ADVERTISEMENT

ಪಿಐಎಲ್: ಎನ್‌ಎಚ್‌ಆರ್‌ಸಿಗೆ ಹೈಕೋರ್ಟ್ ತುರ್ತು ನೋಟಿಸ್​

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 20:06 IST
Last Updated 11 ಡಿಸೆಂಬರ್ 2023, 20:06 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ-1976 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು‘ ಎಂದು ಕೋರಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್‌ಎಚ್‌ಆರ್‌ಸಿ) ತುರ್ತು ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ, ‘ಜೀತ ವಿಮುಕ್ತಿ-ಕರ್ನಾಟಕ’ದ ಸಂಯೋಜಕ ಡಾ. ಕಿರಣ ಕಮಲ ಪ್ರಸಾದ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಈ ಹಿಂದಿನ ವಿಚಾರಣೆ ವೇಳೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಜಾರಿಗೊಳಿಸಲು ಆದೇಶಿಸಲಾಗಿದ್ದ ನೋಟಿಸ್ ತಲುಪದೇ ಇದ್ದ ಹಿನ್ನೆಲೆಯಲ್ಲಿ ನ್ಯಾಯಪೀಠವು ಮತ್ತೊಂದು ಬಾರಿ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.

ADVERTISEMENT

‘ಜೀತದಾಳುಗಳ ಗುರುತಿಸುವಿಕೆ, ಅವರ ರಕ್ಷಣೆ ಹಾಗೂ ಜೀತಕ್ಕೆ ದುಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಸೂಚಿಸಲಾದ ಮಾರ್ಗಸೂಚಿಗಳನ್ನು ರದ್ದುಪಡಿಸಬೇಕು. ಜೀತದಾಳುಗಳ ಕಲ್ಯಾಣ ಮತ್ತು ಅವರ ಆರ್ಥಿಕ ಹಿತಾಸಕ್ತಿ ಕಾಪಾಡಲು ಜಾರಿಗೆ ತಂದಿರುವ ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಕೇಂದ್ರ-ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು‘ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.