ADVERTISEMENT

ಈ ಶಾಲೆಯಲ್ಲಿ ಪ್ಲಾಸ್ಟಿಕ್ ಕಸವೇ ಶುಲ್ಕ!

ಅಸ್ಸಾಂನ ಡಿಸ್ಪುರದ ಅಕ್ಷರ್ ಫೋರಂ ಶಾಲೆ ವಿನೂತನ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 20:00 IST
Last Updated 5 ಜೂನ್ 2019, 20:00 IST
ಶಾಲೆಗೆ ಪ್ಲಾಸ್ಟಿಕ್ ಕಸವನ್ನು ಕೊಂಡೊಯುತ್ತಿರುವ ಚಿಣ್ಣರು
ಶಾಲೆಗೆ ಪ್ಲಾಸ್ಟಿಕ್ ಕಸವನ್ನು ಕೊಂಡೊಯುತ್ತಿರುವ ಚಿಣ್ಣರು   

ಡಿಸ್ಪುರ (ಎಎಫ್‌ಪಿ):‍ಪ್ಲಾಸ್ಟಿಕ್‌ನ ಉಪದ್ರವ ತಪ್ಪಿಸಬೇಕೆಂದರೆ, ಪುನರ್ಬಳಕೆಯೊಂದೇ ದಾರಿ ಎಂದು ಸಂಶೋಧಕರೆಲ್ಲಾ ಕೈಚೆಲ್ಲಿ ಕುಳಿತಿದ್ದಾರೆ. ಪ್ಲಾಸ್ಟಿಕ್ ಪುನರ್ಬಳಕೆ ಕುರಿತು ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ.

ಈ ನಿಟ್ಟಿನಲ್ಲಿ ವಿನೂತನವಾಗಿ ಯೋಚಿಸಿರುವ ಅಸ್ಸಾಂನ ಡಿಸ್ಪುರದ ಅಕ್ಷರ್ ಫೋರಂ ಶಾಲೆ, ಪ್ಲಾಸ್ಟಿಕ್‌ ಕಸವನ್ನೇ ಶಾಲಾ ಶುಲ್ಕವಾಗಿ ಪಾವತಿಸುವ ಅವಕಾಶವನ್ನು ಪೋಷಕರಿಗೆ ನೀಡಿದೆ.ಅಷ್ಟೇ ಅಲ್ಲದೆ, ಪ್ಲಾಸ್ಟಿಕ್ ಕಸ ಸಂಗ್ರಹಿಸಿದರೆ, ಹಾಜರಾತಿ ಕಡಿಮೆ ಇರುವ ಮಕ್ಕಳಿಗೆ ವಿನಾಯಿತಿಯನ್ನೂ ನೀಡುವುದಾಗಿ ತಿಳಿಸಿದೆ.

ಡಿಸ್ಪುರದ ಹೊರವಲಯದಲ್ಲಿರುವ ಈ ಶಾಲೆಯಲ್ಲಿ ಸುಮಾರು 110 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮನೆಯಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿ, ಕನಿಷ್ಠ 20 ಪ್ಲಾಸ್ಟಿಕ್ ವಸ್ತುಗಳನ್ನು ಪ್ರತಿ ವಾರ ಶಾಲೆಗೆ ತಂದುಕೊಡುವಂತೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೂಚಿಸಿದೆ.

ADVERTISEMENT

ಈ ಸೂಚನೆಯಿಂದಾಗಿ ಮಕ್ಕಳು ತಮ್ಮ ಸುತ್ತಮುತ್ತಲಿನ ಶಾಲೆಗಳಿಗೆ ಹೋಗಿ ಪ್ಲಾಸ್ಟಿಕ್ ಕಸವನ್ನು ಕೇಳಿ ಪಡೆಯುತ್ತಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಪ್ಲಾಸ್ಟಿಕ್ ಸಮಸ್ಯೆ ಬಗ್ಗೆ ಜಾಗೃತಿ ಮೂಡುತ್ತಿದೆ.

ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್‌ ಚೀಲಗಳನ್ನು ಸಂಸ್ಕರಿಸಿ ಅದರಿಂದ ಪ್ಲಾಸ್ಟಿಕ್ ಇಟ್ಟಿಗೆಗಳನ್ನಾಗಿ ಮಾಡಿ, ಶಾಲೆಯ ಶೌಚಾಲಯ ನಿರ್ಮಾಣ, ಹೊಸ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಅಸ್ಸಾಂನ ಸರ್ಕಾರೇತರ ಸಂಸ್ಥೆ ‘ಎನ್ವಿರಾನ್‌’ ಸಮೀಕ್ಷೆ ಪ್ರಕಾರ, ಸುಮಾರು 10 ಲಕ್ಷ ಮಂದಿ ವಾಸಿಸುತ್ತಿರುವ ಡಿಸ್ಪುರದಲ್ಲಿ ನಿತ್ಯ 37 ಟನ್‌ಗಳಷ್ಟು ಕಸ ಉತ್ಪಾದನೆ ಆಗುತ್ತಿದೆ. ಸುಮಾರು 14 ವರ್ಷಗಳಲ್ಲಿ ಈ ಪ್ರಮಾಣ 7 ಪಟ್ಟು ಹೆಚ್ಚಾಗಿದೆ ಎಂದು ಸಂಸ್ಥೆ ಹೇಳಿದೆ.

ಪ್ಲಾಸ್ಟಿಕ್ ವಿಷ ಎಂದು ಗೊತ್ತಿರಲಿಲ್ಲ

ನಾವು ಕೂಡ ಪ್ಲಾಸ್ಟಿಕ್ ವಸ್ತುಗಳನ್ನು ಸುಟ್ಟಿದ್ದೇವೆ. ಇದರಿಂದ ಹೊರಡುವ ವಿಷಾನಿಲಗಳು ನಮ್ಮ ಜೀವಕ್ಕೆ ಕುತ್ತು ತರುತ್ತವೆ ಎಂಬ ಮಾಹಿತಿಯೇ ಇರಲಿಲ್ಲ. ಎಲ್ಲೆಂದರೆ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಕಿದ್ದೇವೆ. ಇನ್ನು ಮುಂದೆ ಎಂದೂ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುವುದಿಲ್ಲ

- ಮೆನುಬೊರಾ, ಶಾಲೆಯ ವಿದ್ಯಾರ್ಥಿಯ ತಾಯಿ.

***

ಪೋಷಕರಲ್ಲೂ ಜಾಗೃತಿ

‘ಅಸ್ಸಾಂ ರಾಜ್ಯದಾದ್ಯಂತ ಪ್ಲಾಸ್ಟಿಕ್ ಕಸದ ಸಮಸ್ಯೆ ಕಾಡುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಿವುದರ ಜತೆಗೆ ಸುತ್ತಮುತ್ತಲಿನ ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಿದೆವು. ಪ್ಲಾಸ್ಟಿಕ್ ಕಸವರನ್ನೇ ಶುಲ್ಕದ ರೂಪದಲ್ಲಿ ಪಡೆಯುವುದಕ್ಕೆ ಅವಕಾಶ ಕಲ್ಪಿಸಿದರೆ, ಪೋಷಕರಲ್ಲೂ ಪ್ಲಾಸ್ಟಿಕ್ ಕಸದ ಸಮಸ್ಯೆ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ, ಎಂಬ ಭಾವನೆ ನಮ್ಮದು’ ಎಂದು ಹೇಳುತ್ತಾರೆ ಈ ಯೋಜನೆ ರೂಪಿಸಿದ ಪರ್ಮಿತಾ ಶರ್ಮ.

‘ನಿಮ್ಮ ಮಗುವಿಗೆ ಉಚಿತ ಶಿಕ್ಷಣ ನೀಡಬೇಕೆಂದರೆ ಪ್ಲಾಸ್ಟಿಕ ಕಸವನ್ನು ತಂದುಕೊಡಿ ಎಂದು ವಿದ್ಯಾರ್ಥಿಗಳ ಎಲ್ಲ ಪೋಷಕರಿಗೆ ತಿಳಿಸಿದ್ದೇವೆ. ಅಲ್ಲದೇ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ವಸ್ತುಗಳನ್ನು ಸುಡಬಾರದು ಎಂಬ ಪ್ರತಿಜ್ಞೆಯನ್ನೂ ಮಾಡಿಸಿದ್ದೇವೆ’ ಎನ್ನುತ್ತಾರೆ ಪರ್ಮಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.