ADVERTISEMENT

ಗೂಗಲ್ ಮೀಟ್‌ನಲ್ಲಿ ಅಂಗವಿಕಲರ ಸಮಸ್ಯೆಗಳಿಗೆ ಸಲಹೆ

ಅಶಕ್ತರಿಗೆ ಕಾನೂನು ಅರಿವಿನ ಕಸುವು

ಸಂಧ್ಯಾ ಹೆಗಡೆ
Published 26 ಫೆಬ್ರುವರಿ 2022, 19:32 IST
Last Updated 26 ಫೆಬ್ರುವರಿ 2022, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ರಾಜ್ಯದ ಮೂಲೆ ಮೂಲೆಯಲ್ಲಿರುವ ಅಂಗವಿಕಲರು ಭಾನುವಾರಕ್ಕಾಗಿ ಕಾಯುತ್ತಾರೆ. ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದೆಂಬ ಆಶಾಭಾವದಲ್ಲಿ ತಮ್ಮ ಮೊಬೈಲ್ ಎದುರು ಕುಳಿತು, ತಜ್ಞರ ದನಿಗೆ ಕಿವಿಯಾಗುತ್ತಾರೆ.

ವಿಕಲಚೇತನರ ವಿಕಾಸ ವಾಟ್ಸ್‌ಆ್ಯಪ್ ಗ್ರೂಪ್ ಹಾಗೂ ಕರ್ನಾಟಕ ರಾಜ್ಯ ವಿಕಲಚೇತನ ರಕ್ಷಣಾ ಸಮಿತಿ ಸೇರಿ ಅಂಗವಿಕಲರಿಗೆ ಅವರ ಹಕ್ಕುಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಎಂಟು ತಿಂಗಳುಗಳಿಂದ ಆಯೋಜಿಸುತ್ತಿದೆ. ಪ್ರತಿ ಭಾನುವಾರ ಸಂಜೆ 4ರಿಂದ ನಡೆಯುವ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಅಂಗವಿಕಲರ ಸಮಸ್ಯೆಗಳು ಬಗೆಹರಿದಿವೆ.

‘ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಆರನೇ ಅಧ್ಯಾಯದಲ್ಲಿ, ಅಂಗವಿಕಲರ ಹಕ್ಕುಗಳ ಬಗ್ಗೆ ಜಾಗೃತಿ ಶಿಬಿರ ನಡೆಸಬೇಕು ಎಂಬ ಉಲ್ಲೇಖವಿದೆ. ಈ ನಿಯಮಗಳ ಬಗ್ಗೆ ಮುಖ್ಯವಾಗಿ ನ್ಯಾಯಾಧೀಶರು, ವಕೀಲರು ಹಾಗೂ ಅನುಷ್ಠಾನಗೊಳಿಸುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜ್ಞಾನವಿರಬೇಕು. ಕೇಂದ್ರ ಸರ್ಕಾರ 2016ರಲ್ಲಿ ಹಾಗೂ ರಾಜ್ಯ ಸರ್ಕಾರ 2019ರಲ್ಲಿ ಈ ಕಾಯ್ದೆ ಅನುಷ್ಠಾನಗೊಳಿಸಿದ್ದರೂ, ಈ ಬಗ್ಗೆ ಜಾಗೃತಿ ಕಾರ್ಯ ಆಗುತ್ತಿಲ್ಲ. ಹೀಗಾಗಿ, ಬಹಳಷ್ಟು ಅಂಗವಿಕಲರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಇಲ್ಲದೆ, ಸೌಲಭ್ಯ ಪಡೆಯಲು ಸಂಕಟಪಡುತ್ತಿದ್ದಾರೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ವಿಕಲಚೇತನ ರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ.

ADVERTISEMENT

‘ಈ ಹಿಂದೆ ‘ಅರಿವಿನ ಸಿಂಚನ’ ಕಾರ್ಯಕ್ರಮದ ಮೂಲಕ ಜಾಗೃತಿ ಕಾರ್ಯ ನಡೆಯುತ್ತಿತ್ತು. ಇದು ಸ್ಥಗಿತಗೊಂಡು ವರ್ಷ ಕಳೆದಿದೆ. ಅರಿವು ಇದ್ದಾಗ ಮಾತ್ರ ಅಶಕ್ತರು ಸೌಲಭ್ಯ ಪಡೆಯಲು ಸಾಧ್ಯ. ಹೀಗಾಗಿ, ನಾವು ವಾರದ ಸಭೆಯ ಮೊದಲ ಅರ್ಧ ಭಾಗದಲ್ಲಿ ಕಾನೂನಿನ ಬಗ್ಗೆ ತಿಳಿವಳಿಕೆ ನೀಡುತ್ತೇವೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ನಾನು ಅನುಭವಿಸಿದ ಕಷ್ಟವನ್ನು ಅಂಗವಿಕಲರು, ಅವರ ಪೋಷಕರು ಅನುಭವಿಸಬಾರದು ಎಂಬ ಕಳಕಳಿ ನನ್ನಲ್ಲಿತ್ತು. ಜತೆಗೆ, ಕೋವಿಡ್ ಸಂದರ್ಭದಲ್ಲಿ ಅನೇಕ ಅಂಗವಿಕಲರಿಗೆ ಮನೆಯಿಂದ ಹೊರಗೆ ಹೋಗಲಾಗದ ಅಸಹಾಯಕ ಪರಿಸ್ಥಿತಿ ಎದುರಾಯಿತು. ಆಗ ಹೊಳೆದ ವರ್ಚುವಲ್ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ 30ಕ್ಕೂ ಅಧಿಕ ಕಂತುಗಳನ್ನು ಪೂರೈಸಿದೆ’ ಎಂದು ಸರ್ಕಾರಿ ಮತ್ತು ಅರೆ ಸರ್ಕಾರಿ ವಿಕಲಚೇತನ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ಪ ರಾಥೋಡ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ತೆರಿಗೆ, ಸೇವಾ ಕ್ಷೇತ್ರ, ಸಂಚಾರಿ ಭತ್ಯೆ, ಬ್ಯಾಂಕ್ ಸಾಲ, ಸ್ವಯಂ ಉದ್ಯೋಗದ ಮಾಹಿತಿ ಸೇರಿದಂತೆ ಅನೇಕ ವಿಚಾರಗಳನ್ನು ಮೂರು ತಾಸಿನ ಗೂಗಲ್ ಮೀಟ್‌ನಲ್ಲಿ ಚರ್ಚಿಸಲಾಗುತ್ತದೆ. 100 ಜನರ ಮಿತಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು, ನ್ಯಾಯಾಧೀಶರನ್ನು ಆಮಂತ್ರಿಸಿ, ಅವರು ಸಹ ಭಾಗವಹಿಸುವಂತೆ ಮಾಡುತ್ತಿದ್ದೇವೆ. ಅಧಿಕಾರಿಗಳಲ್ಲಿ ಕಾನೂನಿನ ಅರಿವು ಮೂಡಿದರೆ, ಕಚೇರಿಗೆ ಬರುವ ಅಂಗವಿಕಲರಿಗೆ ಕೆಲಸ ಸುಲಭವಾಗುತ್ತದೆ’ ಎಂದು ಅವರು
ವಿವರಿಸಿದರು.

‘ಅಂಗವಿಕಲರ ಮೀಸಲಾತಿ ಅಡಿಯಲ್ಲಿ ಮನೆ ಕೊಡಿಸುವುದಾಗಿ 2016ರಲ್ಲಿ ಹಣ ಪಡೆದಿದ್ದ ವ್ಯಕ್ತಿಯೊಬ್ಬ ಅದನ್ನು ಹಿಂದಿರುಗಿಸದೆ, ಸತಾಯಿಸುತ್ತಿದ್ದ. ಭಾನುವಾರದ ಕಾರ್ಯಕ್ರಮದಲ್ಲಿ ನಾನು ಈ ವಿಚಾರ ಹಂಚಿಕೊಂಡಾಗ, ಇಲ್ಲಿನ ಸಂಪನ್ಮೂಲ ವ್ಯಕ್ತಿಗಳು ಬಹುವರ್ಷಗಳಿಂದ ಬಾಕಿ ಇದ್ದ ಈ ಸಮಸ್ಯೆಯನ್ನು ಕಾನೂನು ಮೂಲಕ ವಾರದೊಳಗೆ ಪರಿಹರಿಸಲು ನೆರವಾದರು’ ಎಂದು ಅಂಗವಿಕಲೆ ವಿಜಯಪುರದ ಗಂಗೂಬಾಯಿ ತಿಳಿಸಿದರು.

* ಪ್ರತಿವಾರ ಸರ್ಕಾರಿ, ಅರೆ ಸರ್ಕಾರಿ ನೌಕರರು, ಸಾಮಾನ್ಯ ಅಂಗವಿಕಲರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಾರೆ.

-ಶಿವಪ್ಪ ರಾಥೋಡ್, ಸರ್ಕಾರಿ ಮತ್ತು ಅರೆ ಸರ್ಕಾರಿ ವಿಕಲಚೇತನ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ

* ಸಮಾಜದ ಕಟ್ಟಕಡೆಯ ಅಂಗವಿಕಲನಿಗೂ ಆತನ ಹಕ್ಕು ದೊರೆಯಬೇಕು ಎಂಬುದು ಕಾನೂನು ಅರಿವು ಕಾರ್ಯಕ್ರಮದ ಉದ್ದೇಶ.

-ಚಂದ್ರಶೇಖರ ಪುಟ್ಟಪ್ಪ, ಕರ್ನಾಟಕ ರಾಜ್ಯ ವಿಕಲಚೇತನ ರಕ್ಷಣಾ ಸಮಿತಿ ಆಶ್ರಯದಲ್ಲಿ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.