ADVERTISEMENT

ಅಲ್‌–ಹಿಂದ್‌ ತರಬೇತಿ ಶಿಬಿರಕ್ಕೆ ನಡೆದಿತ್ತು ಜಾಗದ ಹುಡುಕಾಟ

ಗುಂಡ್ಲುಪೇಟೆಯಲ್ಲಿ ಶಂಕಿತ ಉಗ್ರರ ಚಲನವಲನ ಪ್ರಕರಣ– ಎಸ್‌ಪಿ ಆನಂದ ಕುಮಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 19:56 IST
Last Updated 16 ಜನವರಿ 2020, 19:56 IST

ಚಾಮರಾಜನಗರ: ‘ಶಂಕಿತ ಉಗ್ರರ ತಂಡವು,ಅಲ್‌–ಹಿಂದ್‌ ಎಂಬ ಸಂಘಟನೆಯ ತರಬೇತಿ ಶಿಬಿರಕ್ಕೆ ಸೂಕ್ತ ಸ್ಥಳವನ್ನು ಹುಡುಕುವುದಕ್ಕಾಗಿ, ಪೊಲೀಸರ ವಿಚಾರಣೆ ಎದುರಿಸಿರುವ ಗುಂಡ್ಲುಪೇಟೆಯ ಇಬ್ಬರನ್ನು ಸಂಪರ್ಕಿಸಿತ್ತು’

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಶುಕ್ರವಾರ ಮಾಧ್ಯಮದವರಿಗೆ ನೀಡಿದ ಮಾಹಿತಿ ಇದು. ಸಂಘಟನೆಯ ಹಿನ್ನೆಲೆಯ ಬಗ್ಗೆ ಅವರು ಹೆಚ್ಚಿನ ವಿವರ ನೀಡಲಿಲ್ಲ.

‌‘ಜಾಗದ ಬಗ್ಗೆ ವಿಚಾರಿಸಲು ಶಂಕಿತರ ತಂಡ ಇಬ್ಬರಿಗೆ ಕರೆ ಮಾಡಿ ವಿಚಾರಿಸಿತ್ತು. ಇವರಿಗೆ ಕರೆ ಮಾಡಿದವರ ಹಿನ್ನೆಲೆ ಗೊತ್ತಿರಲಿಲ್ಲ. ವಿಚಾರಣೆ ವೇಳೆ ಅದು ಗೊತ್ತಾಗಿದೆ. ಹಾಗಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಭದ್ರತೆಯ ವಿಚಾರದಲ್ಲಿ ರಾಜಿ ಇಲ್ಲ: ‘ಗುಂಡ್ಲುಪೇಟೆಯಲ್ಲಿ ಶಂಕಿತ ಉಗ್ರರ ಚಲನವಲನದ ಬಗ್ಗೆ ಮಾಹಿತಿ ಲಭ್ಯವಾಗುತ್ತಲೇ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈಗಾಗಲೇ ಗಡಿ ಭಾಗದಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿ ಗೊಳಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ವಾಹನಗಳ ತಪಾಸಣೆ ಮಾಡುತ್ತಿದ್ದೇವೆ. ಮದರಸಾ, ಮಸೀದಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ವಿವಿಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇವೆ’ ಎಂದರು.

ಅಪರಿಚಿತ ವ್ಯಕ್ತಿಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಹಾಗೂ ಅನುಮಾನ ಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.