ADVERTISEMENT

ಕುಡಿಯುವ ನೀರಿನ ನಲ್ಲಿ ಸಂಪರ್ಕಕ್ಕೆ ನಿಯಮ ಸರಳ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 19:30 IST
Last Updated 2 ಡಿಸೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ನಲ್ಲಿ ಸಂಪರ್ಕ ಪಡೆಯಲುಪೌರಾಡಳಿತ ಇಲಾಖೆ ನಿಯಮಗಳನ್ನು ಸರಳೀಕರಿಸಿದ್ದು, ಅಗತ್ಯ ದಾಖಲೆಗಳು ಇಲ್ಲದಿದ್ದರೆ ಆಧಾರ್‌ ಕಾರ್ಡ್‌ ಮತ್ತು ನಷ್ಟ ಭರ್ತಿ ಮುಚ್ಚಳಿಕೆ ಪಡೆದುಕೊಂಡು ನಲ್ಲಿ ಸಂಪರ್ಕ ಕಲ್ಪಿಸಲಾಗುವುದು.

ಡಿ 1 ರಿಂದಲೇ ಅನ್ವಯವಾಗುವಂತೆ ಪೌರಾಡಳಿತ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಈಗ ನಗರ ಸ್ಥಳೀಯ ಸಂಸ್ಥೆಗಳಿಂದ ಕುಡಿಯುವ ನೀರಿನ ನಲ್ಲಿ ಸಂಪರ್ಕ ನೀಡಲು ಹಲವಾರು ದಾಖಲೆಗಳನ್ನು ಸಲ್ಲಿಸಬೇಕು. ಅಲ್ಲದೇ, ನೀರಿನ ಸಂಪರ್ಕ ಒದಗಿಸುವ ಪ್ರಕ್ರಿಯೆಯೂ ಜಟಿಲವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂಬ ದೂರುಗಳು ಬಂದಿರುವುದರಿಂದ ನಿಯಮಗಳನ್ನು ಸಡಿಲಿಸಲಾಗಿದೆ.

ನಷ್ಟ ಭರ್ತಿ ಮುಚ್ಚಳಿಕೆಯನ್ನು (indemnity bond) ನಿಗದಿತ ನಮೂನೆಯಲ್ಲಿ ₹50 ರ ನ್ಯಾಯೇತರ ಮುದ್ರಾಂಕ ಪತ್ರದಲ್ಲಿ ವಿಳಾಸದ ಪುರಾವೆಯೊಂದಿಗೆ (ಆಧಾರ್‌ ಕಾರ್ಡ್‌/ ಮತದಾರರ ಗುರುತಿನ ಚೀಟಿ/ ಬ್ಯಾಂಕ್‌ ಪಾಸ್‌ಬುಕ್‌/ ಪಾಸ್‌ಪೋರ್ಟ್‌/ಪಡಿತರ ಚೀಟಿ) ಇವುಗಳಲ್ಲಿ ಯಾವುದಾದರೊಂದನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದು ಎಂದು ಸುತ್ತೋಲೆ ಹೇಳಿದೆ.

ADVERTISEMENT

ಒಂದು ವೇಳೆ ನಲ್ಲಿ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ ಅರ್ಜಿದಾರ ಮನೆಯ ಮಾಲೀಕತ್ವ ಹೊಂದಿಲ್ಲದಿದ್ದರೂ ನಲ್ಲಿ ಸಂಪರ್ಕ ವಿಚಾರವಾಗಿ ನಗರ ಸ್ಥಳೀಯ ಸಂಸ್ಥೆಗೆ ನಷ್ಟವಾದರೆ ಅರ್ಜಿದಾರರನೇ ಆ ನಷ್ಟವನ್ನು ಭರ್ತಿ ಮಾಡಿಕೊಡುವ ಸಂಬಂಧ ನಷ್ಟ ಭರ್ತಿ ಮುಚ್ಚಳಿಕೆ ಬರೆದು ಕೊಡಬೇಕು.

ಅಲ್ಲದೇ, ವಿವಾದದ ಕಾರಣದಿಂದ ಉಂಟಾದ ಹಾನಿಯನ್ನು ನಗರ ಸ್ಥಳೀಯ ಸಂಸ್ಥೆಗೆ ಭರಿಸಲು ವಿಫಲವಾದರೆ, ಅಂತಹ ಮೊಬಲಗನ್ನು ಕಟ್ಟಡದ ಅರ್ಜಿದಾರ/ಮಾಲೀಕನನ್ನು ಜವಾಬ್ದಾರಿಯನ್ನಾಗಿ ಮಾಡಲಾಗುವುದು. ಭೂಕಂದಾಯ ಅಧಿನಿಯಮದಂತೆ ಭೂಕಂದಾಯ ಬಾಕಿ ರೂಪದಲ್ಲಿ ವಸೂಲು ಮಾಡಲು ಕ್ರಮವಹಿಸಲಾಗುವುದು ಎಂದು ಸುತ್ತೋಲೆ ವಿವರಿಸಿದೆ.

ಈ ಸುತ್ತೋಲೆಯು ಕುಡಿಯುವ ನೀರಿನ ನಲ್ಲಿ ಸಂಪರ್ಕಕ್ಕೆ ಮಾತ್ರ ಅನ್ವಯಿಸುತ್ತದೆ. ಯಾವುದೇ ಸ್ವತ್ತಿನ ಹಕ್ಕು ಸ್ಥಾಪನೆಗೆ ಮತ್ತು ಅನಧಿಕೃತ ಕಟ್ಟಡಗಳ ಸಕ್ರಮಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.