ADVERTISEMENT

ಷರತ್ತು ಉಲ್ಲಂಘಿಸಿ ಕಾಮಗಾರಿ: ರುಜುವಾತು

ಸ್ಮಾರಕಗಳ ಪರಿಸರದಲ್ಲಿ ಬಿಟಿಪಿಎಸ್‌ ಪೈಪ್‌ಲೈನ್‌ ಕಾಮಗಾರಿ ಸ್ಥಗಿತಕ್ಕೆ ಸೂಚನೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 31 ಮಾರ್ಚ್ 2021, 20:43 IST
Last Updated 31 ಮಾರ್ಚ್ 2021, 20:43 IST
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪ ಬಿಟಿಪಿಎಸ್‌ ಕೈಗೆತ್ತಿಕೊಂಡಿರುವ ಪೈಪ್‌ಲೈನ್‌ನಿಂದಾಗಿ ಕೋಟೆ ಗೋಡೆ ಬಿದ್ದಿರುವುದು (ಸಂಗ್ರಹ ಚಿತ್ರ)
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪ ಬಿಟಿಪಿಎಸ್‌ ಕೈಗೆತ್ತಿಕೊಂಡಿರುವ ಪೈಪ್‌ಲೈನ್‌ನಿಂದಾಗಿ ಕೋಟೆ ಗೋಡೆ ಬಿದ್ದಿರುವುದು (ಸಂಗ್ರಹ ಚಿತ್ರ)   

ಹೊಸಪೇಟೆ (ವಿಜಯನಗರ): ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದಿಂದ (ಬಿಟಿಪಿಎಸ್‌) ಹಂಪಿ ಸ್ಮಾರಕಗಳ ಪರಿಸರದಲ್ಲಿ ಕೈಗೆತ್ತಿಕೊಂಡಿರುವ ನೀರಿನ ಪೈಪ್‌ಲೈನ್‌ ಕಾಮಗಾರಿಯು ಷರತ್ತು ಉಲ್ಲಂಘಿಸಿರುವುದು ತನಿಖೆಯಿಂದ ಸಾಬೀತಾಗಿದೆ.

‘ಬಿಟಿಪಿಎಸ್‌ ಕಾಮಗಾರಿಗೆ ಅಪಸ್ವರ’ ಶೀರ್ಷಿಕೆ ಅಡಿ 2020ರ ಅ.‌ 28ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.ಅದೇ ದಿನ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ನಂತರ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ತನಿಖೆಗೆ ಪುರಾತತ್ವ ತಜ್ಞರ ಸಮಿತಿ ರಚಿಸಿತ್ತು. ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ, ಬಿಟಿಪಿಎಸ್‌ ನಿಯಮ ಉಲ್ಲಂಘಿಸಿ ಕಾಮಗಾರಿ ಕೈಗೆತ್ತಿಕೊಂಡಿದೆ ಎಂದು ವರದಿ ನೀಡಿದೆ. ಅದನ್ನು ಆಧರಿಸಿ ಪ್ರಾಧಿಕಾರದ ಆಯುಕ್ತರು, ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ್ದಾರೆ.

ADVERTISEMENT

ಈ ಬಗ್ಗೆ ಬಿಟಿಪಿಎಸ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ನರೇಂದ್ರ ಕುಮಾರ ಅವರಿಗೆ ಪತ್ರ ಬರೆದು, ‘ಪುರಾತತ್ವ ಇಲಾಖೆಯ ಸ್ಮಾರಕವಾದ ಶಿವ ದೇವಾಲಯದಿಂದ 100 ಮೀಟರ್‌ ಒಳಗೆ ಕಾಮಗಾರಿ ಕೈಗೆತ್ತಿಕೊಂಡಿದ್ದೀರಿ. ತಾಲ್ಲೂಕಿನ ಕಮಲಾಪುರ–ನಲ್ಲಾಪುರ ರಸ್ತೆಯಲ್ಲಿನ ಕೋಟೆ ಗೋಡೆಗೂ ಹಾನಿಯಾಗಿದೆ’ ಎಂದು ತಿಳಿಸಿದ್ದಾರೆ.

‘ಪೆನುಗೊಂಡ ಮಹಾದ್ವಾರದ ಬಳಿಯ ಕೋಟೆ ಗೋಡೆಯ 100 ಮೀಟರ್‌ನೊಳಗೆ ಕಾಮಗಾರಿ ನಡೆಯುತ್ತಿದೆ. ಸೀತಾರಾಮ ತಾಂಡಾ ಕಡೆಗೆ ಪೈಪ್‌ಲೈನ್‌ ಅಳವಡಿಸಲು ಕೋಟೆ ಗೋಡೆ ದಾಟಿಯೇ ಹೋಗಬೇಕಾಗುತ್ತದೆ.ಷರತ್ತಿಗೆ ಒಳಪಟ್ಟು ಕಾಮಗಾರಿ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾಮಗಾರಿಗೆ ಕೊಟ್ಟಿರುವ ಅನುಮತಿ ರದ್ದುಗೊಳಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ. ನರೇಂದ್ರ ಕುಮಾರ ಅವರನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.

ಕರ್ನಾಟಕ ವಿದ್ಯುತ್‌ ನಿಗಮವೂ (ಕೆಪಿಸಿಎಲ್‌) ನಾರಾಯಣಪುರ ಜಲಾಶಯದಿಂದ ಬಿಟಿಪಿಎಸ್‌ ವರೆಗೆ ನೀರಿನ ಪೈಪ್‌ಲೈನ್‌ ಅಳವಡಿಸುತ್ತಿದೆ. ತಾಲ್ಲೂಕಿನ ಕಮಲಾಪುರ, ನಲ್ಲಾಪುರ, ಚಿನ್ನಾಪುರ ಮೂಲಕಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. ಈ ಮಾರ್ಗದಲ್ಲಿ ಸ್ಮಾರಕ, ಕೋಟೆಗಳಿವೆ. ಈಗಾಗಲೇಕಮಲಾಪುರ ಬಳಿ ನೆಲ ಅಗೆದಿರುವುದರಿಂದ ಕೋಟೆ ಗೋಡೆಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.