
ಬೆಂಗಳೂರು: ಬೆಂಗಳೂರಿನಲ್ಲಿ ಪಾರಿವಾಳಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ನಾಗರಿಕರಲ್ಲಿ ಶ್ವಾಸಕೋಶದ ಸಮಸ್ಯೆಯೂ ಹೆಚ್ಚಾಗಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.
‘ನಗರದ ವಿವಿಧ ಉದ್ಯಾನಗಳಲ್ಲಿ ಮತ್ತು ಇನ್ನೂ ಕೆಲವು ಬಯಲು ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಧಾನ್ಯಗಳನ್ನು ನೀಡುವ ದಾನಿಗಳು ಕಾರ್ಯೋನ್ಮುಖರಾಗಿದ್ದಾರೆ. ಅವರ ಹೃದಯವಂತಿಕೆ ನಿಜಕ್ಕೂ ಶ್ಲಾಘನೀಯ. ಆದರೆ, ಪಾರಿವಾಳಗಳ ಸಂಖ್ಯೆ ವಿಪರೀತ ಹೆಚ್ಚಾಗಿರುವುದರಿಂದ ನಾಗರಿಕರಿಗೆ ಶ್ವಾಸಕೋಶದ ಸಮಸ್ಯೆ ಹೆಚ್ಚಾಗುತ್ತಿರುವ ಬಗ್ಗೆ ಅನೇಕ ವೈದ್ಯಕೀಯ ವರದಿಗಳಿವೆ’ ಎಂದು ಅವರು ಹೇಳಿದ್ದಾರೆ.
‘ಇದರಿಂದ ದಿನನಿತ್ಯ ಉದ್ಯಾನಗಳಲ್ಲಿ ವಾಕಿಂಗ್ ಹೋಗುವವರು, ವ್ಯಾಯಾಮ ಮಾಡುವವರು ಸಹಜವಾಗಿ ಆತಂಕಕ್ಕೆ ಈಡಾಗಿದ್ದಾರೆ. ಈ ಬಗ್ಗೆ ನನಗೆ ಮನವಿಗಳನ್ನೂ ನೀಡಿದ್ದಾರೆ. ಆದ್ದರಿಂದ ನಾಗರಿಕರ ಆರೋಗ್ಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಟ್ಟದಲ್ಲಿ ಒಂದು ತೀರ್ಮಾನ ತೆಗೆದುಕೊಳ್ಳಬೇಕು’ ಎಂದೂ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.