ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಇಂದು 92ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ನಾಯಕರು ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ನಮ್ಮ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸಿತ್ತೇನೆ ಎಂದು ಮೋದಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಗೌಡರು ತಮ್ಮ ಮುತ್ಸದ್ಧಿ ಮನೋಭಾವ ಮತ್ತು ಸಾರ್ವಜನಿಕ ಸೇವೆಯ ಬಗೆಗಿನ ಉತ್ಸಾಹಕ್ಕಾಗಿ ವ್ಯಾಪಕವಾಗಿ ಗೌರವಿಸಲ್ಪಡುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ. ಹಲವು ವಿಷಯಗಳ ಕುರಿತು ಅವರ ಬುದ್ಧಿವಂತಿಕೆ ಮತ್ತು ಒಳನೋಟಗಳು ಶಕ್ತಿಯ ಮೂಲವಾಗಿವೆ ಎಂದು ಅವರು ಹೇಳಿದ್ದಾರೆ.
ನಾಡಿನ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತಷ್ಟು ಕಾಲ ತಮಗೆ ಉತ್ತಮ ಆರೋಗ್ಯ ಮತ್ತು ಆಯಸ್ಸನ್ನು ದೇವರು ಕರುಣಿಸಲೆಂದು ಹಾರೈಸುತ್ತೇನೆ ಎಂದಿದ್ದಾರೆ. ದೇವೇಗೌಡರ ಜೊತೆಗಿನ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.
ಹಿರಿಯ ರಾಜಕೀಯ ಧುರೀಣ, ಮುತ್ಸದ್ಧಿ ನೇತಾರ, ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪೋಸ್ಟ್ ಹಂಚಿಕೊಂಡಿದ್ದಾರೆ.
1933ರ ಮೇ 18ರಂದು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಜನಿಸಿದ ದೇವೇಗೌಡರು, 1996ರ ಜೂನ್ 1ರಿಂದ 1997ರ ಏಪ್ರಿಲ್ 21ರವರೆಗೆ 11ನೇ ಪ್ರಧಾನ ಮಂತ್ರಿಯಾಗಿ ಕೆಲಸ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.