ಪೈಪ್
ಬೆಂಗಳೂರು: ಸಿವಿಸಿ ಮತ್ತು ಪಿವಿಸಿ ಪೈಪುಗಳನ್ನು ಉತ್ಪಾದಿಸುವ ಪೊದ್ದಾರ್ ಪ್ಲಂಬಿಂಗ್ ಸಿಸ್ಟಂ ರಾಜ್ಯದಲ್ಲಿ ₹758 ಕೋಟಿ ಹೂಡಿಕೆ ಮಾಡಲು ತೀರ್ಮಾನಿಸಿದ್ದು, ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಎರಡನೇ ಹಂತದ ಉತ್ಪಾದನೆ ಆರಂಭಿಸಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಪೊದ್ದಾರ್, ನಿರ್ದೇಶಕ ವರುಣ್ ಪೊದ್ದಾರ್ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಅವರು ಮಾತನಾಡಿದರು.
ವೇಮಗಲ್ ಕೈಗಾರಿಕಾ ಪ್ರದೇಶದ ಹಂತ-2ರಲ್ಲಿ 33 ಎಕರೆ ಜಮೀನು ನೀಡಲಾಗಿದೆ. 2026ರ ಆಗಸ್ಟ್ ವೇಳೆಗೆ ಉತ್ಪಾದನಾ ಚಟುವಟಿಕೆ ಆರಂಭವಾಗಲಿದೆ. ಯೋಜನೆಯಿಂದ 12 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ನಂತರ ವಿಜಯಪುರ ಜಿಲ್ಲೆಯಲ್ಲೂ ಘಟಕವನ್ನು ತೆರೆಯಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ಕಂಪನಿ ₹1,500 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದೆ. ಸರ್ಕಾರಕ್ಕೆ ₹3 ಸಾವಿರ ಕೋಟಿ ತೆರಿಗೆ ಬರಲಿದೆ ಎಂದರು.
ಸಿವಿಸಿ ಮತ್ತು ಪಿವಿಸಿ ಪೈಪುಗಳು ನಿರ್ಮಾಣ ಕಾಮಗಾರಿ, ಕೃಷಿ ಮತ್ತು ಕೈಗಾರಿಕಾ ವಲಯಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಕಂಪನಿಯು ಈಗಾಗಲೇ ಆಶೀರ್ವಾದ್ ಬ್ರ್ಯಾಂಡ್ ಹೆಸರಿನ ಪೈಪ್ ತಯಾರಿಸುತ್ತಿದೆ. ಏಳು ಸಾವಿರ ಜನರಿಗೆ ಉದ್ಯೋಗ ನೀಡಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.