಾರ ನಿಧನರಾಗಿದ್ದಾರೆ.

ಕೋಣನಕುಂಟೆಯ ಕೋಕನಟ್‌ ಬಡಾವಣೆಯಲ್ಲಿರುವ ತಮ್ಮ ಪುತ್ರನ ಮನೆಯಲ್ಲಿ ಅವರು ವಿಶ್ರಾಂತ ಜೀವನ ನಡೆಸುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ವರನಟ ಡಾ.ರಾಜ್‌ಕುಮಾರ್‌ ಅವರ ಆಪ್ತರಾಗಿದ್ದವರಲ್ಲಿ ನಾರಾಯಣಸ್ವಾಮಿ ಕೂಡ ಒಬ್ಬರೆನಿಸಿಕೊಂಡಿದ್ದರು.

ಸೌಂಡ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮೊ ಶಿಕ್ಷಣ ಪಡೆದಿದ್ದ ಅವರು 1960ರಲ್ಲಿ ‘ತಾಯಿನಾಡು’ ಪತ್ರಿಕೆಯಲ್ಲಿ ಛಾಯಾಗ್ರಾಹಕನಾಗಿ ವೃತ್ತಿ ಆರಂಭಿಸಿದ್ದರು. ‘ಸುಧಾ’ ವಾರಪತ್ರಿಕೆ ಸೇರಿದಂತೆ ಹಲವು ವಾರಪತ್ರಿಕೆಗಳು ಮತ್ತು ದಿನ ಪತ್ರಿಕೆಗಳಲ್ಲಿ ಸುದ್ದಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು.

ADVERTISEMENT

ಸುದ್ದಿ ಚಿತ್ರ, ನುಡಿಚಿತ್ರ, ಕ್ರೀಡೆ ಹಾಗೂ ಸಿನಿಮಾ ಕ್ಷೇತ್ರಗಳಿಗೆ ಸಂಬಂಧಿಸಿ ಅವರು ತೆಗೆದ ಛಾಯಾಚಿತ್ರಗಳು ಓದುಗರ ಗಮನ ಸೆಳೆದಿದ್ದವು. ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಸಿನಿ ಪ್ರಶಸ್ತಿ ಸೇರಿದಂತೆ ಹಲವು ಸಂಘಸಂಸ್ಥೆಗಳ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.