ADVERTISEMENT

ಸಿಎಸ್‌ಬಿ ರಚನೆ ಕೋರಿ ಪಿಐಎಲ್‌: ಮಾಹಿತಿ ಕೇಳಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 15:23 IST
Last Updated 30 ಜುಲೈ 2024, 15:23 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ‘ನಿರ್ದಿಷ್ಟ ಸ್ಥಳ ಮತ್ತು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಐಎಎಸ್ ಅಧಿಕಾರಿಗಳ ಕನಿಷ್ಠ ಸೇವಾವಧಿಯನ್ನು ನಿಗದಿಪಡಿಸುವ ಮತ್ತು ಕರ್ತವ್ಯ ನಿರ್ವಹಣೆಯ ವೇಳೆ ಅವರ ಹಿತಕಾಯುವ ಉದ್ದೇಶ ಹೊಂದಿದ, ‘ನಾಗರಿಕ ಸೇವಾ ಮಂಡಳಿ’ (ಸಿಎಸ್‌ಬಿ) ದೇಶದ ಬೇರೆ ಯಾವ ರಾಜ್ಯಗಳಲ್ಲಿ ಚಾಲ್ತಿಯಲ್ಲಿದೆ ಎಂಬ ಮಾಹಿತಿಯನ್ನು ಒದಗಿಸಿ’ ಎಂದು ಹೈಕೋರ್ಟ್‌, ಪ್ರಕರಣದ ಅರ್ಜಿದಾರರಿಗೆ ಸೂಚಿಸಿದೆ.

‘ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಕರ್ನಾಟಕದಲ್ಲಿ ನಾಗರಿಕ ಸೇವಾ ಮಂಡಳಿ ರಚಿಸಬೇಕು ಹಾಗೂ ನಾಗರಿಕರ ಸೇವಾ ಅಧಿಕಾರಿಗಳ ಕನಿಷ್ಠ ಸೇವಾವಧಿ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತರೂ ಆದ ನಗರದ ರಿಷಬ್ ಟ್ರಕ್ರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ನಚಿಕೇತ್ ಜೋಶಿ ವಾದ ಮಂಡಿಸಿ, ‘ಐಎಎಸ್ ಅಧಿಕಾರಿಗಳನ್ನು ಆಡಳಿತಾತ್ಮಕ ಮೇಲಧಿಕಾರಿಗಳು, ರಾಜಕಾರಣಿಗಳು ಹಾಗೂ ಇತರರ ನ್ಯಾಯಬಾಹಿರ ಹಾಗೂ ನಿರಂಕುಶ ಒತ್ತಡದಿಂದ ರಕ್ಷಿಸಬೇಕು. ಅವರು ಯಾವುದೇ ಮೌಖಿಕ ಸೂಚನೆ, ಆದೇಶ, ಅಭಿಪ್ರಾಯ ಅಥವಾ ಪ್ರಸ್ತಾವನೆಗಳನ್ನು ಆಧರಿಸಿ ಕೆಲಸ ಮಾಡುವಂತಾಗಬಾರದು’ ಎಂದು ನ್ಯಾಯಪೀಠಕ್ಕೆ ಅರುಹಿದರು.

‘ಈ ದಿಸೆಯಲ್ಲಿ ಮಾರ್ಗಸೂಚಿ ನಿಗದಿಪಡಿಸಲು ಕೇಂದ್ರ ಸರ್ಕಾರದಂತೆ ಎಲ್ಲ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳೂ ನಾಗರಿಕ ಸೇವಾ ಮಂಡಳಿ (ಸಿಎಸ್‌ಬಿ) ರಚಿಸಬೇಕು ಎಂದು 2013ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದಕ್ಕೆ 2021ರ ಹೈಕೋರ್ಟ್‌ ನಿರ್ದೇಶನವೂ ಇದೆ. ಆದರೂ, ನಾಗರಿಕ ಸೇವಾ ಮಂಡಳಿಯನ್ನು ರಾಜ್ಯದಲ್ಲಿ ಇನ್ನೂ ರಚಿಸಿಲ್ಲ. ಆದ್ದರಿಂದ, ಇದರ ರಚನೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದೇಶದ ಬೇರೆ ಯಾವ ರಾಜ್ಯಗಳಲ್ಲಿ ನಾಗರಿಕ ಸೇವಾ ಮಂಡಳಿ ರಚಿಸಲಾಗಿದೆ’ ಎಂದು ನಚಿಕೇತ್‌ ಅವರನ್ನು ಪ್ರಶ್ನಿಸಿತು. ‘ಇತ್ತೀಚೆಗೆ ಪಂಜಾಬ್ ರಾಜ್ಯದಲ್ಲಿ ಸಿಎಸ್‌ಬಿ ರಚಿಸಲಾಗಿದೆ. ಉಳಿದ ರಾಜ್ಯಗಳ ಬಗೆಗಿನ ಮಾಹಿತಿ ಸದ್ಯಕ್ಕಿಲ್ಲ’ ಎಂದು ನಚಿಕೇತ್‌ ಉತ್ತರಿಸಿದರು. ‘ಹಾಗಾದರೆ, ಬೇರೆ ಯಾವ ರಾಜ್ಯಗಳಲ್ಲಿ ಸಿಎಸ್‌ಬಿ ರಚಿಸಲಾಗಿದೆ, ಸದ್ಯದ ವಸ್ತುಸ್ಥಿತಿ ಏನಿದೆ ಎಂಬ ಬಗ್ಗೆ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.